ಹೊಸದಿಲ್ಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುವುದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂದು ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯಲಿದ್ದು, ಸ್ಥಳೀಯ ನಾಯಕತ್ವ ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ ಸೇರಿದಂತೆ 14 ಜನ ರಾಜ್ಯ ನಾಯಕರು ದಿಲ್ಲಿಗೆ ತೆರಳಲಿದ್ದು, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೆವಾಲಾ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ನಲ್ಲಿ ಒಂದಿಷ್ಟು ಸಕಾರಾತ್ಮಕ ವಿಚಾರಗಳು ಚಿಗುರಿದೆ. ಎಲ್ಲಿ ಸ್ಥಳೀಯ ನಾಯಕತ್ವ ಗಟ್ಟಿ ಇದೆಯೋ, ಅಲ್ಲಿ ಕಾಂಗ್ರೆಸ್ ಹೆದರಬೇಕಾದ ಅಗತ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ಹೀಗಾಗಿ ಗುಜರಾತ್ ಫಲಿತಾಂಶ ಆಧರಿಸಿ ಕಾರ್ಯಕರ್ತರು ಹಾಗೂ ಮುಖಂಡರು ಜಂಘಾಬಲ ಉಡುಗಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಇದನ್ನೂ ಓದಿ:ಹೆಚ್ಚಿದ ಪ್ರಯಾಣಿಕರ ದೂರು..: ದಿಲ್ಲಿ ಏರ್ಪೋರ್ಟ್ ಗೆ ಸಚಿವ ಸಿಂಧಿಯಾ ದಿಢೀರ್ ಭೇಟಿ
ಗುಜರಾತ್ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ತವರು ರಾಜ್ಯ. ಇಲ್ಲಿ ಕಾಂಗ್ರೆಸ್ ಗೆ ಅಸ್ಥಿತ್ವವೇ ಇರಲಿಲ್ಲ. ಹೀಗಾಗಿ ಗುಜರಾತ್ ಫಲಿತಾಂಶದ ಆಧಾರದಲ್ಲಿ ರಾಜ್ಯ ರಾಜಕಾರಣವನ್ನು ನೋಡಬೇಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಸ್ಥಳೀಯ ನಾಯಕತ್ವ ಬಲವರ್ಧನೆಗೆ ಈ ಸಭೆಯಲ್ಲಿ ಹೆಚ್ಚೆಚ್ಚು ಚರ್ಚೆಯಾಗುವ ಸಾಧ್ಯತೆ ಇದೆ.
ಒಂದು ಮೂಲದ ಪ್ರಕಾರ ನಿಗದಿತ ಸಮಯಕ್ಕಿಂತ ಒಂದೂವರೆ ತಿಂಗಳು ಮುಂಚಿತವಾಗಿ ಚುನಾವಣೆ ನಡೆಯಬಹುದೆಂಬ ವಾದವಿದೆ. ಹೀಗಾಗಿ ಈ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.