Advertisement

ದುಶ್ಚಟಗಳಿಂದ ಸಮಾಜದ ಸ್ವಾಸ್ಥ್ಯ ಹಾಳು: ಅರುಣ್‌ ಭಗವಾನ್‌

09:33 PM Oct 26, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವ ಪೀಳಿಗೆಯು ಮೋಜು, ಮಸ್ತಿಗಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧಕ್ಕೆ ಆಗುತ್ತಿದೆ ಎಂದು ಶ್ರೀ ಸತ್ಯಜ್ಞಾನ ಸಿದ್ಧಾಶ್ರಮದ ಶ್ರೀ ಅರುಣ್‌ ಭಗವಾನ್‌ ತಿಳಿಸಿದರು.

Advertisement

ತಾಲೂಕಿನ ಮಾರಗಾನಹಳ್ಳಿ ಗ್ರಾಮದ ಚನ್ನಕೇಶವಸ್ವಾಮಿ ಸಮುದಾಯ ಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ 1,421 ನೇ ಮದ್ಯ ವರ್ಜನ ಶಿಬಿರ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೆಮ್ಮದಿಯ ಬದುಕು: ಮನುಷ್ಯ ಕೆಟ್ಟ ಚಟಗಳಿಂದ ದೂರವಾದರೆ ಮಾತ್ರ ಉತ್ತಮ ಆರೋಗ್ಯದೊಂದಿಗೆ ಸುಖೀ ಸಂಸಾರಿಯಾಗಿ ಬಾಳಲು ಸಾಧ್ಯ. ಇಡೀ ಕುಟುಂಬ ನೆಮ್ಮದಿಯಿಂದ ಇರಬಹುದು. ಮನುಷ್ಯನ ದುಶ್ಚಟಗಳನ್ನು ದೂರ ಮಾಡುವ ಉದ್ದೇಶದಿಂದ ಕ್ಷೇತ್ರ ಧರ್ಮಸ್ಥಳ ಇಂತಹ ಶಿಬಿರಗಳನ್ನು ಏರ್ಪಡಿಸಿರುವುದು ನೂರಾರು ಕುಟುಂಬಗಳಿಗೆ ನೆಮ್ಮದಿಯ ಬದುಕು ರೂಪಿಸುತ್ತಿದೆ ಎಂದರು.

ಕುಡಿತದಿಂದ ಮನುಷ್ಯ ಮಾನಸಿಕ, ಶಾರೀರಕ ಹಾಗೂ ಸಾಮಾಜಿಕ ಸ್ಥಿತಿ ಹಾಳು ಮಾಡಿಕೊಂಡಿರುತ್ತಾನೆ. ಹಾಗಾಗಿ ಕುಡಿತದ ಚಟ ತ್ಯಜಿಸಿದವರು ನೆಮ್ಮದಿ ಜೀವನ ನಡೆಸಿ ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದು ಮತ್ತೂಬ್ಬರಿಗೆ ಮಾದರಿಯಾಗಬೇಕು ಎಂದರು.

ಯೋಗ, ಧ್ಯಾನ ಮಾಡಿ: ಕುಡಿತದ ಚಟಕ್ಕೆ ಅಂಟಿಕೊಂಡರೆ ಕುಟುಂಬದ ನೆಮ್ಮದಿ ಜೊತೆಗೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕುಡಿತ ಚಟದ ಬದಲಿಗೆ ಯೋಗ, ಧ್ಯಾನ, ಪುಸ್ತಕ ಓದುವ ಹವ್ಯಾಸವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

Advertisement

ಶಿಬಿರಗಳಿಂದ ಸಂಸ್ಕಾರ: ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಯಲುವಹಳ್ಳಿ ಎನ್‌.ರಮೇಶ್‌ ಮಾತನಾಡಿ, ಕುಡಿತದ ಹವ್ಯಾಸ ಹೊಂದಿರುವವರು ಕುಡಿತ ಬಿಟ್ಟು ಹೊಸ ಜೀವನ ನಡೆಸುವುದರ ಮೂಲಕ ಎಲ್ಲರೊಂದಿಗೆ ಕೂಡಿ ಬಾಳುವಂತರಾಗಬೇಕು. ಪ್ರತಿಯೊಬ್ಬರಿಗೂ ಸಂಸ್ಕಾರ ಕೊಡುವ ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿ. ಕುಡಿತದ ಚಟ ಕೇವಲ ಸಂಸಾರಗಳನ್ನಷ್ಟೇ ಅಲ್ಲದೇ ಸಮಾಜವನ್ನು ಕೂಡ ಹಾಳು ಮಾಡುತ್ತಿದೆ ಎಂದರು.

ಸ್ವಾಸ್ಥ್ಯ ಸಮಾಜಿ ನಿರ್ಮಿಸಿ: ಮದ್ಯ ವರ್ಜನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಚನ್ನಕೃಷ್ಣಪ್ಪ ಮಾತನಾಡಿ, ಒಬ್ಬ ವ್ಯಕ್ತಿಯನ್ನು ಕುಡಿತದಿಂದ ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಶ್ರೇಷ್ಠ ಮತ್ತು ಪುಣ್ಯ ಕಾರ್ಯವನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್‌ ಮಾಡುತ್ತಿದೆ. ಇಂತಹ ಹಲವು ಶಿಬಿರಗಳನ್ನು ಹಲವು ಸಂಸ್ಥೆಗಳು ಮಾಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

ಶಿಬಿರದಲ್ಲಿ ವಿಶೇಷಚೇತನರಿಗೆ ಉಪಯುಕ್ತ ಸಲಕರಣೆಗಳನ್ನು ವಿತರಿಸಲಾಯಿತು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಿ.ವಸಂತ್‌, ಯೋಜನಾಧಿಕಾರಿ ಎಚ್‌.ಮಹೇಶ್‌, ಮುಖಂಡರಾದ ಸಂದೀಪ್‌ರೆಡ್ಡಿ, ಎಂ.ರಾಜಣ್ಣ, ರಾಮಕೃಷ್ಣರೆಡ್ಡಿ, ಉಮೇಶ್‌, ಅಭಿಲಾಷ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next