Advertisement
ಬಸ್ ನಿಲ್ದಾಣದ ಆಸನಗಳ ಮೇಲೆ ಪಕ್ಷಿಗಳು ಹಿಕ್ಕೆ ಹಾಕಿ ಆಸನಗಳನ್ನು ಹಾಳು ಮಾಡುತ್ತಿವೆ ಎಂದು ಸಾರಿಗೆ ಘಟಕದ ವ್ಯವಸ್ಥಾಪಕರು ಪಕ್ಷಿಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಬಲೆ ಅಳವಡಿಸಿದ್ದಾರೆ. ಆ ಬಲೆಯಲ್ಲಿ ಸಿಲುಕಿ ಹತ್ತಾರು ಪಕ್ಷಿಗಳು ಸಾವನ್ನಪ್ಪುತ್ತಿವೆ. ಇದನ್ನು ನೋಡಿದ ಪ್ರಯಾಣಿಕರು ಕರುಣೆ ತೊರುತ್ತಿದ್ದರೆ, ಅಲ್ಲಿನ ಅಧಿಕಾರಿಗಳು ಅವುಗಳ ಕಡೆಗೆ ತಿರುಗಿಯೂ ನೋಡದೇ ಮಾನವೀಯತೆ ಮರೆತಿದ್ದಾರೆ.
ಅವುಗಳ ವಾಸಕ್ಕೆ ಅಡ್ಡಿಪಡಿಸಿ, ಮರಣಕ್ಕೆ ನೂಕಿರುವ ಹಿನ್ನೆಲೆಯಲ್ಲಿ ಜನರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಬಸ್ ನಿಲ್ದಾಣ ಪಕ್ಕದ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ಪ್ರತಿನಿತ್ಯ ನೂರಾರು ಪಕ್ಷಿಗಳು ವಾಸ ಮಾಡುತ್ತವೆ. ಪೊಲೀಸ್ ಅಧಿಕಾರಿಗಳು ಅವುಗಳನ್ನು ಓಡಿಸದೇ ಪ್ರತ್ಯೆಕ ವ್ಯವಸ್ಥೆ ಕಲ್ಪಿಸಿ ವಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೇ ಪಕ್ಷಿಗಳಿಗೆ ಕುಡಿಯಲು ನೀರು, ಆಹಾರವನ್ನೂ ನೀಡಲಾಗುತ್ತಿದೆ. ಹಾಗಾಗಿ ಪಕ್ಷಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಬಸ್ ನಿಲ್ದಾಣದ ಅಧಿಕಾರಿಗಳು ಕೂಡ ಇದನ್ನು ಅನುಸರಿಸಿ ಪಕ್ಷಿ ಪ್ರೇಮ ಬೆಳೆಸಿಕೊಳ್ಳಬೇಕಾಗಿದೆ. ಇಂದಿನ ದಿನಗಳಲ್ಲಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅವುಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು. ಬಸ್ ನಿಲ್ದಾಣದಲ್ಲಿ ವಾರಿವಾಳಗಳೇ ಹೆಚ್ಚು ಸಂಖ್ಯೆಯಲ್ಲಿದ್ದು, ಅವುಗಳ ಜೀವನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕದ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮನೋಜ ಸಿತಾಳೆ, ಖಯುಮ ಮೌಜನ್, ಬಾಬುಮಿಯ್ನಾ, ರಾಮು ಪರಿಟ, ರಾಜಕುಮಾರ ಜಟಗೊಂಡ, ಸಂತೋಷರೆಡ್ಡಿ, ಅಮರಸಿಂಗ್ ಠಾಕುರ್, ರಾಜಕುಮಾರ ಸ್ವಾಮಿ, ಅನಿಲಸಿಂಗ್, ನಿತಿನಸಿಂಗ್ ರಾಜಕುಮಾರ ಯಾದಲೆ, ಕಾರ್ತಿಕ ಮುತ್ತಂಗಿ ಬಸ್ ಘಟಕದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.