Advertisement

ಗಡಿಕೇಶ್ವಾರದಲ್ಲಿ ಸಿಸ್ಮೋಮಿಟರ್‌ ಅಳವಡಿಕೆ

10:03 AM Oct 18, 2021 | Team Udayavani |

ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಭೂಕಂಪ ಮಾಪನ ಯಂತ್ರ (ಸಿಸ್ಮೋಮೀಟರ್‌) ಅಳವಡಿಸಲಾಗಿದೆ ಎಂದು ಹೈದ್ರಾಬಾದ್‌ನ ರಾಷ್ಟ್ರೀಯ ಭೂಗರ್ಭಶಾಸ್ತ್ರ ಸಂಶೋಧನೆ ಕೇಂದ್ರದ ಡಾ| ಶಶಿಧರ, ಡಾ| ಸುರೇಶ ಹೇಳಿದರು.

Advertisement

ಗಡಿಕೇಶ್ವಾರ ಗ್ರಾಮದಲ್ಲಿ ಸಿಸ್ಮೋಮೀಟರ್‌ ಜೋಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿಯಿಂದ ಶಬ್ದ ಉಂಟಾಗಿ ನಂತರ ಭೂಮಿ ಅಲುಗಾಡಿದರೆ ಸಿಸ್ಮೋಮೀಟರ್‌ದಲ್ಲಿ ಡಾಟಾಗಳು ದಾಖಲಾಗುತ್ತದೆ. ಈ ಕುರಿತು ಅಧ್ಯಯನ ನಡೆಸಿ, ಮುಂದೆ ಆಗುವ ಭೂಕಂಪದ ಕುರಿತು ಮಾಹಿತಿ ನೀಡಲಾಗುವುದು. ಸಣ್ಣ ಭೂಕಂಪದಿಂದ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದು ಹೇಳಿದರು.

ಭೂಮಿಯಲ್ಲಿ ಅಂತರ್ಜಲಮಟ್ಟ ಹೆಚ್ಚಳವಾದಾಗ ಇಂತಹ ಸಣ್ಣ-ಸಣ್ಣ ಭೂಕಂಪ ಸಂಭವಿಸುತ್ತವೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಗಡಿಕೇಶ್ವಾರ ಗ್ರಾಮದ ಸಿಸ್ಮೋ ಮೀಟರ್‌ದಲ್ಲಿ ಭೂಮಿ ಕಂಪಿಸಿದ ಕುರಿತು ದಾಖಲಾಗುವ ಡಾಟಾಗಳಿಂದ ಮುಂದೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಭೂಮಿಯೊಳಗೆ ನಡೆಯುವ ಸಹಜ ಪ್ರಕ್ರಿಯೆಯಿಂದ ಇಂತಹ ಶಬ್ದ ಹೊರಡುವುದು ಸಾಮಾನ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಅಲ್ಲದೇ ಸುಣ್ಣದ ಕಲ್ಲಿನ ಗಣಿಗಳಿವೆ. ಇದು ಕೂಡಾ ಭೂಕಂಪವಾಗಲು ಒಂದು ಕಾರಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಭೂಮಿ ಕಂಪಿಸುತ್ತಿದೆ. ಅಲ್ಲಿ ಆಗುವ ಭೂಕಂಪನದ ಮಾಹಿತಿಯೂ ಗಡಿಕೇಶ್ವಾರ ಗ್ರಾಮದಲ್ಲಿ ಅಳವಡಿಸಿದ ಸಿಸ್ಮೋಮೀಟರ್‌ದಲ್ಲಿ ದಾಖಲಾಗುತ್ತದೆ ಎಂದರು.

ತಹಶೀಲ್ದಾರ್‌ ಅಂಜುಮ್‌ ತಬ್ಸುಮ ಮಾತನಾಡಿ, ಗಡಿಕೇಶ್ವಾರ ಗ್ರಾಮದಲ್ಲಿ ಉಂಟಾಗುವ ಭೂಕಂಪದ ಬಗ್ಗೆ ಜನರಿಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಯಾರೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಭೂಕಂಪನ ಕುರಿತು ಅಧಿಕಾರಿಗಳು ನಮಗೆ ತಿಳಿಸುವ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.

Advertisement

ಇದನ್ನೂ ಓದಿ: ಬೆನ್ನಟ್ಟಿದ ಭೂಕಂಪ-ಎಚ್ಚೆತ್ತ ಜಿಲ್ಲಾಡಳಿತ

ಅಧ್ಯಯನ ತಂಡದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಡಾ| ರಮೇಶ ದಿಕ್ಪಾಲ, ಡಾ| ಕೆ.ಕೆ. ಅಭಿನಯ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರಿಯಾಜುದ್ದೀನ್‌, ಉಮೇಶ ಬೀರಾದಾರ, ಸಿಡಿಪಿಒ ಗುರುಪ್ರಸಾದ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಉಪ ತಹಶೀಲ್ದಾರ್‌ ರಮೇಶ ಕೋಲಿ, ಎಇಇ ಸಿದ್ರಾಮಪ್ಪ ದಂಡಗುಲಕರ, ಎಇಇ ರಾಮಚಂದ್ರ ಜಾಧವ, ರೇವಣಸಿದ್ಧಪ್ಪ ಅಣಕಲ್‌, ಸಂತೋಷ ಬಳಿ, ವೀರೇಶ ರೆಮ್ಮಣ್ಣಿ, ಪ್ರಕಾಶ ರಂಗನೂರ, ಅಶೋಕ ರಂಗನೂರ ಇನ್ನಿತರರಿದ್ದರು.

ಗಡಿಕೇಸ್ವಾರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಿಸ್ಮೋಮೀಟರ್‌ ಜೋಡಣೆ ಮಾಡುವ ಸಂದರ್ಭದಲ್ಲಿ ಮಧ್ಯಾಹ್ನ 12:20ಕ್ಕೆ ಭೂಮಿಯಿಂದ ಭಾರಿ ಶಬ್ದ ಉಂಟಾಯಿತು. ಭೂಕಂಪನದ ಬಗ್ಗೆ ಸ್ಥಳದಲ್ಲಿಯೇ ಇದ್ದ ಯಂತ್ರದಲ್ಲಿ ತಕ್ಷಣ 0.5 ತೀವ್ರತೆ ರಿಕ್ಟರ್‌ ಮಾಪನದಲ್ಲಿ ದಾಖಲಾಯಿತು.

ಗಡಿಕೇಶ್ವರ ಗ್ರಾಮದಲ್ಲಿ ಅಳವಡಿಸಲಾಗಿದ್ದ ಸಿಸ್ಮೋಮೀಟರ್‌ಗೆ ವಿದ್ಯುತ್‌ ಸಂಪರ್ಕದ ಅವಶ್ಯಕತೆ ಇಲ್ಲ. ಸೋಲಾರ್‌ ಅಳವಡಿಸಲಾಗಿದೆ. ವಿದ್ಯುತ್‌ ಸಂಪರ್ಕ ಇಲ್ಲದಿದ್ದರೂ ಸೋಲಾರ ಸಹಾಯಕ್ಕೆ ಬರುತ್ತದೆ. ಗಡಿಕೇಶ್ವಾರ ಗ್ರಾಮದಲ್ಲಿ ರವಿವಾರ ಮಧ್ಯಾಹ್ನ 12:20ಗಂಟೆಗೆ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ, ಭೂಮಿ ಕಂಪಿಸಿದ್ದರಿಂದ ವಿಜ್ಞಾನಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದ ಗ್ರಾಮಸ್ಥರು, ಪತ್ರಕರ್ತರು, ಕಂದಾಯ ಇಲಾಖೆ ಸಿಬ್ಬಂದಿ ಬೆಚ್ಚಿ ಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next