Advertisement

ಭಾರತದಲ್ಲಿ  ಧಾರಣೆ ಜಿಗಿತ ಸಾಧ್ಯತೆ

09:58 AM Dec 13, 2019 | mahesh |

ಸುಳ್ಯ: ಜಗತ್ತಿನಲ್ಲಿ ಅತ್ಯುತ್ಕೃಷ್ಟ ಕಾಳು ಮೆಣಸು ಉತ್ಪಾದಕ ದೇಶವಾದ ಶ್ರೀಲಂಕಾವು ವಿದೇಶಗಳಿಂದ ಕಾಳುಮೆಣಸಿನ ನೇರ ಆಮದು ಮತ್ತು ಮರು ರಫ್ತು ನಿಷೇಧಿಸಿದೆ. ಇದರಿಂದ ಕಲಬೆರಕೆ, ಕಳ್ಳದಾರಿಯ ಮೂಲಕ ಭಾರತಕ್ಕೆ ಆಮದಾ ಗುತ್ತಿದ್ದ ಕಾಳುಮೆಣಸಿಗೆ ಕಡಿವಾಣ ಬೀಳಲಿದ್ದು, ಸಹಜವಾಗಿ ನಮ್ಮಲ್ಲಿ ಕಾಳುಮೆಣಸಿನ ಬೇಡಿಕೆ ಹೆಚ್ಚಿ ಧಾರಣೆ ಏರುವ ಸಂಭವವಿದೆ.

Advertisement

ಶ್ರೀಲಂಕಾದ ರಫ್ತು ವಲಯಕ್ಕೆ ಕಾಳುಮೆಣಸು ಬೆಳೆಗಾರರ ಕೊಡುಗೆ ಗಣನೀಯ. ಅದಕ್ಕೆ ಕಾರಣ ಗುಣಮಟ್ಟ. ಆದರೆ ಮುಕ್ತ ವ್ಯಾಪಾರ ನೀತಿಯ ಲಾಭ ಪಡೆದ ಮಾಫಿಯಾಗಳು ವಿಯೆಟ್ನಾಂ ಮತ್ತು ಬಾಂಗ್ಲಾ ದೇಶಗಳಿಂದ ಕಳಪೆ ಕಾಳುಮೆಣಸನ್ನು ಆಮದು ಮಾಡಿ, ಶ್ರೀಲಂಕಾದ ಉತ್ತಮ ಉತ್ಪನ್ನದ ಜತೆಗೆ ಕಲಬೆರಕೆ ಮಾಡಿ ಭಾರತ ಮತ್ತಿತರ ದೇಶಗಳಿಗೆ ಪೂರೈಸುತ್ತಿದ್ದವು. ಇದರಿಂದ ಬೇಡಿಕೆ ತಗ್ಗಿ ರಫ್ತು ಕುಸಿದಿತ್ತು.

ಭಾರತಕ್ಕೆ ಹೇಗೆ ಲಾಭ?
ಭಾರತಕ್ಕೆ ಶ್ರೀಲಂಕಾದಿಂದ ಶೇ. 60ರಿಂದ 70 ರಷ್ಟು ಕಾಳುಮೆಣಸು ಪೂರೈಕೆ ಆಗುತ್ತಿದೆ. ಆದರೆ ವಿಯೆಟ್ನಾಂನ ಕಾಳುಮೆಣಸನ್ನು ಶ್ರೀಲಂಕಾದ್ದಕ್ಕೆ ಮಿಶ್ರ ಮಾಡಿ ರಫ್ತು ಮಾಡುವ ಜಾಲವಿದೆ. ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದದಡಿ ಶ್ರೀಲಂಕಾದಿಂದ ಭಾರತಕ್ಕೆ ಕಾಳುಮೆಣಸು ಆಮದಿಗೆ ಕೇವಲ ಶೇ.8 ಸುಂಕ ಪಾವತಿಸಿದರೆ ಸಾಕು. ವಿಯೆಟ್ನಾಂನಿಂದ ಆಮದಿಗೆ ಸುಂಕ ಶೇ. 52ರಷ್ಟು ಇದೆ. ಹೀಗಾಗಿ ವಿಯೆಟ್ನಾಂ ಕಾಳುಮೆಣಸನ್ನು ಲಂಕಾ ಮೂಲಕ ಭಾರತಕ್ಕೆ ಪೂರೈಸಲಾಗುತ್ತಿದೆ. ಇದರಿಂದ ವಿಯೆಟ್ನಾಂಗೆ ಲಾಭ, ಭಾರತಕ್ಕೆ ಸುಂಕ ನಷ್ಟದ ಜತೆಗೆ ಬೆಳೆಗಾರರಿಗೂ ಹೊಡೆತ. ಭಾರತದಲ್ಲಿ ವಾರ್ಷಿಕ 35ರಿಂದ 40 ಸಾವಿರ ಟನ್‌ ಕಾಳುಮೆಣಸು ಉತ್ಪಾದನೆ ಆಗುತ್ತಿದ್ದು, ಇಲ್ಲಿನ ಅಗತ್ಯ 80 ಸಾವಿರ ಟನ್‌. ಕೊರತೆ ಇರುವುದು 35 ಸಾವಿರ ಟನ್‌. ಹೀಗಿದ್ದರೂ 70ರಿಂದ 80 ಸಾವಿರ ಟನ್‌ ಅಗ್ಗದ ದರದಲ್ಲಿ ಆಮದಾಗುತ್ತಿದ್ದು, ಇಲ್ಲಿನ ಉತ್ಪನ್ನಕ್ಕೆ ಧಾರಣೆ ಸಿಗುತ್ತಿಲ್ಲ. ಶ್ರೀಲಂಕಾದ ಹೊಸ ಕ್ರಮದಿಂದ ಭಾರತೀಯ ಕಾಳುಮೆಣಸಿಗೆ ಬೇಡಿಕೆ ಹೆಚ್ಚಿ ಧಾರಣೆ ಏರಲಿದೆ.

ಶ್ರೀಲಂಕಾದಲ್ಲಿ ಏರಿಕೆ ಭಾರತದಲ್ಲಿ ನಿರೀಕ್ಷೆ!
ಹೊಸ ನಿಯಮದಿಂದಾಗಿ ಲಂಕಾದ 20 ಸಾವಿರ ಮಂದಿ ಕಾಳುಮೆಣಸು ರೈತರಿಗೆ ಲಾಭವಾಗಲಿದೆ ಎಂದು ಅಲ್ಲಿನ ಸರಕಾರ ಘೋಷಿಸಿದೆ. ಹಿಂದೆ ಕೆಜಿಗೆ 400 – 500 ರೂ. ಇದ್ದ ಧಾರಣೆ ಈಗ 600ರಿಂದ 700 ರೂ. ತನಕ ಏರಿದೆ. ಭಾರತದಲ್ಲಿ 2015ರಲ್ಲಿ ಕ್ವಿಂಟಾಲಿಗೆ 75,000 ರೂ. ಇದ್ದ ಧಾರಣೆ ಈಗ 28,000 ರೂ. ಸನಿಹ ಇದೆ. ಅಂದರೆ ಕೆ.ಜಿ.ಗೆ 700 ರೂ. ಇದ್ದದ್ದು ಈಗ 280 ರೂ. ಆಸುಪಾಸಿನಲ್ಲಿದೆ. ಶ್ರೀಲಂಕಾ ನಿರ್ಧಾರದಿಂದ ಧಾರಣೆ ಏರುವ ಸಾಧ್ಯತೆ ಹೆಚ್ಚಿದೆ.

ಶ್ರೀಲಂಕಾ ನಿಷೇಧ ಹೇರಿತೇಕೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಲಂಕಾದ ಕರಿಮೆಣಸಿಗೆ ಬೇಡಿಕೆ ಕುಸಿದ ಬಗ್ಗೆ ಅಲ್ಲಿನ ಸಂಬಾರ ಬೆಳೆಗಾರರ ಸಂಘಟನೆ ಮತ್ತು ವರ್ತಕರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಕಾರಣ ಕಳ್ಳ ವ್ಯವಹಾರವಾಗಿದ್ದು, ಭಾರೀ ತೆರಿಗೆ ನಷ್ಟಕ್ಕೆ ಕಾರಣ ಮತ್ತು ಗುಣಮಟ್ಟ, ವಿಶ್ವಾಸಾರ್ಹತೆಗೆ ಕಪ್ಪುಚುಕ್ಕೆ ಆಗುತ್ತಿರುವುದು ಸರಕಾರದ ಗಮನಕ್ಕೆ ಬಂದಿತ್ತು. ಇದನ್ನು ನಿಯಂತ್ರಿಸಲು ಅಲ್ಲಿನ ಕೃಷಿ ರಫ್ತು ಇಲಾಖೆ 2019ರ ಮಾ. 21ರಂದು ಹಣಕಾಸು ಕಾಯಿದೆ ರೂಪದಲ್ಲಿ ಗಜೆಟ್‌ ನೋಟಿಫಿಕೇಶನ್‌ ಹೊರಡಿಸಿ ಹೊಸ ಕಾಯ್ದೆ ಜಾರಿ ಮಾಡಿದೆ. ಇದರನ್ವಯ ಅಲ್ಲಿಗೆ ವಿದೇಶಗಳಿಂದ ಕರಿಮೆಣಸು ಸಹಿತ ಕೆಲವು ಸಂಬಾರ ಪದಾರ್ಥಗಳ ನೇರ ಆಮದು ಮತ್ತು ಮರು ರಫ್ತು ನಿಷೇಧಗೊಂಡಿದೆ. ಕರಿಮೆಣಸು, ಅಡಿಕೆ, ದಾಲಿcನ್ನಿ, ಜಾಯಿಕಾಯಿ, ಜಾಯಿಪತ್ರೆ, ಏಲಕ್ಕಿ, ಶುಂಠಿ, ಅರಶಿನ, ಲವಂಗ ಈ ಪಟ್ಟಿಯಲ್ಲಿ ಸೇರಿವೆ.

Advertisement

ಹೊಸ ನೀತಿಯಿಂದಾಗಿ ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಭಾರತಕ್ಕೆ ಕಳಪೆ ಕಾಳುಮೆಣಸು ಪೂರೈಕೆ ನಿಯಂತ್ರಣಕ್ಕೆ ಬಂದು ಪೂರೈಕೆ ಸ್ಥಗಿತಗೊಳ್ಳಲಿದೆ. ಹೀಗಾಗಿ ಭಾರತದಲ್ಲಿ ಧಾರಣೆ ಏರಿಕೆ ಕಾಣುವುದು ನಿಶ್ಚಿತ. ಎಸ್‌.ಆರ್‌. ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೋ

Advertisement

Udayavani is now on Telegram. Click here to join our channel and stay updated with the latest news.

Next