Advertisement

‘ಚೀಟಿ’ತಿದ್ದುಪಡಿಗೆ ಅಸ್ತು: ಚೀಟಿ ವ್ಯವಹಾರಕ್ಕೆ ಗೌರವ ತರುವ ವಿಚಾರಗಳಿಗೆ ಲೋಕಸಭೆ ಒಪ್ಪಿಗೆ

09:38 AM Nov 22, 2019 | Hari Prasad |

ನವದೆಹಲಿ: ಅಧಿಕೃತ ಚೀಟಿ ವ್ಯವಹಾರಗಳಲ್ಲಿ ತೊಡಗಿಸುವ ಹಣದ ಮೊತ್ತವನ್ನು ಮೂರು ಪಟ್ಟು ಏರಿಸುವ ಹಾಗೂ ಚೀಟಿಯ ವ್ಯವಹಾರ ನಿರ್ವಹಿಸುವ ವ್ಯಕ್ತಿ ಅಥವಾ ಸಂಸ್ಥೆಗೆ ನೀಡುವ ಕಮಿಷನ್‌ ಅನ್ನು ಗರಿಷ್ಠ ಶೇ.7ಕ್ಕೆ ಏರಿಸುವ ಅಂಶಗಳುಳ್ಳ ‘2019ರ ಚಿಟ್‌ ಫ‌ಂಡ್‌ ತಿದ್ದುಪಡಿ ವಿಧೇಯಕ’ಕ್ಕೆ ಲೋಕಸಭೆ ಒಪ್ಪಿಗೆ ನೀಡಿದೆ.

Advertisement

ಸದನದಲ್ಲಿ ಬುಧವಾರ ವಿಧೇಯಕ ಮಂಡಿಸಿದ ಕೇಂದ್ರ ವಿತ್ತ ಇಲಾಖೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌, ‘ಹೊಸ ವಿಧೇಯಕದಲ್ಲಿ ಚೀಟಿ ವ್ಯವಹಾರದಲ್ಲಿ ತೊಡಗಿಸುವ ಮೊತ್ತವನ್ನು ‘ಸಮಾನ ಮನಸ್ಕರ ಸಮೂಹದ ನಿಧಿ’, ‘ಆವರ್ತಕ ಉಳಿತಾಯ’ ಎಂದು ಸಂಬೋಧಿಸಲಾಗಿದೆ. ಚೀಟಿ ನಡೆಸುವ ಸಂಸ್ಥೆ ಅಥವಾ ವ್ಯವಸ್ಥೆಯನ್ನು ‘ಸಾಲ ನೀಡುವ ಸಂಸ್ಥೆ’ ಎಂದು ಪರಿಗಣಿಸಲಾಗಿದೆ. ಈ ಮೂಲಕ, ಚೀಟಿ ವ್ಯವಹಾರಕ್ಕೆ ಸಮಾಜದಲ್ಲಿ ಒಂದು ಗೌರವದ ಸ್ಥಾನಮಾನ ತಂದುಕೊಡಲು ಪ್ರಯತ್ನಿಸಲಾಗಿದೆ’ ಎಂದು ತಿಳಿಸಿದರು.

ಇದೇ ವೇಳೆ, ‘ಚೀಟಿ ವ್ಯವಹಾರಗಳು ಕಾನೂನು ಬದ್ಧ ವ್ಯವಹಾರಗಳಾಗಿವೆ. ಆದರೆ, ಜನರು ಇವನ್ನು ಅನಿಯಂತ್ರಿತ ಠೇವಣಿ ವ್ಯವಹಾರಗಳು ಹಾಗೂ ಮೋಸದ ಯೋಜನೆಗಳ ಜತೆಗೆ ಹೋಲಿಸಿಕೊಂಡು ಗೊಂದಲ ಮಾಡಿಕೊಳ್ಳಬಾರದು’ ಎಂದು ಎಚ್ಚರಿಸಿದರು.

ಕಾಶ್ಮೀರದಲ್ಲಿ ಸಂಪೂರ್ಣ ಸಹಜತೆ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಬಳಿಕ ರಾಜ್ಯವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿದೆ. ಶಾಲೆ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಗೆ ತಿಳಿಸಿದ್ದಾರೆ. ಸ್ಥಳೀಯಾಡಳಿತವು ಯಾವಾಗ ಇಂಟರ್ನೆಟ್‌ ಸಂಪರ್ಕವನ್ನು ಕಲ್ಪಿಸಬಹುದು ಎಂದು ಭಾವಿಸುತ್ತದೋ, ಆಗ ಸಂಪರ್ಕ ಪುನಾರಂಭವಾಗಲಿದೆ ಎಂದೂ ಅವರು ತಿಳಿಸಿದ್ದಾರೆ. ಇದೇ ವೇಳೆ, ಆ.5ರಿಂದ ಈವರೆಗೆ ಕಣಿವೆ ರಾಜ್ಯದಲ್ಲಿ ಪೊಲೀಸರ ಗುಂಡಿಗೆ ಒಬ್ಬನೇ ಒಬ್ಬ ವ್ಯಕ್ತಿಯೂ ಬಲಿಯಾಗಿಲ್ಲ. 370ನೇ ವಿಧಿ ರದ್ದಾದರೆ ರಾಜ್ಯದಲ್ಲಿ ರಕ್ತಪಾತವಾಗುತ್ತದೆ ಎಂಬ ಕೆಲವರ ಹೇಳಿಕೆಗಳು ಈ ಮೂಲಕ ಸುಳ್ಳಾಗಿವೆ ಎಂದೂ ಶಾ ಹೇಳಿದ್ದಾರೆ.

7 ವಿದೇಶ ಪ್ರವಾಸ: ಪ್ರಸಕ್ತ ವರ್ಷದ ಆಗಸ್ಟ್‌ನಿಂದ ನವೆಂಬರ್‌ವರೆಗೆ ಪ್ರಧಾನಿ ಮೋದಿ ಒಟ್ಟು 7 ವಿದೇಶ ಪ್ರವಾಸ ಕೈಗೊಂಡಿದ್ದು, ಒಟ್ಟು 9 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದೆ.

Advertisement

ತಿದ್ದುಪಡಿಗೆ ಸಲಹೆ: ಬಾಡಿಗೆ ತಾಯ್ತನ(ನಿಬಂಧನೆ) ವಿಧೇಯಕ 2019ರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವಂತೆ ರಾಜ್ಯಸಭೆ ಸದಸ್ಯರು ಆಗ್ರಹಿಸಿದ್ದಾರೆ. ಈ ವಿಧೇಯಕಕ್ಕೆ ಪಕ್ಷಭೇದ ಮರೆತು ಬಹುತೇಕ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಆದರೂ, ಗರ್ಭಪಾತಕ್ಕಿರುವ ಕಾಲಾವಧಿ, ವಯಸ್ಸಿನ ಮಿತಿ, ಪೂರ್ವ ಸಮ್ಮತಿ, ಮದುವೆಯಾಗಿ 5 ವರ್ಷಗಳಾಗಿರಬೇಕು ಎಂಬಿತ್ಯಾದಿ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಆಧಾರ್‌ಗೆ ಲಿಂಕ್‌ ಇಲ್ಲ
ಜನರ ಸಾಮಾಜಿಕ ಜಾಲತಾಣಗಳಿಗೆ ಆಧಾರ್‌ ಲಿಂಕ್‌ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ರವಿಶಂಕರ್‌ ಪ್ರಸಾದ್‌ ಬುಧವಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್‌ ಅನ್ನು ಆದಷ್ಟು ಬೇಗ ಪುನಶ್ಚೇತನಗೊಳಿಸಲಾಗುವುದು ಮತ್ತು ಲಾಭದಾಯಕ ಸಂಸ್ಥೆಯನ್ನಾಗಿ ರೂಪಿಸಲಾಗುವುದು ಎಂದೂ ಪ್ರಸಾದ್‌ ಭರವಸೆ ನೀಡಿದ್ದಾರೆ. ಈ ನಡುವೆ, ಒಂದು ದೇಶ, ಒಂದೇ ಭಾಷೆ ಎಂಬ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ನಮ್ಮ ಸಂವಿಧಾನವು ಎಲ್ಲ ಭಾಷೆಗಳಿಗೂ ಸಮಾನ ಮಹತ್ವವನ್ನು ನೀಡುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ವಿಧೇಯಕದ ಮುಖ್ಯಾಂಶ
– ವೈಯಕ್ತಿಕವಾಗಿ ನಿರ್ವಹಣೆಯಾಗುವ ಅಥವಾ ಕನಿಷ್ಠ 4 ಜನರಿರುವ ಚೀಟಿ ವ್ಯವಹಾರದಲ್ಲಿ ತೊಡಗಿಸಲ್ಪಡುವ ಚೀಟಿಯ ಮೊತ್ತ 1 ಲಕ್ಷ ರೂ.ಗಳಿಂದ 3 ಲಕ್ಷಕ್ಕೆ ಏರಿಕೆ
– ಸಂಸ್ಥೆಗಳು ಅಥವಾ ನಾಲ್ವಕ್ಕಿಂತ ಹೆಚ್ಚು ಜನರು ನಡೆಸುವ ಚೀಟಿಯ ಮೊತ್ತವನ್ನು ಗರಿಷ್ಠ 6ರಿಂದ 18 ಲಕ್ಷ ರೂ.ಗಳಿಗೆ ಏರಿಕೆ
– ಚೀಟಿ ನಿರ್ವಹಿಸುವ ವ್ಯಕ್ತಿಗೆ ನೀಡಲಾಗುವ ಕಮಿಷನ್‌ ಶೇ. 5ರಿಂದ 7ಕ್ಕೆ ಏರಿಕೆ
– ಚೀಟಿ ವ್ಯವಹಾರ ನಿರ್ವಾಹಕನಿಗೆ ಚೀಟಿ ಕಟ್ಟದ ಚಂದಾದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ
– ವಿಡಿಯೋ ಕಾನ್ಫರೆನ್ಸ್‌ ಮೂಲಕ ಚೀಟಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸದಸ್ಯರಿಗೆ ಅವಕಾಶ
– ಚೀಟಿ ಹಣ, ಡಿವಿಡೆಂಡ್‌, ಬಹುಮಾನ ಮೊತ್ತ ಪದಗಳ ಬದಲಾಗಿ ಒಟ್ಟು ಚೀಟಿ ಹಣ, ವಿನಾಯ್ತಿಯ ಹಂಚಿಕೆ ಹಾಗೂ ನೆಟ್‌ ಚಿಟ್‌ ಫ‌ಂಡ್‌ ಪದಗಳೊಂದಿಗೆ ಬಳಸಲು ಸಲಹೆ
– ಚೀಟಿ ವ್ಯವಹಾರದಲ್ಲಿ ತೊಡಗಿಸಬಹುದಾದ ಕನಿಷ್ಟ ಹಣದ ಮೊತ್ತ (100 ರೂ.) ರದ್ದು. ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ.

Advertisement

Udayavani is now on Telegram. Click here to join our channel and stay updated with the latest news.

Next