Advertisement
ನಿರ್ದೇಶಕ ತತ್ವಗಳ ಅಂತಃಸತ್ವ ಇರುವುದೇ ಸರಕಾ ರಕ್ಕೆ ದತ್ತವಾದ ಕಾನೂನು ರೂಪಿಸುವ ಅಧಿಕಾರ. ಆ ಮೂಲಕ ಪ್ರಗತಿ ಸಾಧಿಸುವುದು ಇದರ ಹಿಂದಿರುವ ಆದರ್ಶ. ಈ ಅವಕಾಶವನ್ನು ನಿರ್ದೇಶಕ ತಣ್ತೀಗಳ ವಿವಿಧ ಆರ್ಟಿಕಲ್‌ಗಳಲ್ಲಿ ನೀಡಲಾಗಿದೆ. ಮೊತ್ತ ಮೊದಲಾಗಿ ಸಾಮಾಜಿಕ ಸಮಾನತೆ ಹಾಗೂ ಭದ್ರತೆ. ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಎಲ್ಲ ಪೌರರು ಸಮಾನರು ಎಂದು ಪರಿಗಣಿಸುವುದು ಪ್ರಜಾಸತ್ತಾತ್ಮಕ ಆಡಳಿತದ ಲಕ್ಷಣ. ಈ ಬಗ್ಗೆ ಕಾನೂನು ರೂಪಿಸಲು ಆರ್ಟಿಕಲ್ 38 (1) ಹಾಗೂ (2)ರಲ್ಲಿ ಅವಕಾಶ ಕಲ್ಪಿಸಲಾಗಿದೆ. ದುಡಿಯುವ ವರ್ಗಕ್ಕೆ ನ್ಯಾಯ ಯುತವಾದ ವೇತನ ಹಾಗೂ ಉತ್ತಮ ಜೀವನ ಸಾಗಿಸಲು ಯುಕ್ತವಾದ ವಾತಾವರಣ ಒದಗಿಸುವುದು ಪ್ರಗತಿಪರ ಸರಕಾರದ ಜವಾಬ್ದಾರಿ. ಈ ಬಗ್ಗೆ ಕಾನೂನು ರೂಪಿಸಲು ಆರ್ಟಿಕಲ್ (43)ರಲ್ಲಿ ಅವಕಾಶ ಒದಗಿಸಲಾಗಿದೆ. ಆರ್ಟಿಕಲ್ (47)ರಲ್ಲಿ ಪೌಷ್ಟಿಕತೆಯ ಮಟ್ಟವನ್ನು ಹೆಚ್ಚಿಸವುದು ಸರಕಾರದ ಹೊಣೆಗಾರಿಕೆ ಎಂಬ ಉಲ್ಲೇಖವಿದೆ. ಆರ್ಟಿಕಲ್ 39 (ಬಿ-ಸಿ)ಗಳಂತೆ ಸಮಾಜದ ಸಂಪನ್ಮೂಲವನ್ನು ಸಮಾನವಾಗಿ ಹಂಚುವ ವ್ಯವಸ್ಥೆ ಮಾಡ ಬಹುದಾಗಿದೆ. ಅಲ್ಲದೆ ಆರ್ಟಿಕಲ್ (51)ರಂತೆ ಅಂತರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಒತ್ತು ಕೊಡಲು ನಿರ್ದೇಶನವಿದೆ. ಇದೇ ಮುಖ್ಯವಾದ ಧ್ಯೇಯೋ ದ್ದೇಶಗಳು.
Related Articles
Advertisement
ನಮ್ಮ ಸಂವಿಧಾನ ನಿರ್ಮಾತೃಗಳು ದೂರಾಲೋಚನೆ ಇರಿಸಿಕೊಂಡೇ ಈ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಪೋಣಿಸಿದ್ದಾರೆ. ಪ್ರಗತಿಪರ ಚಿಂತನೆಯುಳ್ಳ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಜನರ ದುಡಿಯುವ ಕೈಗಳನ್ನು ಬಲಪಡಿಸಿ ಪ್ರಗತಿ ಸಾಧಿಸಲು ಸಹಕಾರಿಯಾದ ಸ್ಥಿತಿ ನಿರ್ಮಾಣ ಮಾಡಲು ಈ ನಿರ್ದೇಶಕ ತತ್ವಗಳ ಅಗತ್ಯವನ್ನು ಮನಗಂಡು ಸಂವಿಧಾನದಲ್ಲಿ ಅಳವಡಿಸಲಾಗಿದೆ.
ಪ್ರಾಥಮಿಕ ಶಿಕ್ಷಣ ಹೊರತುಪಡಿಸಿ ಯಾವ ಸೌಲಭ್ಯವನ್ನು ಉಚಿತವಾಗಿ ನೀಡಲು ನಿರ್ದೇಶಕ ತತ್ವಗಳು ಪ್ರೇರೇಪಿಸುವುದಿಲ್ಲ. ಆದರೆ ದುರದೃಷ್ಟವೇನೆಂದರೆ ಈಗಿನ ಚುನಾಯಿತ ಸರಕಾರಗಳು ಆರ್ಥಿಕವಾಗಿ ಹಿಂದುಳಿದವರ ಅಭ್ಯು ದಯಕ್ಕೆ ಹಣ ಮತ್ತಿತರ ಸೊತ್ತುಗಳನ್ನು ನೇರ ಉಚಿತವಾಗಿ ನೀಡುವುದನ್ನು ಆರಂಭಿಸಿವೆ. ಇದಕ್ಕೆ ನಾಂದಿ ಹಾಡಿದ ಸರಕಾರವೆಂದರೆ ತಮಿಳುನಾಡು ಸರಕಾರ. ಈಗ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರ ಈ ಉಚಿತಗಳನ್ನು ಅದ್ದೂರಿಯಾಗಿ ನೀಡಲಾ ರಂಭಿಸಿದೆ. ಅದೂ ಗ್ಯಾರಂಟಿಗಳ ಮೂಲಕ. ಈ ಬಗ್ಗೆ ಸಂಪನ್ಮೂಲವನ್ನು ಸರಕಾರ ಹೇಗೆ ಕ್ರೋಡೀಕರಿಸುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸರಕಾರಕ್ಕೆ ಕರ, ತೆರಿಗೆಗಳ ಮೂಲಕ ಸಂಪನ್ಮೂಲ ಕ್ರೋಡೀಕರಿಸಲು ಅಧಿಕಾರವಿದೆ. ಆದರೆ ಅದು ಪ್ರಜಾಪೀಡನ ರೂಪದಲ್ಲಿರ ಬಾರದಷ್ಟೇ!
ಚುನಾಯಿತ ಸರಕಾರಗಳು ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತಿವೆಯೋ ಅಥವಾ ರಾಜಕೀಯ ಪ್ರೇರಿತವಾಗಿ ತಮಗೆ ಅನುಕೂಲ ಬಂದ ಹಾಗೆ ನಡೆಸುತ್ತಿವೆಯೋ? ಎಂಬುದನ್ನು ಗಮನಿಸಿ ಪ್ರತಿಕ್ರಿಯಿಸುವ ಜವಾಬ್ದಾರಿ ಪ್ರತಿಯೊಬ್ಬ ಪೌರನಿಗೂ ಇದೆ. ಬ್ರಿಟನ್‌ನಲ್ಲಾದರೆ, ವಿಪಕ್ಷ ಸಮರ್ಥವಾಗಿ ಈ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಅಲ್ಲಿನ ರಾಜಕಾರಣಿಗಳು ಆಳುವ ಪಕ್ಷದಲ್ಲಿರಲಿ, ವಿಪಕ್ಷದಲ್ಲಿರಲಿ, ಅವರಲ್ಲಿ ರಾಷ್ಟ್ರೀಯ ಮನೋಭಾವ ಸದಾ ಜಾಗೃ ತವಾಗಿರುತ್ತದೆ. ಹಾಗಾಗಿ ಅಲ್ಲಿನ ವಿಪಕ್ಷಕ್ಕೆ Other Parliament ಎಂದೇ ಕರೆಯುತ್ತಾರೆ. ಆದರೆ ಭಾರತದಲ್ಲಿ ಆಳುವ ಪಕ್ಷದಲ್ಲಿರಲಿ, ವಿಪಕ್ಷದಲ್ಲಿರಲಿ, ಆತ ಕೇವಲ ರಾಜಕಾರಣಿ. ದೇಶದ ಗೊಡವೆ ನಾಭಿಯಿಂದ ಇಲ್ಲ. ಆದುದರಿಂದ ಭಾರತದಲ್ಲಿ ಸರಕಾರ ಸಂವಿಧಾ ನಾತ್ಮಕವಾಗಿ ಕಾರ್ಯನಿರ್ವಹಿಸುತ್ತದೋ ಯಾ ಇಲ್ಲವೋ ಎಂಬುದನ್ನು ಸಾರ್ವಜನಿಕರು ಗಮನಿಸಿ ಪ್ರತಿಕ್ರಿಯಿಸುವ ಅನಿವಾರ್ಯತೆ ಇದೆ.
ಬೇಳೂರು ರಾಘವ ಶೆಟ್ಟಿ