Advertisement

Cargo Ship; ಆಹಾರ ಉತ್ಪನ್ನಗಳ ದರದ ಮೇಲೆ ಪರಿಣಾಮ?

01:22 AM Jan 02, 2024 | Team Udayavani |

ಮಂಗಳೂರು: ಕೆಲವು ದಿನಗಳಿಂದ ಭಾರತ ಮತ್ತಿತರ ಇಸ್ರೇಲ್‌ ಸಂಪರ್ಕ, ಸಂಬಂಧ ಇರುವ ಸರಕು ಹಡಗುಗಳ ಮೇಲೆ ಉಗ್ರರು ದಾಳಿ ನಡೆಸುತ್ತಿರುವುದು ಜಾಗತಿಕವಾಗಿ ಗ್ರಾಹಕ ಬಳಕೆಯ ಉತ್ಪನ್ನಗಳ ಬೆಲೆಯೇರಿಕೆ ಸಹಿತ ಹಲವು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಗೋಚರಿಸಿದೆ.

Advertisement

ಇದೇ ರೀತಿಯ ಪರಿಸ್ಥಿತಿ ಮುಂದುವರಿ ದರೆ ನವಮಂಗಳೂರು ಮತ್ತಿತರ ಬಂದರುಗಳ ಮೂಲಕ ದೇಶಕ್ಕೆ ಆಮದಾಗುವ ಇಲೆಕ್ಟ್ರಾನಿಕ್ಸ್‌, ಕಚ್ಚಾ ತೈಲ, ಗೋಡಂಬಿ, ಕಲ್ಲಿದ್ದಲು, ಒಣ ಹಣ್ಣುಗಳು ಮತ್ತಿತರ ಕನ್ಸುಮೆಬಲ್‌ ಸರಕುಗಳ ದರ ಏರಿಕೆಯಾಗ ಬಹುದು ಎನ್ನುತ್ತಾರೆ ಉದ್ಯಮಿಗಳು.

ವಾಣಿಜ್ಯ ಹಡಗುಗಳು ಸಾಗುವ ಕೆಂಪು ಸಮುದ್ರ, ಸುಯೇಜ್‌ ಕಾಲುವೆ ಮಾರ್ಗದಲ್ಲಿ ಹೌತಿ ಉಗ್ರರ ಡ್ರೋನ್‌ಗಳು ಹಡಗುಗಳ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಪ್ರಮುಖ ಹಡಗು ಕಂಪೆನಿಗಳು ಈ ಮಾರ್ಗದಲ್ಲಿ ಸದ್ಯಕ್ಕೆ ಹಡಗು ಸಂಚಾರ ಸ್ಥಗಿತ ಗೊಳಿಸಿರುವುದು, ಮಾರ್ಗ ಬದಲಾವಣೆ ಮಾಡಿರುವುದು ಭಾರತಕ್ಕೂ ಚಿಂತೆಗೆ ಕಾರಣ.

ಇದರಿಂದಾಗಿ ಸರಕು ಸಾಗಾಟ ಅವಧಿ ಹೆಚ್ಚಳವಾಗುವ ಜತೆಗೆ ದರವೂ ಅಧಿಕವಾಗಬಹುದು ಎಂದು ನೌಕಾ ಯಾನ-ಸರಕು ಸಾಗಣೆಯಲ್ಲಿ ತೊಡಗಿಸಿ ಕೊಂಡವರು ಹೇಳುತ್ತಾರೆ.

ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನ ಒಎಂಪಿಎಲ್‌ ಕಂಪೆನಿಯ ಬೆನ್ಸಿನನ್ನು ಸಾಗಿಸುವುದಕ್ಕಾಗಿ ಬರುತ್ತಿದ್ದ ಎಂ.ವಿ. ಚೆಮ್‌ ಎಂಬ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಗುಜರಾತ್‌ ಸಮುದ್ರ ತೀರದಿಂದ 200 ನಾಟಿಕಲ್‌ ಮೈಲಿ ದೂರದಲ್ಲಿ, ಅರಬ್ಬಿ ಸಮುದ್ರದಲ್ಲಿ ಈ ದಾಳಿಯಾಗಿತ್ತು ಎನ್ನುವುದು ಗಮನಾರ್ಹ.

Advertisement

ಇದಾದ ನಾಲ್ಕು ದಿನಗಳಲ್ಲಿ ದಕ್ಷಿಣ ಕೆಂಪು ಸಮುದ್ರದಲ್ಲಿ ಎಂ.ವಿ. ಸಾಯಿಬಾಬಾ ಎನ್ನುವ ಹಡಗಿನ ಮೇಲೆ ದಾಳಿ ನಡೆದಿದ್ದು, ಇದೊಂದು ತೈಲ ಟ್ಯಾಂಕರ್‌ ಹಡಗು ಆಗಿತ್ತು. ಇಷ್ಟೇ ಅಲ್ಲದೆ ಮಯರಿಸ್ಕ್, ಹಪಗ್‌ ಲಾಯ್ಡನಂತಹ ಪ್ರಮುಖ ಶಿಪ್ಪಿಂಗ್‌ ಕಂಪೆನಿಗಳ ಹಡಗುಗಳ ಮೇಲೆಯೂ ದಾಳಿ ನಡೆದಿದೆ. ಯುಎಸ್‌ಎ ಸಹಿತ ಮಿತ್ರ ದೇಶಗಳು ಹಡಗುಗಳ ಸಂಚಾರಕ್ಕೆ ಭದ್ರತೆ ಒದಗಿಸುವುದಾಗಿ ಹೇಳಿದ್ದರೂ ಅನೇಕ ಕಂಪೆನಿಗಳು ಕೆಂಪು ಸಮುದ್ರದ ಮೂಲಕ ಸಂಚಾರಕ್ಕೆ ಹಿಂದೇಟು ಹಾಕುತ್ತಿವೆ.

ಸುಯೇಜ್‌ ಕಾಲುವೆ ಮಹತ್ವದ್ದು
ಏಷ್ಯಾ ಮತ್ತು ಯುರೋಪ್‌ ಮಧ್ಯೆ ಸರಕು, ವಾಣಿಜ್ಯ ಸಾಗಾಣಿಕೆಗೆ ಪ್ರಮುಖ ಮಾರ್ಗ ಸುಯೇಜ್‌ ಕಾಲುವೆ. ಎರಡೂ ಖಂಡಗಳ ಹಲವು ದೇಶಗಳಿಗೆ ಈ ದಾರಿಯಲ್ಲಿ ಸುಗಮ ಸರಕು ಸಾಗಾಟ ಅತೀ ಮುಖ್ಯ. ಇಸ್ರೇಲ್‌ ಹಮಾಸ್‌ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‌ ಬೆಂಬಲವಿರುವ ಹೌತಿ ಉಗ್ರರು ಸದ್ಯ ಇಸ್ರೇಲ್‌ ಜತೆ ಗುರುತಿಸಿಕೊಂಡಿರುವ ದೇಶಗಳ ಸಂಬಂಧಿಸಿದ ಹಡಗುಗಳನ್ನು ಗುರಿ ಮಾಡುತ್ತಿದ್ದಾರೆ.

ದರ ಏರಿಕೆ ಸಾಧ್ಯತೆ
ಆಹಾರ ಧಾನ್ಯ, ಕಚ್ಚಾತೈಲ ಮತ್ತಿತರ ಅಗತ್ಯ ವಸ್ತುಗಳನ್ನು ಹೊತ್ತ ಸರಕು ಹಡಗುಗಳು ಕೆಂಪು ಸಮುದ್ರದ ಮೂಲಕ ಯುರೋಪ್‌ ಹಾಗೂ ಏಷ್ಯಾದ ಕಡೆಗೆ ಸಾಗುತ್ತವೆ. ಈ ಮಾರ್ಗವನ್ನು ಬಿಟ್ಟರೆ ಉಳಿದದ್ದು ಆಫ್ರಿಕಾದ ಕೇಪ್‌ ಆಫ್‌ ಗುಡ್‌ಹೋಪ್‌ ಮೂಲಕ ಇರುವ ಹಳೆಯ ಮಾರ್ಗ. ಇದರಲ್ಲಿ ಸಾಗಿದರೆ ಮಂಗಳೂರು ಮತ್ತಿತರ ಭಾರತದ ಬಂದರುಗಳಿಗೆ ಬರುವ, ಅಲ್ಲಿಂದ ತೆರಳುವ ಹಡಗುಗಳು ಕನಿಷ್ಠ 15ರಿಂದ 20 ದಿನಗಳಷ್ಟು ಹೆಚ್ಚು ತೆಗೆದುಕೊಳ್ಳಬಹುದು. ಅಲ್ಲದೆ ಇದಕ್ಕಾಗಿ ಹಡಗುಗಳು ಹೆಚ್ಚು ಮೊತ್ತವನ್ನು ವಿಧಿಸಬಹುದು. ಇದರ ಪರಿಣಾಮ ಅಂತಿಮವಾಗಿ ಉತ್ಪನ್ನದ ಮೇಲೆ ಹಾಗೂ ಅಂತಿಮವಾಗಿ ಗ್ರಾಹಕರ ಮೇಲೆಯೇ ಬೀಳುವ ಸಾಧ್ಯತೆ ಇದೆ.

ಎಷ್ಟು ದರ ಏರಿಕೆ ಆಗಬಹುದು?
ಹಡಗುಗಳ ಸಾಮರ್ಥ್ಯ, ಗಾತ್ರದ ಆಧಾರದಲ್ಲಿ ವಿವಿಧ ಪ್ರಮಾಣದಲ್ಲಿ ದರ ಏರಿಕೆಯಾಗ ಬಹುದು ಎಂದು ಮಂಗಳೂರಿನ ಶಿಪ್ಪಿಂಗ್‌ ಏಜೆಂಟ್‌ ಒಬ್ಬರು ತಿಳಿಸಿದ್ದಾರೆ. ಸದ್ಯದ ವಿಶ್ಲೇ ಷಣೆಯ ಪ್ರಕಾರ ಕಂಟೈನರ್‌ ಹಡಗುಗಳಲ್ಲಿ 20 ಅಡಿಗಳ ಬಾಕ್ಸ್‌ ಸಾಗಾಟಕ್ಕೆ 1ರಿಂದ 2 ಸಾವಿರ ರೂ.ಗಳಷ್ಟು ಹಾಗೂ 40 ಅಡಿಗಳ ಬಾಕ್ಸ್‌ಗೆ 3ರಿಂದ 4 ಸಾವಿರ ರೂ. ದರ ಹೆಚ್ಚಾಗಬಹುದು. ಸದ್ಯ ಈ ದರ ಕ್ರಮವಾಗಿ 30ರಿಂದ 32 ಸಾವಿರ ರೂ. ಹಾಗೂ 38ರಿಂದ 40 ಸಾವಿರ ರೂ. ಇದೆ. ಸಾಮಾನ್ಯ ಸರಕಿಗೆ ಟನ್‌ಗೆ 10ರಿಂದ 12 ಅಮೆರಿಕನ್‌ ಡಾಲರ್‌ಗಳಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಸದ್ಯ ಈ ದರ ಪ್ರತೀ ಟನ್‌ಗೆ ಸುಮಾರು 25 ಡಾಲರ್‌ ಇದೆ.

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next