ಆನೇಕಲ್: ಪ್ರಾಣಿ ವಿನಿಮಯ ಯೋಜನೆ ಯಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಂತೆ, ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬಿಹಾರದ ಪಾಟ್ನಾ ಸಂಜಯ್ ಗಾಂಧಿ ಜೈವಿಕ ಉದ್ಯಾನವನ ನಡುವೆ ಯಶಸ್ವಿ ಪ್ರಾಣಿ ವಿನಿಮಯ ಯಶಸ್ವಿಯಾಗಿದೆ.
ವಿನಿಮಯದ ಭಾಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ 1 ಗಂಡು ಜೀಬ್ರಾ, 2 ಗಂಡು ಥಮಿನ್ ಜಿಂಕೆಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಿದ್ದು, ಇದರ ಪ್ರತಿಯಾಗಿ, ಅಳಿವಿನಂಚಿನಲ್ಲಿರುವ ಭಾರತೀಯ ಮೊಸಳೆ, ಬಿಳಿ ಹುಲಿ ಮತ್ತು ಕಾಡು ಬೆಕ್ಕನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದೆ. ನೂತನ ಪ್ರಾಣಿಗಳ ಆಗಮನದಿಂದ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ.
ಪ್ರತ್ಯೇಕ ಸಿಬ್ಬಂದಿ ನೇಮಕ: ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳಲು ಈ ಹೊಸ ಪ್ರಾಣಿಗಳನ್ನು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ನಿರಂತರ ವೀಕ್ಷಣೆಯಲ್ಲಿರಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಈ ಪ್ರಾಣಿ ವಿನಿಮಯವು ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಪ್ರಾಣಿ ವೀಕ್ಷಣೆಗೆ ಆಗಮಿಸುವ ಪ್ರವಾಸಿ ಕರು ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಿ, ಹೊಸ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಗಲಿದೆ.
ಪ್ರಾಣಿ ವಿನಿಮಯ ಕಾರ್ಯಕ್ರಮಗಳು ಹೆಚ್ಚಾಗಿ ಆದಾಗ ಸಂರಕ್ಷಣೆ, ಶಿಕ್ಷಣ ಮತ್ತು ವಿಭಿನ್ನ ಪ್ರಾಣಿಗಳ ಜೀವನ ಶೈಲಿ ಸೇರಿದಂತೆ ಜನರಲ್ಲಿ ದೇಶದಾದ್ಯಂತ ಇರುವ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಭಾರತೀಯ ಪ್ರಾಣಿ ಸಂಗ್ರಹಾಲಯ ಈ ಮಹತ್ತರದ ಪಾಣಿ ವಿನಿಮಯ ಯೋಜನೆಯನ್ನು ಮಾಡಿದೆ.