ಎಚ್.ಡಿ.ಕೋಟೆ: ಬೈಕ್ ಚಾಲಕರು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿ ಯಿಂದ ಜಾರಿಗೊಳಿಸಿರುವ ಹೆಲ್ಮೆಟ್ ಕಡ್ಡಾಯ ನೀತಿಯನ್ನು ಎಚ್.ಡಿ.ಕೋಟೆ ತಾಲೂಕಿನಲ್ಲಿ ಸಂಪೂರ್ಣ ಗಾಳಿಗೆ ತೂರ ಲಾಗಿದೆ. ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿ ಸುವತ್ತ ಪೊಲೀಸರು ಗಮನ ಹರಿಸಿಲ್ಲ.
ದ್ವಿ ಚಕ್ರ ವಾಹನಗಳ ಎರಡೂ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶಕ್ಕೆ ಎಷ್ಟೇ ವಿರೋಧ ಬಂದರೂ ವಾಪಸ್ ಪಡೆದಿಲ್ಲ. ಆದರೆ, ಎಚ್.ಡಿ.ಕೋಟೆ ತಾಲೂಕಿನ ವಾಹನ ಚಾಲಕರು ಮಾತ್ರ ಈ ಕಾಯ್ದೆಯೇ ಜಾರಿಯಾಗಿಲ್ಲ ಎಂಬಂತಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಬಹುತೇಕ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸದೆ, ಯಾವುದೇ ಭಯವೂ ಇಲ್ಲದೇ ಚಲಿಸುತ್ತಿದ್ದಾರೆ.
ಎಸ್‌ಪಿ: ತಾಲೂಕಿನಲ್ಲಿ ಹೆಲ್ಮೆಟ್ ಕಡ್ಡಾಯ ನೀತಿ ಜಾರಿಯಾಗದೇ ಇರುವುದಕ್ಕೆ ಕಳೆದ ಅಕ್ಟೋಬರ್ ತಿಂಗಳಲ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಆಯೋಜಿಸಿದ್ದ ಪೊಲೀಸ್ ಕಾರ್ಯಕ್ರಮದಲ್ಲಿ ಸ್ವತಃ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರು ಅಸಮಾಧಾನ ವ್ಯಕ್ತಪಡಿಸಿದ್ದರು.
ದ್ವಿಚಕ್ರ ವಾಹನಗಳ ಸವಾರ ಮತ್ತು ಹಿಂಬದಿ ಸವಾರರ ಹೆಲ್ಮೆಟ್ ಕಡ್ಡಾಯ ಎಲ್ಲಾ ಕಡೆ ಜಾರಿಯಲ್ಲಿದೆ. ಆದರೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಮಾತ್ರ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸಂಭವಿಸುವ ಸಾವಿನ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೇ ಉಂಟಾಗಿರುವುದೇ ಹೆಚ್ಚಾಗಿದೆ. ಪ್ರತಿವರ್ಷ 450ಕ್ಕೂ ಹೆಚ್ಚು ಮಂದಿ ಮರಣ ಹೊಂದುತ್ತಿದ್ದಾರೆ.
ಇದನ್ನು ತಪ್ಪಿಸುವ ಸಲುವಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಲೇ ಬೇಕೆಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ತಾಲೂಕು ಅನ್ನುವ ಕಾರಣದಿಂದ ಎರಡು ತಿಂಗಳ ಗಡುವು ನೀಡಲಾಗಿದೆ. ಅಷ್ಟರಲ್ಲಿ ಎಲ್ಲಾ ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ತಪ್ಪಿದರೆ ಎರಡು ಬಾರಿ ದಂಡ ವಿಧಿಸಿ 3ನೇ ಬಾರಿ ವಾಹನ ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಆದರೆ, ಇದಾಗಿ 4-5 ತಿಂಗಳುಗಳೇ ಉರುಳಿದರೂ ಕನಿಷ್ಠ ಚಾಲಕರೂ ಹೆಲ್ಮೆಟ್ ಧರಿಸುತ್ತಿಲ್ಲ. ತಮ್ಮ ವರಿಷ್ಠಾಧಿಕಾರಿಯ ಆದೇಶವನ್ನು ಪಾಲಿಸಲು ಪೊಲೀಸರೂ ವಿಶೇಷ ಕಾಳಜಿ ವಹಿಸದಿರುವುದು ಅಚ್ಚರಿ ಮೂಡಿಸಿದೆ. ಪೊಲೀಸರು ಆಗಾಗ ಹೆಲ್ಮೆಟ್ ಧರಿಸದ ಚಾಲಕರಿಗೆ ದಂಡ ವಿಧಿಸುತ್ತಾರೆ. ಆದರೆ, ನಿರಂತರವಾಗಿ ಮುಂದುವರಿಸುವುದಿಲ್ಲ. ಇದರಿಂದ ದ್ವಿಚಕ್ರ ವಾಹನಗಳ ಸವಾರರು ಹಾಗೂ ಪ್ರಯಾಣಿಕರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದೇ ಸಂಭವಿಸುವ ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳೇ ಹೇಳಿದ್ದರೂ ಜನರು ಗಣನೆಗೆ ತೆಗೆದುಕೊಂಡಿಲ್ಲ. ಆದ್ದರಿಂದ ಪೊಲೀಸರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.