ಕಲಬುರಗಿ: ವಿದೇಶದಿಂದ ದುಬಾರಿ ದರದಲ್ಲಿ ತೊಗರಿ ಆಮದು ಮಾಡಿಕೊಳ್ಳುವುದನ್ನು ಕೂಡಲೇ ಕೇಂದ್ರ ಸರ್ಕಾರ ಸ್ಥಗಿತಗೊಳಿಸಬೇಕೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಜಿ.ಕೆ. ನಾಯರ್ ಒತ್ತಾಯಿಸಿದರು. ಸಿಪಿಐಎಂ ನಗರದ ಸುಪರ ಮಾರ್ಕೆಟ್‌ನಲ್ಲಿ ಹಮ್ಮಿಕೊಂಡಿದ್ದ ಪ್ರಚಾರಾಂದೋಲನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ತೊಗರಿ ಬೆಳೆಗಾರರು ಬೆಲೆ ಕುಸಿತದಿಂದ ತತ್ತರಿಸುತ್ತಿದ್ದರೂ ಕೇಂದ್ರ ಸರ್ಕಾರ ವಿದೇಶದಿಂದ ತೊಗರಿಯನ್ನು ಪ್ರತಿ ಕ್ವಿಂಟಾಲ್‌ಗೆ 10 ಸಾ.ರೂ. ದರದಲ್ಲಿ ಆಮದು ಮಾಡಿಕೊಳ್ಳುತ್ತಿದೆ ಎಂದರು. ಹೈ.ಕ.ಭಾಗದಲ್ಲಿ ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತಿದೆ. ಕೇಂದ್ರ ಸರ್ಕಾರ ಸುಮಾರು 5050 ರೂ. ಬೆಂಬಲ ಬೆಲೆಯನ್ನು ತೊಗರಿಗೆ ಘೋಷಿಸಿದ್ದು, ರಾಜ್ಯ ಸರ್ಕಾರ ಕೇವಲ 450 ರೂ.ಗಳ ಪ್ರೋತ್ಸಾಹಧನ ಘೋಷಿಸಿದೆ.
ಇದರಿಂದಾಗಿ 5500 ರೂ ಬೆಲೆಯಿದೆ. ಈ ಬೆಲೆ ಸಹ ರೈತರಿಗೆ ಸಿಗುತ್ತಿಲ್ಲ. ಖರೀದಿ ಕೇಂದ್ರಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ 5000 ರೂ.ಗೂ ಕಡಿಮೆ ದರದಲ್ಲಿ ರೈತರು ತಮ್ಮ ತೊಗರಿ ಮಾರಾಟ ಮಾಡುವಂತಹ ದುಸ್ಥಿತಿ ಬಂದಿದೆ ಎಂದರು. ತೊಗರಿ ಪ್ರತಿ ಕ್ವಿಂಟಾಲಿಗೆ ಕನಿಷ್ಠ 7500 ರೂ. ಗಳ ಬೆಲೆ ನೀಡಬೇಕು ಎಂದ ಅವರು, ಈ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೊಗರಿ ಬೆಳೆಗಾರರ ವಿರೋಧಿ ನೀತಿ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಹಠಾತ್ತನೆ ರದ್ದುಮಾಡಿದ್ದರಿಂದ ಕೃಷಿ, ಕೂಲಿ ಕಾರ್ಮಿಕರ ವಲಯಕ್ಕೆ ಬಹಳಷ್ಟು ತೊಂದರೆಯಾಗಿದೆ. ಅಪಾರ ಪ್ರಮಾಣದ ಕಾರ್ಮಿಕರು ಕೆಲಸವಿಲ್ಲದೇ ತೊಂದರೆಗೀಡಾಗಿದ್ದಾರೆ. ಆದ್ದರಿಂದ ಕೂಡಲೇ ಕೃಷಿ, ಕೂಲಿಕಾರರಿಗೆ ಮಾರಕವಾಗಿರುವ ಬ್ಯಾಂಕ್ ಗಳಿಂದ ಹಣ ತೆಗೆಯುವ ಮಿತಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕಿಸಾನ್ ಕಾರ್ಡ್‌ಗೆ ಆಧಾರ ಕಾರ್ಡ್ ಜೋಡಿಸುವುದನ್ನು ವಿರೋಧಿಸಿದರು. ಸಣ್ಣ ಕೈಗಾರಿಕೆಗಳಿಗೆ ತೆರಿಗೆ ರದ್ದುಪಡಿಸಬೇಕು ಎಂದ ಅವರು, ಆಮದು ಮಾಡಿಕೊಳ್ಳುತ್ತಿರುವ ಬೆಳೆಕಾಳುಗಳ ಮೇಲೆ ಶೇ.30 ರಷ್ಟು ಸುಂಕ ವಿಧಿಸಬೇಕೆಂದು ಒತ್ತಾಯಿಸಿದ ಅವರು, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಳೆದ ಮೂರು ವರ್ಷದಿಂದ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ಹೀಗಾಗಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದ್ದರಿಂದ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕೆಂದರು. ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸವನ್ನು ಒಂದು ಕುಟುಂಬಕ್ಕೆ 200 ದಿನವೆಂದು ನಿಗದಿ ಮಾಡಲಾಗಿದ್ದು, ಇದನ್ನು 300 ದಿನಕ್ಕೆ ಹೆಚ್ಚಿಸಬೇಕು ಹಾಗೂ ನೆರೆಯ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಮಾದರಿಯಲ್ಲಿ ಕೂಲಿ ಕಾರ್ಮಿಕರಿಗೆ ಕಲ್ಯಾಣ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಬಾಬುರಾವ ಧುತ್ತರಗಾಂವ, ಶರಣಬಸಪ್ಪ ಮಮಶೆಟ್ಟಿ ಹಾಗೂ ಇತರರಿದ್ದರು. ಗಂಗಮ್ಮಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.