ನವದೆಹಲಿ:ಮೂರು ಅಪರಾಧಗಳನ್ನು “ಕ್ರಿಮಿನಲ್ ಅಪರಾಧ ಪಟ್ಟಿ’ಯಿಂದ ಹೊರಗಿಡುವುದು, ತೆರಿಗೆ ಕಾನೂನಿನಡಿ ವಿಚಾರಣೆಗೆ ಒಳಪಡುವ ವಂಚನೆಯ ಮೊತ್ತದ ಮಿತಿಯನ್ನು 2 ಕೋಟಿ ರೂ.ಗೆ ಏರಿಸುವುದು, ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ಇಳಿಕೆ…
ಇವು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶನಿವಾರ ನಡೆದ 48ನೇ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಭೆಯಲ್ಲಿ ಕೈಗೊಂಡ ನಿರ್ಧಾರಗಳು.
ಶನಿವಾರದ ಸಭೆಯಲ್ಲಿ ಯಾವುದೇ ಸರಕು ಅಥವಾ ಸೇವೆಯ ತೆರಿಗೆಯನ್ನು ಹೆಚ್ಚಳ ಮಾಡಿಲ್ಲ. ಆದರೆ, ಬೇಳೆಕಾಳುಗಳ ಸಿಪ್ಪೆಯ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕಲಾಗಿದೆ. ಇಥೈಲ್ ಆಲ್ಕೋಹಾಲ್ ಮೇಲಿನ ಜಿಎಸ್‌ಟಿಯನ್ನು ಶೇ.5ರ ಸ್ಲ್ಯಾಬ್ ಗೆ ಇಳಿಸಲಾಗಿದೆ.
ಎಸ್‌ಯುವಿಗಳು, 1500ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಎಂಜಿನ್ ಹೊಂದಿರುವಂಥವುಗಳು, 4 ಸಾವಿರ ಎಂಎಂಗಿಂತ ಉದ್ದನೆಯ ವಾಹನಗಳು ಮತ್ತು 160 ಎಂ.ಎಂ. ಮತ್ತು ಅದಕ್ಕಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಇರುವ ಕಾರುಗಳಿಗೆ ಶೇ.22ರ ಪರಿಹಾರ ಸೆಸ್ ಅನ್ವಯವಾಗಲಿದೆ.
ಇದೇ ವೇಳೆ, ಈವರೆಗೆ ತೆರಿಗೆ ವಂಚನೆ ಮೊತ್ತ 1 ಕೋಟಿ ರೂ. ದಾಟಿದರೆ ಮಾತ್ರವೇ ಜಿಎಸ್‌ಟಿ ಕಾಯ್ದೆಯಡಿ ಆ ವ್ಯಕ್ತಿಯ ವಿರುದ್ಧ ತನಿಖೆ ನಡೆಸಲಾಗುತ್ತಿತ್ತು. ಈ 1 ಕೋಟಿ ರೂ.ಗಳ ಮಿತಿಯನ್ನು ಈಗ 2 ಕೋಟಿ ರೂ.ಗಳಿಗೆ ಏರಿಸಲಾಗಿದೆ. ಆದರೆ, ಇದು ಸರಕು, ಸೇವೆಗಳ ಪೂರೈಕೆಯಾಗದಿದ್ದರೂ ಇನ್‌ವಾಯ್ಸ ವಿತರಣೆ ಮಾಡುವಂತಹ ಅಪರಾಧಗಳಿಗೆ ಅನ್ವಯವಾಗುವುದಿಲ್ಲ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ತೆರಿಗೆಯಲ್ಲಿ ಬದಲಾವಣೆ
ಮಹತ್ವದ ತೀರ್ಮಾನವೆಂಬಂತೆ, ಬೇಳೆಕಾಳುಗಳ ಸಿಪ್ಪೆಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈವರೆಗೆ ಇಂಥ ಸಿಪ್ಪೆಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಶನಿವಾರದ ಸಭೆಯಲ್ಲಿ ಇದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಹಾಗಾಗಿ, ಇನ್ನು ಮುಂದೆ ಧಾನ್ಯಗಳ ಸಿಪ್ಪೆಗಳಿಗೆ ತೆರಿಗೆ ಇರುವುದಿಲ್ಲ. ಇದೇ ವೇಳೆ, ಪೆಟ್ರೋಲ್(ಮೋಟಾರ್ ಸ್ಪಿರಿಟ್)ನೊಂದಿಗೆ ಸಮ್ಮಿಳಿತಗೊಳಿಸಲು ತೈಲ ಶುದ್ಧೀಕರಣ ಘಟಕಗಳಿಗೆ ಸರಬರಾಜು ಮಾಡಲಾಗುವ ಇಥೈಲ್ ಆಲ್ಕೋಹಾಲ್ ಮೇಲಿನ ಜಿಎಸ್‌ಟಿಯನ್ನು ಈವರೆಗಿದ್ದ ಶೇ.18ರಿಂದ ಶೇ.5ಕ್ಕೆ ಇಳಿಸಲಾಗಿದೆ.
ಯಾವುದು ಇನ್ನು ಕ್ರಿಮಿನಲ್ ಅಪರಾಧವಲ್ಲ?
1. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು
2. ಭೌತಿಕ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ತಿರುಚುವುದು
3. ಮಾಹಿತಿ ಒದಗಿಸುವಲ್ಲಿ ವಿಫಲರಾಗುವುದು