ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಕೋವಿಡ್ ಸೋಂಕು ತಡೆಗಟ್ಟಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾರಾಂತ್ಯದ ಕರ್ಫ್ಯೂ ಘೋಷಿಸಿದ ಬೆನ್ನಲ್ಲೇ ಮುಂಬರುವ ಹತ್ತು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಜಾರಿಗೊಳಿಸುವಂತೆ ಸಿಎಐಟಿ(ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್) ಆಪ್ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್
ಕೋವಿಡ್ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಮುಂಬರುವ ಹತ್ತು ದಿನಗಳ ಕಾಲ ರಾಜಧಾನಿಯಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಜಾರಿಗೊಳಿಸಬೇಕಾಗಿದೆ ಎಂದು ದೆಹಲಿ ವರ್ತಕರ ಸಂಘಟನೆ ಆಗ್ರಹಿಸಿದೆ.
ಕ್ಷಿಪ್ರವಾಗಿ ಹರಡುತ್ತಿರುವ ಕೋವಿಡ್ ಸೋಂಕು ತಡೆಗಟ್ಟಲು ಸೂಕ್ತ ಕಾಲದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕನಿಷ್ಠ ಹತ್ತು ದಿನಗಳ ಕಾಲವಾದರೂ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವ ಮೂಲಕ ಸೋಂಕು ತಡೆಗಟ್ಟಲು ಮುಂದಾಗಬೇಕಾಗಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೇಲ್ ವಾಲ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳನ್ನು ಖರೀದಿಸುವ ವ್ಯಕ್ತಿಗಳಿಗೆ ಇ-ಪಾಸ್ ವಿತರಿಸಬೇಕು ಎಂದು ಸಿಎಐಟಿ ಸಲಹೆ ನೀಡಿದೆ. ಅಲ್ಲದೇ ಸರ್ಕಾರದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಹೇಳಿರುವ ಟ್ರೇಡರ್ಸ್ ಸಂಘಟನೆ, ಅಗತ್ಯ ವಸ್ತುಗಳನ್ನು ಯಾವುದೇ ಸಮಸ್ಯೆಯಾಗದಂತೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದೆ.