ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಪ್ರಸಕ್ತ ಸಾಲಿನಲ್ಲಿ 10 ಸಾವಿರ ಕೋಟಿ ರೂ. ಬಜೆಟ್ ಮಂಡಿಸಿದ್ದು, ಆ ಪೈಕಿ ಶೇ.5ರಷ್ಟು ಯೋಜನೆಗಳನ್ನೂ ಅನುಷ್ಠಾನಗೊಳಿಸದೆ ಜನತೆಗೆ ಮೋಸ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ 2018-19ನೇ ಸಾಲಿನಲ್ಲಿ 10,129 ಕೋಟಿ ರೂ. ಮೌಲ್ಯದ ಬೃಹತ್ ಬಜೆಟ್ ಮಂಡಿಸಲಾಗಿದೆ. ಆದರೆ, ಬಜೆಟ್‌ನಲ್ಲಿರುವ ಯಾವುದೇ ಯೋಜನೆ ಜಾರಿಯಾಗಿಲ್ಲ. ಹಾಗಾದರೆ, ವಿವಿಧ ಯೋಜನೆಗಳಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗಿದೆ ಎಂಬ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ಪಾಲಿಕೆಯ ಬಜೆಟ್‌ನಲ್ಲಿ ಮೈತ್ರಿ ಆಡಳಿತ 53 ಅಂಶಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದೆ. ಆ ಪೈಕಿ ಹೊಸ ಮೇಯರ್‌ಗೆ ಬೆಳ್ಳಿ ಕೀ ಹಾಗೂ ಹೊಸ ಬ್ಯಾಟನ್ ನೀಡುವುದು, ಪಾಲಿಕೆ ಸದಸ್ಯರಿಗೆ ಟ್ಯಾಬ್, ನ್ಯಾಯಾಲಯದ ತರಾಟೆ ಬಳಿಕ ಹೊಸ ಜಾಹೀರಾತು ನೀತಿ, ಪೌರಕಾರ್ಮಿಕರಿಗೆ ನೇರ ವೇತನ ಜಾರಿ ಹಾಗೂ ಇಂದಿರಾ ಕ್ಯಾಂಟೀನ್ ಊಟ ಹೊರತುಪಡಿಸಿದರೆ ಯಾವುದೇ ಯೋಜನೆ ಜಾರಿಗೊಳಿಸಿಲ್ಲ ಎಂದು ದೂರಿದರು. ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಕೌಶಲ್ಯ ತರಬೇತಿ, ಉಚಿತ ವೈ-ಫೈ ಸಂಪರ್ಕ, ಪಾಲಿಕೆ ಆಸ್ತಿಗಳ ರಕ್ಷಣೆ, ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳ ಪತ್ತೆ, ಕಂದಾಯ ಜಾಗೃತ ದಳ, ಟೋಟಲ್ ಸ್ಟೇಷನ್ ಸರ್ವೆಯಿಂದ 550 ಕೋಟಿ ರೂ. ಹಾಗೂ ಒಎಫ್ ಸಿಯಿಂದ 300 ಕೋಟಿ ರೂ. ಆದಾಯ ಸಂಗ್ರಹ, ಕೇಂದ್ರ, ರಾಜ್ಯ ಸರ್ಕಾರಗಳ ಕಟ್ಟಡಗಳಿಂದ ಸುಧಾರಣಾ ಶುಲ್ಕ ಸಂಗ್ರಹದಂತಹ ಯೋಜನೆಗಳ ಜಾರಿಗೆ ಮುಂದಾಗಿಲ್ಲ ಎಂದರು.
ಭರವಸೆ ಪುಸ್ತಕಕ್ಕೆ ಸೀಮಿತ
ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ಭಾರಿ ಪ್ರಮಾಣದಲ್ಲಿ ದಂಡ ಹಾಕುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ವಾರ್ಡ್‌ವಾರು ಕೆಂಪೇಗೌಡ ಜಯಂತಿಗೆ 1.50 ಲಕ್ಷ ರೂ. ನೀಡುವುದು, ಕಲಾಭವನಗಳ ನಿರ್ಮಾಣ, ಪಾಲಿಕೆ ಆಸ್ತಿಗಳಿಗೆ ತಂತಿಬೇಲಿ, ಕನ್ನಡ ಬಸ್ ನಿಲ್ದಾಣಗಳ ನಿರ್ಮಾಣ, ಪಾಲಿಕೆ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕನ್ನಹಳ್ಳಿ, ಮಾವಳ್ಳಿಪುರದಲ್ಲಿತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳ ನಿರ್ಮಾಣ ಸೇರಿದಂತೆ ಹತ್ತಾರು ಭರವಸೆಗಳು ಪುಸ್ತಕಕ್ಕೆ ಸೀಮಿತವಾಗುವ ಮೂಲಕ ಜನರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.