ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ನಡೆಸಲು ವಿಪಕ್ಷಗಳು ಮತ್ತೆ ಅಡ್ಡಿಪಡಿಸಿವೆ. ಗುರುವಾರ ಹೆಚ್ಚಿನ ಅವಧಿ ಗದ್ದಲದಲ್ಲಿಯೇ ಮುಕ್ತಾಯವಾದ್ದರಿಂದ ಕಲಾಪಗಳನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ರಾಜ್ಯಸಭೆಯಲ್ಲಿ ನಡೆದ ಘಟನೆಯಲ್ಲಿ ಪೆಗಾಸಸ್ ವಿವಾದದ ಬಗ್ಗೆ ಹೇಳಿಕೆ ನೀಡಲು ಮುಂದಾದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ಕೈಯಲ್ಲಿದ್ದ ದಾಖಲೆಗಳನ್ನು ತೃಣಮೂಲ ಕಾಂಗ್ರೆಸ್ ಸಂಸದರು ಎಳೆದುಪಡೆದುಕೊಂಡರಲ್ಲದೆ, ಹರಿದು ಹಾಕಿದ್ದಾರೆ. ಟಿಎಂಸಿ ಸಂಸದ ಶಂತನು ಸೇನ್ ಈ ಕೃತ್ಯವೆಸಗಿದ್ದಾರೆ. ಇದಾದ ಬಳಿಕ ಕಾಂಗ್ರೆಸ್ ಮತ್ತು ಇತರ ಸಂಸದರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು.
ಕಲಾಪ ನಿರ್ವಹಿಸುತ್ತಿದ್ದ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಸದಸ್ಯರ ವರ್ತನೆಗೆ ಆಕ್ಷೇಪ ಮಾಡಿದರೂ ಲಕ್ಷಿಸ ಲಿಲ್ಲ. ಗದ್ದಲದ ನಡುವೆಯೇ ಹೇಳಿಕೆ ನೀಡಿದ ಸಚಿವ ವೈಷ್ಣವ್ ದೇಶದ ಪ್ರಜಾಪ್ರಭುತ್ವದ ವರ್ಚಸ್ಸಿಗೆ ಧಕ್ಕೆ ತರಲು ಯತ್ನ ಎಂದರು. ಇದಾದ ಬಳಿಕ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಪುರಿ ಜತೆಗೂ ಜಗಳ: ಸಚಿವ ವೈಷ್ಣವ್ ಜತೆಗೆ ಅನುಚಿತವಾಗಿ ವರ್ತಿಸಿದ ಟಿಎಂಸಿ ಸಂಸದ ಶಂತನು ಸೇನ್, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿಗೆ ನಿಂದಿಸಿದ್ದಾರೆ. ಇನ್ನೇನು ಸಚಿವರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆಯೇ ಇತರ ಸಂಸದರು ಮತ್ತು ಸಚಿವರು ಅವರನ್ನು ಪಾರು ಮಾಡಿದ್ದಾರೆ. ಪುರಿ ನನಗೆ ಬೆದರಿಕೆಯೊಡ್ಡಿದ್ದರು ಎಂದು ಅನಂತರ ಸೆನ್ ಹೇಳಿಕೊಂಡರು. ಸದನ ದಲ್ಲಿ ಅನುಚಿತವಾಗಿ ವರ್ತಿಸಿದ ಸಂಸದರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಸಭಾಪತಿಗೆ ಕೇಂದ್ರ ಮನವಿ ಸಲ್ಲಿಸಲಿದೆ.
15ರೊಳಗೆ ಏರ್ ಇಂಡಿಯಾ ಖಾಸಗೀಕರಣ :
ಏರ್ ಇಂಡಿಯಾವನ್ನು ಖಾಸಗಿಯವರಿಗೆ ಒಪ್ಪಿಸುವ ಪ್ರಕ್ರಿಯೆ ಸೆ.15ರೊಳಗೆ ನಡೆಯಲಿದೆ ಎಂದು ನಾಗರಿಕ ವಿಮಾನ ಸಚಿವ ವಿ.ಕೆ.ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ. ಎ.30ರ ಒಳಗೆ ವಿವಿಧ ದೇಶಗಳಿಂದ 60,92,264 ಮಂದಿಯನ್ನು ದೇಶಕ್ಕೆ ಸೋಂಕಿನ ಹಿನ್ನೆಲೆಯಲ್ಲಿ ಕರೆಯಿಸಿಕೊಳ್ಳಲಾಗಿದೆ. ಸೋಂಕಿನಿಂದಾಗಿ ವಿವಿಧ ದೇಶಗಳಲ್ಲಿರುವ ಭಾರತೀಯ ಮೂಲದ 3,570 ಮಂದಿ ಅಸುನೀಗಿದ್ದಾರೆ ಎಂದು ರಾಜ್ಯಸಭೆಗೆ ಕೇಂದ್ರ ಸರಕಾರ ತಿಳಿಸಿದೆ. ಇದರ ಜತೆಗೆ ಎಪ್ರಿಲ್‌ನಿಂದ ಮೇ 28ರ ವರೆಗೆ ದೇಶದಲ್ಲಿ 2ನೇ ಸೋಂಕಿನ ಅವಧಿಯಲ್ಲಿ 645 ಮಂದಿ ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆ ಎಂದು ಸರಕಾರ ಸಂಸತ್‌ಗೆ ತಿಳಿಸಿದೆ. ಈ ಪೈಕಿ ಉತ್ತರ ಪ್ರದೇಶದಲ್ಲಿ 158, ಆಂಧ್ರಪ್ರದೇಶ 119, ಮಹಾರಾಷ್ಟ್ರ 83, ಮಧ್ಯಪ್ರದೇಶದಲ್ಲಿ 73 ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆ.