ವಿಟ್ಲ: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿದಿದ್ದು, ರೈತರು ಆತಂಕಗೊಂಡಿದ್ದಾರೆ. ಕೇಂದ್ರ ಸರಕಾರದ ಕಡಿವಾಣವಿಲ್ಲದಿರುವುದರಿಂದ ಬರ್ಮಾ ಮತ್ತಿತರ ದೇಶಗಳಿಂದ ಕಡಿಮೆ ಬೆಲೆಗೆ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಕೇಂದ್ರ ಸರಕಾರದ ಇಬ್ಬಗೆಯ ನೀತಿಯಾಗಿದೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಆರೋಪಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಮದು ಮಾಡಿದ ಅಡಿಕೆ ಕೆ.ಜಿ.ಗೆ 145 ರೂ.ಗಳಿಗೆ ಇಲ್ಲಿನ ವ್ಯಾಪಾರಿಗಳಿಗೆ ದೊರೆಯುತ್ತಿದೆ. ಇದನ್ನು ಸಂಸ್ಕರಿಸಿ, ಸ್ಥಳೀಯ ಅಡಿಕೆ ಜತೆ ಬೆರೆಸಿ, ಇತರ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಕಳಪೆ ಗುಣಮಟ್ಟದ ಈ ಅಡಿಕೆಯ ಮಾನ ಮತ್ತು ಬೆಲೆ ಮಾರುಕಟ್ಟೆಯಲ್ಲಿ ಕುಸಿಯುತ್ತದೆ. ರೈತರ ಜೀವನದಲ್ಲಿ ಚೆಲ್ಲಾಟವಾಡುವ ಕೇಂದ್ರ ಸರಕಾರ ಮತ್ತು ಜಾಣ ಕುರುಡು ಪ್ರದರ್ಶಿಸುತ್ತಿರುವ ಸಂಸದರ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಇತ್ತೀಚೆಗೆ ಬರ್ಮಾ ಅಡಿಕೆಯನ್ನು ಕೋಲ್ಕತ್ತಾ ಮೂಲಕ ಪುತ್ತೂರಿಗೆ ಆಮದು ಮಾಡಲಾಗುತ್ತಿತ್ತು. ಆ ಲಾರಿ ಬಗ್ಗೆ ಸಂಶಯ ಉಂಟಾಗಿ ಪರೀಕ್ಷಿಸುವ ಸಂದರ್ಭ ಅದು ಬರ್ಮಾ ಅಡಿಕೆಯೆಂದು ಬಯಲಾಯಿತು. 20 ಟನ್ ಅಡಿಕೆ ತುಂಬಿಕೊಂಡು ಈ ಲಾರಿ ಪುತ್ತೂರಿಗೆ ಬಂದಿತ್ತು. ಇದೇ ರೀತಿ ವಾರಕ್ಕೆ ಮೂರು ಬಾರಿ ಒಂದು ಅಡಿಕೆ ಗಾರ್ಬಲ್‌ಗೆ ಆಗಮಿಸುವ ಮಾಹಿತಿಯೂ ಸಿಕ್ಕಿತು. ಕರಾವಳಿಗೆ ಅಡಿಕೆ ಆಮದಾಗುವುದನ್ನು ನಿಷೇಧಿಸದಿದ್ದಲ್ಲಿ ರೈತರು ಸಂಕಷ್ಟಕ್ಕೀಡಾಗುವುದು ಖಚಿತ ಎಂದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕಾಧ್ಯಕ್ಷ ಉಮಾನಾಥ ಶೆಟ್ಟಿ ಮಾತನಾಡಿ, ಬಿಜೆಪಿ ಸರಕಾರ ಅಡಿಕೆಯನ್ನು ಆಮದು ಮಾಡುತ್ತಿದೆ. ಬೆಳೆಗಾರರಿಗೆ 325ರಿಂದ 350 ರೂ. ಕೆ.ಜಿ.ಗೆ ಸಿಗಬೇಕಿತ್ತು. ಆಮದಾಗುತ್ತಿರುವುದರಿಂದ ಅದು ರೂ. 225ಕ್ಕೆ ಕುಸಿದಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತರ ಜೀವನಾಧಾರ ಬೆಳೆಗೇ ಕೊಡಲಿಯೇಟು ನೀಡಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿ, ವಿಜಯ ಬ್ಯಾಂಕ್ ವಿಲೀನವನ್ನು ಯುಪಿಎ ಸರಕಾರ ಮಾಡಿದ್ದು ಎನ್ನುವ ನಳಿನ್ ಆಗ ಅವರೇ ಸಂಸದರಾಗಿದ್ದು, ವಿರೋಧಿಸಬಹುದಿತ್ತು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಅವರು ನಳಿನ್‌ಗೆ ಬಹಿರಂಗ ಸವಾಲು ಹಾಕಿದ್ದರೂ ಅದಕ್ಕೆ ಉತ್ತರಿಸಿಲ್ಲ. 10 ವರ್ಷಗಳಲ್ಲಿ 50 ಕೋಟಿ ರೂ. ಶಾಸನಬದ್ಧ ಅನುದಾನ ಸಂಸದರಿಗೆ ಬರುತ್ತದೆ. ಕನ್ಯಾನ, ವಿಟ್ಲ, ಕೊಳ್ನಾಡು, ಕೇಪು, ಪೆರುವಾಯಿ ಇತ್ಯಾದಿ ಗ್ರಾಮಗಳಿಗೆ ಇವರ ಅನುದಾನ ತಲುಪಲೇ ಇಲ್ಲ. ಅದಕ್ಕಾಗಿ ಈ ಬಾರಿ ವಿದ್ಯಾವಂತ ಯುವಕ ಮಿಥುನ್ ರೈ ಅವರನ್ನು ಕಾಂಗ್ರೆಸ್‌ನ ಅಭ್ಯರ್ಥಿಯಾಗಿಸಿದೆ. ಅವರು ಬಹುಮತದಿಂದ ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.