ರಾಯಚೂರು: ಮಾದಿಗ ಸಮುದಾಯದವರಿಗೆ ಒಳ ಮೀಸಲಾತಿ ನೀಡುವ ವಿಚಾರ ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲೇ ಆಗಲಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪ್ರಧಾನಿಯವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಮುಗಿಸದೆ ಬಿಡುವುದಿಲ್ಲ. ಈಗಾಗಲೇ ಒಳಮೀಸಲಾತಿ ಕುರಿತು ಪ್ರಧಾನಿಗಳು ಸಭೆ ನಡೆಸಿದ್ದು, ಖಂಡಿತ ಜಾರಿ ಮಾಡುವ ವಿಶ್ವಾಸವಿದೆ ಎಂದರು.
ಸಂಸತ್ ನಲ್ಲಿ ಹೊಗೆ ಬಾಂಬ್ ಪ್ರಕರಣ ದೊಡ್ಡ ಲೋಪವಾಗಿದೆ. ನಾವು ಕೂಡ ಸ್ಥಳದಲ್ಲೇ ಇದ್ದೆವು. ಪಾಸ್ ನೀಡಿರುವುದಕ್ಕೆ ಹೀಗಾಯ್ತು ಎನ್ನುವುದು ಸರಿಯಲ್ಲ. ನನ್ನ ಕ್ಷೇತ್ರದ ಮತದಾರರು ಸಂಸತ್ ನೋಡಬೇಕು ಪಾಸ್ ಕೊಡಿ ಎಂದಾಗ ನಾವು ಕೊಡಲ್ಲ ಎನ್ನಲು ಬರುವುದಿಲ್ಲ. ಇದರಲ್ಲಿ ಪ್ರತಾಪ್ ಸಿಂಹ ತಪ್ಪಿಲ್ಲ ಎಂದು ಸಮಜಾಯಿಷಿ ಕೊಟ್ಟರು.
ಶಾಸಕ ಬಸನಗೌಡ ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೆಜ್ ಆಗಲ್ಲ ಎನ್ನಲಾಗದು. ಪಕ್ಷದ ವರಿಷ್ಠರು ಅವರಿಗೆ ಏನು ಹೇಳಬೇಕೊ ಹೇಳಿದ್ದಾರೆ. ವಿಜಯೇಂದ್ರ ಯತ್ನಾಳ ನಡುವಿನ ವಿಚಾರ ವೈಯಕ್ತಿಕ. ನಾನು ಆ ಬಗ್ಗೆ ಏನು ಹೇಳಲಾರೆ ಎಂದರು.
ನಾನು ಸಾಕಷ್ಟು ಚುನಾವಣೆ ಎದುರಿಸಿದ್ದು ಮುಂದಿನ ಲೋಕಸಭೆ ಚುನಾವಣೆಗೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಟಿಕೆಟ್ ಕೊಟ್ಟರೆ ಖಂಡಿತ ಸ್ಪರ್ಧಿಸುವೆ ಎಂದರು.