Advertisement

ಆಂದೋಲನ ಮಾದರಿ ಬೆಳೆ ವಿಮೆ ಅನುಷ್ಠಾನ

12:51 PM Jul 28, 2019 | Team Udayavani |

ಕೋಲಾರ: ರೈತಪರ ಕಾಳಜಿಯಿಂದ ಡಿಸಿಸಿ ಬ್ಯಾಂಕ್‌ ಹವಾಮಾನ ಆಧಾರಿತ, ಬೆಳೆ ವಿಮಾ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮಾ ಯೋಜನೆಯನ್ನು ಆಂದೋಲನದ ಮಾದರಿ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಸೊಸೈಟಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಸಹಕಾರ ನೀಡಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.

Advertisement

ಜಿಲ್ಲಾ ಸಹಕಾರ ಯೂನಿಯನ್‌ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌, ತೊಟಗಾರಿಕೆ, ಕೃಷಿ ಮತ್ತು ಸಹಕಾರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಇಒಗಳಿಗೆ ಹವಾಮಾನ ಆಧಾರಿತ, ಬೆಳೆ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮಾ ಯೋಜನೆ ಅನುಷ್ಠಾನದ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಮಾ ಯೋಜನೆ ಅನುಷ್ಠಾನದಲ್ಲಿ ವಾಣಿಜ್ಯ ಬ್ಯಾಂಕ್‌ ಅಧಿಕಾರಿಗಳಿಗೆ ಅನ್ನದಾತರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್‌ ರೈತರಿಗೆ ಈ ಅಳಿಲು ಸೇವೆ ಸಲ್ಲಿಸುವ ದಿಸೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಯ ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಎಸ್‌ಎಫ್‌ಸಿಎಸ್‌ಗಳ ಅಧ್ಯಕ್ಷರು, ಸಿಇಒಗಳಿಗೆ ತರಬೇತಿ ನೀಡುತ್ತಿದೆ ಎಂದು ವಿವರಿಸಿದರು.

ಗೊಂದಲ ಪರಿಹರಿಸಿ: ಈ ಹಿಂದೆ ಡಿ.ಕೆ.ರವಿ ಜಿಲ್ಲಾಧಿಕಾರಿಗಳಾಗಿದ್ದ ವೇಳೆ ವಿಮಾ ಹಣ ಪಾವತಿಸಿದ್ದರೂ ಪರಿಹಾರ ಸಿಗಲಿಲ್ಲ. ಹಾಗಾಗಿ ರೈತರಿಗೆ ವಿಮೆ ಬಗ್ಗೆ ಗೊಂದಲವಿದೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ಕೃಷಿಯಲ್ಲಿ ರಾಗಿ ಮತ್ತು ತೋಟಗಾರಿಕೆಯಲ್ಲಿ ಮಾವು ಬೆಳೆಗಳಿಗೆ ವಿಮಾ ಯೋಜನೆಯನ್ನು ರೈತರು ಮಾಡಿಸಬೇಕು. ಇದಕ್ಕೆ ನಿಮ್ಮ ಜಮೀನಿನ ಪಹಣಿ ಮತ್ತು ಆಧಾರ್‌ನೊಂದಿಗೆ ನೀವು ಬ್ಯಾಂಕಿನಲ್ಲಿ ಕಂತು ಪಾವತಿಸುವಂತೆ ಮಾಡಿಸಿ ಎಂದರು.

ಸಾಲದಿಂದ ಮುಕ್ತರಾಗಿ: ನಮ್ಮದು ಸತತ ಬರ ಪೀಡಿತ ಪ್ರದೇಶವಾಗಿರುವುದರಿಂದ ಬೆಳೆಗಳು ವಿಫಲವಾಗುವುದು ಸಾಮಾನ್ಯವಾಗಿರುವುದರಿಂದ ರೈತರು ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸಲು ವಿಮಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಾಲದಿಂದ ಮುಕ್ತರಾಗುವಂತೆ ನೆರವಾಗಿ ಎಂದರು.

Advertisement

ಟೊಮೆಟೋ ಬಗ್ಗೆ ಹೆಚ್ಚಿನ ನಂಬಿಕೆಯಿಲ್ಲ. ಅದರೆ, ರಾಗಿ ಮತ್ತು ಮಾವು ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿ, ಬೆಳೆಗಳ ವಿಮಾ ಯೋಜನೆ ಕಂತನ್ನು ಪಾವತಿಸಲು ಕಡಿಮೆ ಅವಧಿ ಇರುವುದರಿಂದ ರೈತರು ಇಂದೆ ವಿಮಾ ಹಣವನ್ನು ಸೊಸೈಟಿಗಳ ಮೂಲಕ ಡಿಸಿಸಿ ಬ್ಯಾಂಕಿಗೆ ಹಣವನ್ನು ಪಾವತಿಸುವಂತಾಗಬೇಕು ಎಂದರು.

ಈ ಬಗ್ಗೆ ಈಗಾಗಲೇ ಎಲ್ಲಾ ಸೊಸೈಟಿಗಳಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ ಎಂದ ಅವರು, ಇನ್ನು ಮುಂದಿನ ದಿನಗಳಲ್ಲಿ ವಿಮೆ ಇದ್ದರೇ ಮಾತ್ರ ಬೆಳೆ ಸಾಲ ನೀಡಲಾಗುವುದು. ಮುಂದಿನ ದಿನಗಳಲ್ಲಿ ರೈತ ಪರವಿರುವ ಡಿಸಿಸಿ ಬ್ಯಾಂಕಿನಲ್ಲೇ ಎಲ್ಲಾ ವಹಿವಾಟುಗಳನ್ನು ನಡೆಸುವಂತೆ ರೈತರಿಗೆ ಮನವರಿಕೆ ಮಾಡಿ ಎಂದು ಸಲಹೆ ನೀಡಿದರು.

ವಿಶ್ವಾಸದಿಂದ ವಿಮೆ ಪಾವತಿಸಿ: ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ಟಿ.ಎ.ಪಿ.ಸಿ.ಎಂ.ಎಸ್‌ ಅಧ್ಯಕ್ಷ ನಾಗನಾಳ ಸೋಮಣ್ಣ, ಜಿಲ್ಲೆಯಲ್ಲಿ ರಾಗಿ ಬೆಳೆಗೆ ವಿಮೆ ಪಾವತಿಸಿದ್ದ ರೈತರಿಗೆ 23 ಕೋಟಿ ರೂ. ಪರಿಹಾರ ಬಂದಿದೆ. ಇದರಿಂದ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪ್ರಯೋಜನ ಪಡೆಯಲು ವಿಶ್ವಾಸದಿಂದ ಮುಂದಾಗಿ ಎಂದರು.

ಸರಿಯಾಗಿ ಪ್ರಚಾರ ಮಾಡುತ್ತಿಲ್ಲ: ಜಿಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಸರ್ಕಾರಿ ಅಧಿಕಾರಿಗಳು ವಿಮೆಯ ಬಗ್ಗೆ ರೈತರಿಗೆ ನಂಬಿಕೆ ಬರುವಂತೆ ಅರಿವು ಮೂಡಿಸುತ್ತಿಲ್ಲ, ಸರಿಯಾಗಿ ಪ್ರಚಾರವೂ ಮಾಡುತ್ತಿಲ್ಲ, ಮಾಹಿತಿ ಕೊರತೆಯಿಂದ ಅನೇಕ ರೈತರು ಇದರಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಸೊಸೈಟಿಗಳ ಸಿಇಒಗಳು ಮಾತನಾಡಿ, ವಿಮೆಯ ಬಗ್ಗೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಸಮರ್ಪಕವಾದ ಪ್ರಚಾರ ಕೈಗೊಳ್ಳುತ್ತಿಲ್ಲ. ರೈತರಿಗೆ ಮಾಹಿತಿ ಕೊರತೆ, ಗೊಂದಲ ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಕೃಷಿ, ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ: ಸಂಪನ್ಮೂಲ ವ್ಯಕ್ತಿಗಳಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ನವೀನ್‌ ಮತ್ತು ಕೃಷಿ ಇಲಾಖೆ ಅಧಿಕಾರಿ ಮುರಳಿ ಭಾಗವಹಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

48 ಗಂಟೆಯಲ್ಲಿ ಮಾಹಿತಿ ನೀಡಿ: ಮಳೆ ಜಾಸ್ತಿ, ಕಡಿಮೆ, ಹೆಚ್ಚು ಬಿಸಲು, ಗಾಳಿ. ಆಲಿ ಕಲ್ಲು ಮಳೆ ಇತ್ಯಾದಿಗಳ ಹವಮಾನ ವೈಪರಿತ್ಯ ಕಾರಣಕ್ಕೆ ಬೆಳೆ ನಷ್ಟವಾಗುತ್ತದೆ, ವಿಮೆ ಪಾಲಿಸಿದಾರರು ಬೆಳೆ ನಷ್ಟಗೊಂಡ 48 ಗಂಟೆಗಳಲ್ಲಿ ಮಾಹಿತಿ ನೀಡಬೇಕು. ಹವಾಮಾನ, ಮಳೆ ಬಗ್ಗೆ ಈ ಆನ್‌ಲೈನ್‌ನಲ್ಲಿಯೇ ಮಾಹಿತಿ ಸಿಗಲಿದೆ. ಮಳೆ, ಗಾಳಿ, ಮುಂತಾದವುಗಳಿಗೂ ನಿಗದಿತ ಪರಿಹಾರ ಸಿಗಲಿದೆ. ಆಗಸ್ಟ್‌ ಒಳಗಾಗಿ ಎಲ್ಲಾ ಅರ್ಜಿಗಳು ವಿಲೇವಾರಿ ಮಾಡಲಾಗುವುದು ಎಂದರು.

ಸಹಕಾರಿ ಯೂನಿಯನ್‌ ಸಿಇಒ ಕೆ.ಎಂ.ಭಾರತಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ನಿದೇಶಕರಾದ ಎಂ.ಎಲ್.ಅನಿಲ್ಕುಮಾರ್‌, ಚೆನ್ನರಾಯಪ್ಪ, ಯೂನಿಯನ್‌ ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಪೆಮ್ಮಶೆಟ್ಟಿಹಳ್ಳಿ ಎಸ್‌.ಸುರೇಶ್‌, ಎ.ಸಿ.ಭಾಸ್ಕರ್‌, ಮುಖಂಡರಾದ ಅರಹಳ್ಳಿ ಅಶ್ವತ್ಥನಾರಾಯಣ, ಚಂದ್ರೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next