Advertisement

ಯೋಜನಾ ವರದಿಯಂತೆ ನಡೆಯದ ಕಾಮಗಾರಿ; ಸಿದ್ದರಾಮಯ್ಯ ಸೂಚನೆಗೂ ಕ್ಯಾರೆ ಎನ್ನದ ಅಧಿಕಾರಿಗಳು

05:44 PM Jun 18, 2022 | Team Udayavani |

ಬಾದಾಮಿ: ಬನಶಂಕರಿಯಿಂದ ಬಾದಾಮಿಯವರೆಗೆ ಕೈಗೊಂಡಿರುವ ರಸ್ತೆ ಸುಧಾರಣೆ ಕಾಮಗಾರಿ ಕಳಪೆಯಾಗಿದೆ. ಎರಡೂ ಬದಿಯ ಪಾದಚಾರಿ ರಸ್ತೆ ಕಿರಿದಾಗಿದೆ. ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ.ವೆಚ್ಚದ ಈ ಕಾಮಗಾರಿ ಡಿಪಿಆರ್‌ ಪ್ರಕಾರ ನಡೆಯುತ್ತಿಲ್ಲ. ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಕೂಡಲೇ ಟರ್ಮಿನೆಟ್‌ ಮಾಡಿ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಸೂಚನೆ ನೀಡಿದರೂ ಸಹಿತ ಅಧಿ ಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.

Advertisement

ಪ್ರತಿ ವರ್ಷ ನಡೆಯುವ ಬಾದಾಮಿ- ಬನಶಂಕರಿದೇವಿ ಜಾತ್ರೆಯ ವೇಳೆ ಲಕ್ಷಾಂತರ ಜನ ಭಕ್ತರು ಈ ರಸ್ತೆಯಲ್ಲಿಯೇ ಸಾಗಿ ದೇವಿಯ ದರ್ಶನ ಪಡೆಯುವುದರಿಂದ ಸುಧಾರಣೆ ಕಾಮಗಾರಿ ನಡೆಸಿರುವುದು ಸಂತಸ ತಂದಿದೆ. ಆದರೆ, ಗುಣಮಟ್ಟ ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮಂಜೂರಿಯಾಗಿರುವ ಕಾಮಗಾರಿಯಾಗಿದ್ದು, ಕಳೆದ ಬನಶಂಕರಿ ಜಾತ್ರೆಯ ಒಳಗಡೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಇಲಾಖೆಯ ಅ ಧಿಕಾರಿಗಳಿಗೆ ಸೂಚಿಸಿದ್ದರು.

ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡದ ಗುತ್ತಿಗೆದಾರರನ್ನು ಕೂಡಲೇ ಟರ್ಮಿನೇಟ್‌ ಮಾಡಿ ಎಂದು ಸಿದ್ದರಾಮಯ್ಯ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರು. ಆದರೆ, ಅಧಿ ಕಾರಿಗಳು ಮಾತ್ರ ಇಲ್ಲದೊಂದು ನೆಪ ಹೇಳಿ ಮುಂದೂಡುತ್ತಾ ಬಂದಿದ್ದಾರೆ. ಸಿದ್ದರಾಮಯ್ಯ ಬಾದಾಮಿಗೆ ಬರುವಾಗ ಮಾತ್ರ ಕಾಮಗಾರಿ ಆರಂಭಿಸುತ್ತಾರೆ. ಮರಳಿ ಬೆಂಗಳೂರಿಗೆ ಹೋದರೆ ಕೆಲಸ ಸ್ಥಗಿತಗೊಳಿಸುತ್ತಾರೆ. ಸುಮಾರು ಮೂರು ವರ್ಷಗಳಿಂದ ಕಾಮಗಾರಿ ನಡದೇ ಇದೆ. ಅಧಿ ಕಾರಿಗಳು ಮಾತ್ರ ಜಾಣ ನಿದ್ರೆಯಲ್ಲಿದ್ದಾರೆ.

ಸಿದ್ದರಾಮಯ್ಯ ಸೂಚನೆ ನೀಡಿದರೂ ಸಹಿತ ಗುತ್ತಿಗೆದಾರರನ್ನು ಟರ್ಮಿನೇಟ್‌ ಮಾಡುತ್ತಿಲ್ಲ. ಇದರಿಂದ ಅಧಿ ಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಒಳಒಪ್ಪಂದ ಇದೆ ಎಂಬ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ಪಾದಚಾರಿ ರಸ್ತೆಗೆ ಕರ್ಬಸ್ಟೋನ್‌ ಅಳವಡಿಸುತ್ತಿಲ್ಲ. ಇದರಿಂದ ವಾಹನಗಳು ಫುಟ್‌ಪಾತ್‌ ರಸ್ತೆಯ ಮೇಲೆಯೇ ಬಂದು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಸಂಬಂ ಧಿಸಿದ ಅ ಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಗಮನಹರಿಸಿ ಗುಣಮಟ್ಟದ ಕೆಲಸ ನಡೆಯುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಬನಶಂಕರಿ ದೇವಸ್ಥಾನದಿಂದ ಬಾದಾಮಿಯ ರಾಮದುರ್ಗ ಕ್ರಾಸ್‌ವರೆಗೂ ಕಾಮಗಾರಿ ಮಾಡಬೇಕಿದೆ. ಆದರೆ ಗಾತ್ರವನ್ನು ಕಡಿತಗೊಳಿಸಿ ಆರಂಭಿಸಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ 1 ಮೀಟರ್‌ ಡಾಂಬರೀಕರಣ ಮಾಡಲಾಗಿದೆ. ಆದರೆ, ಅದರಲ್ಲಿಯೂ 1 ಮೀಟರ್‌ ಪೂರ್ಣ ಕೆಲಸ ನಡೆದಿಲ್ಲ. ರಸ್ತೆಯ ಎರಡೂ ಬದಿಯಲ್ಲಿ 2.75ಮೀ ಪಾದಚಾರಿ ರಸ್ತೆ ನಿರ್ಮಿಸಬೇಕು. ಆದರೆ 2.10 ಮೀಟರ್‌ ಮಾತ್ರ ಮಾಡಲಾಗುತ್ತಿದೆ. ಸರಕಾರದಿಂದ ಬಂದ ಅನುದಾನ ಸದ್ಬಳಕೆಯಾಗಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿದೆ.

Advertisement

ಬನಶಂಕರಿಯಿಂದ ಬಾದಾಮಿವರೆಗೆ ನಡೆದಿರುವ ರಸ್ತೆ ಸುಧಾರಣೆ ಕಾಮಗಾರಿ ಡಿಪಿಆರ್‌ ಪ್ರಕಾರ ನಡೆಯುತ್ತಿಲ್ಲ. ಕರ್ಬಸ್ಟೋನ್‌ ಅಳವಡಿಸುತ್ತಿಲ್ಲ. ಡಿಪಿಆರ್‌ ಪ್ರಕಾರ ಕಾಮಗಾರಿ ಕೈಗೊಳ್ಳಬೇಕು. ಅನುದಾನ ಸದ್ಬಳಕೆಯಾಗಬೇಕು. ಕೂಡಲೇ ಜಿಲ್ಲಾ ಧಿಕಾರಿಗಳು, ಜಿಪಂ ಸಿಇಒ ಸಂಬಂ ಧಿಸಿದ ಅ ಧಿಕಾರಿಗಳು ತುರ್ತು ಗಮನಹರಿಸಿ ಡಿಪಿಆರ್‌ ನಂತೆ ಕಾಮಗಾರಿ ನಡೆಯುವಂತೆ ಕ್ರಮ ತೆಗೆದುಕೊಳ್ಳಬೇಕು.

ಬಸವರಾಜ ಹಂಪಿಹೊಳಿಮಠ, ಚೊಳಚಗುಡ್ಡದ ನಿವಾಸಿ

ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಬನಶಂಕರಿಯಿಂದ ಬಾದಾಮಿಯಿಂದ ಕೈಗೊಂಡಿರುವ ಕಾಮಗಾರಿಯ ವಸ್ತುಸ್ಥಿತಿ ಪರಿಶೀಲನೆ ಮಾಡಿ ಯೋಜನಾ ವರದಿಯಂತೆ ಕೆಲಸ ಮಾಡಲು ಗುತ್ತಿಗೆದಾರರಿಗೆ ಸೂಚಿಸುತ್ತೇನೆ.

ನಾರಾಯಣ ಕುಲಕರ್ಣಿ, ಎಇಇ ಪಿಡಬ್ಲೂಡಿ ಬಾದಾಮಿ.

ಶಶಿಧರ ವಸ್ತ್ರದ

Advertisement

Udayavani is now on Telegram. Click here to join our channel and stay updated with the latest news.

Next