ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದಾಗಿರುವ ರಾಮಾಯಣದಲ್ಲಿ ರಾಮ ಮತ್ತು ಸೀತೆ ಹಾಗೂ ಹನುಮಂತ, ರಾವಣ ಪ್ರಮುಖರಾಗಿದ್ದರು. ಆದರೆ ಇವರೆಲ್ಲರಿಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿದ್ದ ವ್ಯಕ್ತಿ ಲಕ್ಷ್ಮಣ! ಇಡೀ ರಾಮಾಯಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾತ ಲಕ್ಷ್ಮಣ. ಯಾಕೆಂದರೆ ಲಕ್ಷ್ಮಣ ಸಹಾಯವಿಲ್ಲದೆ ರಾಮನಿಗೆ ರಾವಣನನ್ನು ಸೋಲಿಸಿ, ಸೀತೆಯನ್ನು ವಾಪಸ್ ಕರೆತರಲು ಸಾಧ್ಯವಾಗುತ್ತಿರಲಿಲ್ಲ.
ರಾಮಾಯಣ, ಮಹಾಭಾರತದಲ್ಲಿ ಹಲವಾರು ಒಳಸುಳಿ, ನೂರಾರು ಉಪಕಥೆಗಳು ಹೀಗೆ ನಾನಾ ಕುತೂಹಲಕಾರಿ ಅಂಶಗಳಿವೆ. ಆ ಹಿನ್ನೆಲೆಯಲ್ಲಿ ಲಕ್ಷ್ಮಣನಿಗೆ ಸಂಬಂಧಪಟ್ಟ ಕೆಲವು ರೋಚಕ ಸಂಗತಿಗಳು ಇಲ್ಲಿವೆ…
*ಲಕ್ಷ್ಮಣ ಕೇವಲ ಸಾಧಾರಣ ಮನುಷ್ಯನ ವ್ಯಕ್ತಿತ್ವ ಹೊಂದಿರಲಿಲ್ಲವಾಗಿತ್ತು. ನಿಜಕ್ಕೂ ಲಕ್ಷ್ಮಣ ಶೇಷನಾಗನ ಅಂಶವಾಗಿದ್ದ. ಭಗವಾನ್ ವಿಷ್ಣುವಿನ ನಿಕಟವರ್ತಿಯಾಗಿದ್ದ. ಲಕ್ಷ್ಮಣನ ನಿಷ್ಕಲ್ಮಶ ಭಕ್ತಿ ಮತ್ತು ಪ್ರೀತಿಯಿಂದಾಗಿ ರಾಮ ಐತಿಹಾಸಿಕ ವ್ಯಕ್ತಿಯಾಗಿದ್ದ.
*ಲಕ್ಷ್ಮಣ ಬಿಲ್ವಿದ್ಯೆ ಪರಿಣತನಾಗಿದ್ದ. ಕೇವಲ ಏಕಕಾಲದಲ್ಲಿಯೇ 500 ಬಾಣಗಳನ್ನು ಪ್ರಯೋಗಿಸಬಲ್ಲವನಾಗಿದ್ದನಂತೆ.
*ಅಣ್ಣ ರಾಮನ ಬಗ್ಗೆ ಆತನಿಗೆ ಅಪರಿಮಿತವಾದ ಭಕ್ತಿಭಾವ. ರಾಮ ಸೀತೆಯನ್ನು ಮದುವೆಯಾದಾಗ, ಆಕೆಯ ಸಹೋದರಿ ಎನಿಸಿಕೊಂಡಿದ್ದ ಊರ್ಮಿಳಳನ್ನು ಲಕ್ಷ್ಮಣ ವಿವಾಹವಾಗಿದ್ದ.
*ರಾಮ ಕಾಡಿಗೆ ಹೋಗಲು ಹೊರಟು ನಿಂತಾಗ ಲಕ್ಷ್ಮಣ ಕೂಡಾ ತನ್ನ ಪತ್ನಿ ಊರ್ಮಿಳಾಳನ್ನು ಬಿಟ್ಟು ರಾಮನ ಜೊತೆ ವನವಾಸಕ್ಕೆ ತೆರಳಿದ್ದ.
* ವನವಾಸದ ಸಂದರ್ಭದಲ್ಲಿ ರಾಮ ಮತ್ತು ಸೀತೆಯನ್ನು ರಕ್ಷಿಸುವ ಬಹುದೊಡ್ಡ ಹೊಣೆ ಹೊತ್ತುಕೊಂಡಿದ್ದ. ಬರೋಬ್ಬರಿ 14 ವರ್ಷಗಳ ಕಾಲ ಅಣ್ಣ, ಅತ್ತಿಗೆಯನ್ನು ದಿನಂಪ್ರತಿ ನಿಗಾವಹಿಸುವ ಮೂಲಕ ರಕ್ಷಿಸಿದ್ದ.
* ರಾಮ ಮಾಯಾಜಿಂಕೆಯ ಬೆನ್ನತ್ತಿ ಹೋದಾಗಲೂ ಲಕ್ಷ್ಮಣ ಸೀತೆಯ ರಕ್ಷಣೆಯಲ್ಲಿ ತೊಡಗಿದ್ದ. ಆದರೆ ರಾಕ್ಷಸ ಮಾರೀಚನ ಮಾಯಾ ಜಾಲದಿಂದ ಹಾಯ್ ಸೀತಾ ಎಂಬ ಆರ್ತನಾದ ಕೇಳಿ ಸೀತೆ ಕೂಡಲೇ ಅಣ್ಣನ ರಕ್ಷಣೆಗೆ ಹೊರಟುವಂತೆ ಆಜ್ಞಾಪಿಸುತ್ತಾಳೆ.
*ಇದು ಮೋಸ ಎಂದು ಹೇಳಿದಾಗ ಸೀತೆ ಆಕ್ರೋಶಗೊಂಡಿದ್ದಳು. ಆದರೆ ಅಪಾಯದ ಮುನ್ಸೂಚನೆ ಅರಿತ ಲಕ್ಷ್ಮಣ ರೇಖೆಯನ್ನು ಎಳೆದು ಅಣ್ಣನ ಹುಡುಕಾಟಕ್ಕೆ ಹೊರಟಿದ್ದ. ಆದರೆ ರಾವಣ ಬ್ರಾಹ್ಮಣ ವೇಷಧಾರಿಯಾಗಿ ಬಂದು ಸೀತೆಯನ್ನು ಅಪಹರಿಸಲು ಮುಂದಾಗಿದ್ದ.
*ಲಕ್ಷ್ಮಣ ರೇಖೆಯನ್ನು ದಾಟಲು ಸಾಧ್ಯವಾಗದಿದ್ದ ಪರಿಣಾಮ ರಾವಣ ಸೀತೆ ನಿಂತ ಜಾಗವನ್ನು ತನ್ನ ಬಾಹುಬಲದಿಂದ ಕಿತ್ತು ಅಪಹರಿಸಿಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ಅಣ್ಣನಿಗೆ ಸಮಾಧಾನ, ಧೈರ್ಯ ತುಂಬಿ ರಕ್ಷಣೆಯಲ್ಲಿ ತೊಡಗಿದ್ದ ಲಕ್ಷ್ಮಣ.
*ರಾವಣನ ಪುತ್ರ ಇಂದ್ರಜಿತ್ ನನ್ನು ಕೊಲ್ಲಲು ಸಾಧ್ಯವಿದ್ದದ್ದು ಲಕ್ಷ್ಮಣನಿಗೆ ಮಾತ್ರ! ಇಂದ್ರಜಿತ್ ಯುದ್ಧದಲ್ಲಿ ರಾಮನನ್ನೇ ಸೋಲಿಸಿಬಿಟ್ಟಿದ್ದ.
*ಒಂದು ಬಾರಿ ರಾಮ ಮತ್ತು ಯಮರಾಜ ರಹಸ್ಯ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣ ತಾನು ಗುಡಿಸಲಿನ ಕಾವಲು ಕಾಯುವುದಾಗಿ ಹೇಳಿದ್ದ. ಆದರೆ ಶೀಘ್ರಕೋಪಿ ದೂರ್ವಾಸ ಮುನಿ ಆಗಮಿಸಿ ತಾನು ಕೂಡಲೇ ರಾಮನನ್ನು ಭೇಟಿಯಾಗಬೇಕು ಎಂದು ಆಜ್ಞಾಪಿಸಿದ್ದರು.
*ದೂರ್ವಾಸ ಮುನಿಗಳ ಬೇಡಿಕೆಯನ್ನು ಲಕ್ಷ್ಮಣ ತಿರಸ್ಕರಿಸಿಬಿಟ್ಟಿದ್ದ. ಆದರೆ ಆಯೋಧ್ಯೆಗೆ ಶಾಪ ನೀಡುವುದಾಗಿ ಎಚ್ಚರಿಕೆ ನೀಡುತ್ತಾರೆ. ಇದರಿಂದ ಆತಂಕಕ್ಕೊಳಗಾದ ಲಕ್ಷ್ಮಣ ದೂರ್ವಾಸರನ್ನು ಒಳಗೆ ಬಿಟ್ಟಿದ್ದ!
*ರಾಮನ ಜೊತೆ ಮಾತುಕತೆ ನಡೆಸುವ ಮುನ್ನ ಯಮರಾಜ ಒಂದು ಷರತ್ತನ್ನು ವಿಧಿಸಿದ್ದ. ಒಂದು ವೇಳೆ ತಮ್ಮಿಬ್ಬರ ಮಾತುಕತೆ ವೇಳೆ ಯಾರೇ ಬಂದರೂ ನೀನು ಸಾವನ್ನಪ್ಪಬೇಕಾಗುತ್ತದೆ ಎಂದು ಹೇಳಿದ್ದರು. ಹೀಗೆ ಷರತ್ತು ಉಲ್ಲಂಘಿಸುವ ಮೂಲಕ ಲಕ್ಷ್ಮಣನ ವಿಧಿ ಕೈಕೊಟ್ಟು ಬಿಟ್ಟಿತ್ತು!
*ಕೊಟ್ಟ ಮಾತಿನಂತೆ ಲಕ್ಷ್ಮಣ ಸರಯೂ ನದಿಯಲ್ಲಿ ಪ್ರಾಣ ತ್ಯಾಗ ಮಾಡುತ್ತಾನೆ. ಇಡೀ ರಾಮಾಯಣದಲ್ಲಿ ಲಕ್ಷ್ಮಣ ದುರಂತ ನಾಯಕನಾಗಿದ್ದಾನೆ.