ಮಹಾನಗರ : ಪಶ್ಚಿಮಘಟ್ಟಕ್ಕೆ ಬೆಂಕಿ ಬೀಳುವ ಘಟನೆಗಳು ನಡೆದು, ಪ್ರಾಕೃತಿಕ ಸಂಪತ್ತಿಗೆ ಬಹುದೊಡ್ಡ ಆತಂಕ ಎದುರಾಗಿರುವುದನ್ನು ನಗರದ ಜನರಿಗೆ ತಿಳಿಸುವ ಉದ್ದೇಶದಿಂದ ಅನುಷ್ಠಾನ ಕಲೆಯೊಂದು (ಇನ್‌ಸ್ಟಾಲೇಶನ್ ಆರ್ಟ್) ಮಂಗಳೂರಿನಲ್ಲಿ ಮೂಡಿಬಂದಿದೆ.
ಪ್ರಕೃತಿ ಮೇಲೆ ಮನುಷ್ಯನ ದಾಳಿ ಹಾಗೂ ಪ್ರಕೃತಿಗೆ ಎದುರಾಗಿರುವ ಆತಂಕದ ಸ್ಥಿತಿಯನ್ನು ಪ್ರತಿಷ್ಠಾಪನ ಕಲೆಯ ಮೂಲಕ ವಿಭಿನ್ನವಾಗಿ ಮೂಡಿಸಲಾಗಿದೆ. ನಗರದ ಜೈಲ್ ರೋಡ್‌ನಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಆವರಣದಲ್ಲಿ ಕೆಲವು ದಿನಗಳಿಂದ ಆಯೋಜಿಸಲಾಗಿರುವ ಜಿಲ್ಲಾ ಚಿತ್ರಕಲಾ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಶಿಕ್ಷಕರು ಗುರುವಾರ ಇನ್‌ಸ್ಟಾಲೇಶನ್ ಆರ್ಟ್ ಮಾಡಿದ್ದಾರೆ.
ಪಶ್ಚಿಮಘಟ್ಟಕ್ಕೆ ಎದುರಾಗಿರುವ ಇಂದಿನ ನೈಜ ಸ್ಥಿತಿಯನ್ನು ಕಲೆಯ ಮೂಲಕ ಇಲ್ಲಿ ಅಭಿವ್ಯಕ್ತಗೊಳಿಸಲಾಗಿದೆ. ಸುಧೀರ್ ಕುಮಾರ್, ವೆಂಕಿ ಪಲಿಮಾರ್, ಬಾಲಕೃಷ್ಣ ಶೆಟ್ಟಿ ಹಾಗೂ ಪೆರ್ಮುದೆ ಮೋಹನ್ ಕುಮಾರ್ ಅವರ ನೇತೃತ್ವದ ತಂಡ ಈ ಕಲೆಯ ರಚನೆಯಲ್ಲಿ ಕೈಜೋಡಿಸಿದೆ.
ಪಶ್ಚಿಮಘಟ್ಟಕ್ಕೆ ಬೆಂಕಿಬಿದ್ದು ಮರಗಳು ಸುಟ್ಟು ಹೋಗುತ್ತಿರುವುದನ್ನು ವಿವರಿಸುವ ಹಿನ್ನಲೆಯಲ್ಲಿ ಮರಕ್ಕೆ ಕಪ್ಪು ಬಣ್ಣ ಬಳಿಯಲಾಗಿದೆ. ಇನ್ನು ಪ್ಲಾಸ್ಟಿಕ್‌ನ ಮೂಲಕವಾಗಿ ಪಶ್ಚಿಮಘಟ್ಟವನ್ನು ಯಾವ ರೀತಿಯಲ್ಲಿ ಹಿಂಸಿಸಲಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುವ ಕಾರಣದಿಂದ ನೀರಿನ ಬಾಟಲಿ, ಮುಚ್ಚಳವನ್ನು ಮರಗಳಿಗೆ ಜೋಡಿಸಿಡಲಾಗಿದೆ. ಪಕ್ಷಿಗಳ ಆವಾಸಸ್ಥಾನಕ್ಕೆ ಎದುರಾಗಿರುವ ಆತಂಕವನ್ನು ಕೂಡ ಇದರಲ್ಲಿ ಮೂಡಿಸಲಾಗಿದೆ. ಪ್ರಕೃತಿ ಉಳಿಸಿ ಎಂಬ ಆಶಯದಿಂದ ಮರಕ್ಕೆ ಪ್ರಾಣಿಯ ಅಮೂರ್ತ ರೂಪ ಕಲ್ಪಿಸಲಾಗಿದೆ ಎನ್ನುತ್ತಾರೆ ದಿನೇಶ್ ಹೊಳ್ಳ.
ಅನುಷ್ಠಾನ ಕಲೆ
ಪ್ರಾಕೃತಿಕವಾಗಿರುವ ವಸ್ತುವನ್ನೇ ಬಳಸಿಕೊಂಡು ಅದರಲ್ಲಿ ಕಲಾತ್ಮಕತೆಯ ಪರಿಕಲ್ಪನೆಯನ್ನು ಮೂಡಿಸುವ ವಿಭಿನ್ನ ಕಲೆಯನ್ನು ಅನುಷ್ಠಾನ ಕಲೆ ಎಂದು ಕರೆಯುತ್ತಾರೆ. ವಿದೇಶದಲ್ಲಿ ಇದು ಅಧಿಕವಾಗಿ ಬಳಕೆಯಲ್ಲಿದೆ.