Advertisement
ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ತುಲಾಭಾರ ಮಹೋತ್ಸವ ಪ್ರಯುಕ್ತ ವಿಶೇಷ ಲೈಟಿಂಗ್, ಸೆಟ್ಟಿಂಗ್ಸ್, ಎಲ್‌ಸಿಡಿ ವೀಡಿಯೋ ಗ್ರಾಫಿಕ್ಸ್ ತಂತ್ರಜ್ಞಾನದೊಂದಿಗೆ ಉಡುಪಿಯಲ್ಲಿ ಪ್ರಥಮ ಬಾರಿಗೆ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದವರಿಂದ ಪ್ರಸ್ತುತಿಗೊಂಡ “ಶ್ರೀಕೃಷ್ಣ ಸಂದರ್ಶನಂ’ ನೃತ್ಯ ರೂಪಕ ಚಿತ್ತಾಕರ್ಷಕವಾಗಿ ಮೂಡಿಬಂದಿದೆ.ಶ್ರೀ ಕೃಷ್ಣನ ಲೀಲಾಮೃತಗಳನ್ನು ಪ್ರಚುರಪಡಿಸುವ ಉದ್ದೇಶದಿಂದ “ಶ್ರೀಕೃಷ್ಣ ಸಂದರ್ಶನಂ’ ನೃತ್ಯ ರೂಪಕವನ್ನು ರಚಿಸಿ ಪ್ರಸ್ತುತಪಡಿಸಲಾಗಿದೆ. ಈ ನೃತ್ಯ ರೂಪಕದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಜನನದಿಂದ ಹಿಡಿದು ಆತನ ವಿಶ್ವರೂಪ ದರ್ಶನದ ವರೆಗೆ ಹೆಣೆದು ಪ್ರಸ್ತುತಪಡಿಸಲಾಗಿದೆ. ಮಧುರೆಯಲ್ಲಿ ಶ್ರೀ ಕೃಷ್ಣನ ಹುಟ್ಟು, ಶ್ರೀಕೃಷ್ಣನನ್ನು ಮಧುರೆಯಿಂದ ನಂದಗೋಕುಲಕ್ಕೆ ಕರೆದುಕೊಂಡು ಬರುವುದು, ಶ್ರೀಕೃಷ್ಣ ಬಾಲಲೀಲೆ, ಪೂತನಿ ಮೋಕ್ಷ, ಅಗಾಸುರ, ಬಕಾಸುರ, ತೃಣಾಬರ್ತಾ, ಶಕಟಾಸುರ ವಧೆ, ಕಾಳಿಂಗ ಮರ್ದನ, ಶ್ರೀಕೃಷ್ಣ ರಾಸಲೀಲೆ, ಗೋವರ್ಧನ ಗಿರಿ ಎತ್ತುವುದು, ಅಕ್ರೂರನಿಗೆ ದರ್ಶನ, ಚಾಣೂರ, ಮುಷ್ಟಿಕಾದಿ ರಾಕ್ಷಸರ ವಧೆ, ಕಂಸ ವಧೆ, ರುಕ್ಮಿಣಿ, ಸತ್ಯಭಾಮೆ, ಸಣ್ಮಹಿಷಿಯರೊಂದಿಗೆ ವಿವಾಹ, ಪಾರಿಜಾತ ವೃಕ್ಷದ ಕಥೆ, ಶ್ರೀಕೃಷ್ಣ ತುಲಾಭಾರ, ವಾದಿರಾಜರು ಬರೆದಿರುವಂತೆ ಉಡುಪಿಗೆ ಕೃಷ್ಣನ ವಿಗ್ರಹ ಬಂದ ಬಗೆ, ಮಧ್ವಾಚಾರ್ಯರಿಗೆ ಗೋಪಿಚಂದನದ ಉಂಡೆಯಲ್ಲಿ ಕೃಷ್ಣ ವಿಗ್ರಹ ಗೋಚರ, ಉಡುಪಿಯಲ್ಲಿ ಕೃಷ್ಣ ವಿಗ್ರಹದ ಪ್ರತಿಷ್ಠಾಪನೆ, ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ, ಪರ್ಯಾಯ ಪದ್ಧತಿಯಂತೆ ಪೂಜಾ ಕೈಂಕರ್ಯ ಹಾಗೂ ವಿಶ್ವರೂಪ ದರ್ಶನದೊಂದಿಗೆ ವಿಶಿಷ್ಟ ವೀಡಿಯೋ ಗ್ರಾಫಿಕ್ಸ್ ಮತ್ತು ಲೈಟಿಂಗ್ಸ್‌ಗಳೊಂದಿಗೆ ಸೃಷ್ಟಿ ಕಲಾಕುಟೀರದ ಚೌಷಷ್ಠಿ (64) ಕಲಾವಿದರಿಂದ ಪ್ರಸ್ತುತಿಗೊಂಡಿತು.
ನೃತ್ಯ ರೂಪಕಕ್ಕೆ ಕಥೆ ಮತ್ತು ಸಂಭಾಷಣೆಯಲ್ಲಿ ಡಾ| ಕೊರ್ಲಹಳ್ಳಿ ವೆಂಕಟೇಶ್ ಆಚಾರ್ಯ, ಸಾಹಿತ್ಯ ಕರ್ನಾಟಕ ಹರಿದಾಸರು, ರಾಗ ಸಂಯೋಜನೆ, ಚಿತ್ರಕತೆ, ನಿರ್ದೇಶನ ಹಾಗೂ ಸಂಗೀತ ನಿರ್ದೇಶನ ಡಾ| ವಿ|ಮಂಜರಿ ಚಂದ್ರ, ಧ್ವನಿಮುದ್ರಿತ ಹಿನ್ನೆಲೆ ಸಂಗೀತಕ್ಕೆ ಸಂಗೀತಾ ಬಾಲಚಂದ್ರ, ಅರುಣ್ ನಾಯಕ್ ಆತ್ರಾಡಿ ಅವರ ಹಾಡುಗಾರಿಕೆ, ಕಲಾಶ್ರೀ ಡಾ| ಹನುಮಂತರಾಜು ಮೈಸೂರು ಅವರ ಮೃದಂಗ, ನಿತೀಶ್ ಅಮ್ಮಣ್ಣಾಯರ ಕೊಳಲು ವಾದನ, ವಾಮನ್ ಕಾರ್ಕಳ ಅವರ ರಿದಂ ಪ್ಯಾಡ್ ಸಹಕರಿಸಿದ್ದರು. ಸಪ್ತ ಕೃಷ್ಣರ ಸಮಾಗಮ
ನೃತ್ಯ ರೂಪಕದ ಬಹು ವಿಶೇಷತೆ ಎಂಬಂತೆ ಸಪ್ತ ಶ್ರೀಕೃಷ್ಣರಾಗಿ ಉಡುಪಿಯ ಸೃಷ್ಟಿ ನೃತ್ಯ ಕಲಾಕುಟೀರ ನಿರ್ದೇಶಕಿ ವಿದುಷಿ ಡಾ| ಮಂಜರಿ ಚಂದ್ರ, ಹರ್ಷ್, ಲಹರಿ, ಸ್ಮೆರಾ, ಹಿತಾ ಮಯ್ಯ, ಜಾನಕಿ, ಪನ್ನಗ ಅವರಿಂದ ಶ್ರೀಕೃಷ್ಣ, ಸಂಸ್ಥೆಯ ಹಿರಿಯ ಕಲಾವಿದೆಯರಾದ ವಿ| ಅಕ್ಷತಾ ಪವನ್‌ರಿಂದ ಸತ್ಯಭಾಮೆ, ವಿ| ಸ್ಮತಿ ರಾವ್ ಅವರಿಂದ ರುಕ್ಮಿಣಿ, ವಿ| ಅನನ್ಯಾ ಸಂದೀಪ್‌ರಿಂದ ದೇವಕಿ, ಕ್ಷಮಾ ರಾಕೇಶ್‌ರಿಂದ ಯಶೋಧೆ, ಮೇದಿನಿ ಆಚಾರ್ಯರಿಂದ ಕಂಸ, ಸುಮನಾ ಕಾರ್ತಿಕ್‌ರಿಂದ ಮುಷ್ಟಿಕ, ಶಿಶುಪಾಲ, ವಿ| ಜಿತೇಶ್ ಬಂಗೇರರಿಂದ ಅರ್ಜುನ, ಅನ್ವಿತಾರಿಂದ ವಸುದೇವ ಪಾತ್ರ ನಿರ್ವಹಿಸಲ್ಪಟ್ಟು ಸುಮಾರು ಒಂದುವರೆ ಗಂಟೆಗಳ ಕಾಲ ನೃತ್ಯ ರೂಪಕವು ವಿಶೇಷವಾಗಿ ಮೂಡಿ ಬಂದಿದೆ.
Related Articles
Advertisement