ನವದೆಹಲಿ: ವೃತ್ತಿಕೌಶಲ್ಯ ಪರಿಣಿತಿ ಹೊಂದಿಧಿರುವ ಕೆಲಸಗಾರರು ಅಮೆರಿಕಕ್ಕೆ ಬಾರದಂತೆ ನಿರ್ಬಂಧ ಹಾಕುವ ನಿರ್ಧಾರವನ್ನು ಕೈಬಿಟ್ಟು, ಅವರನ್ನು ಸಮತೋಲಿತ ಮತ್ತು ಉದಾರಭಾವನೆಯಿಂದ ನೋಡಬೇಕು ಎಂದು ಪ್ರಧಾನಿ ನರೇಂದ್ರಮೋದಿ ಅವರು ಅಮೆರಿಕಕ್ಕೆ ಮನವಿ ಮಾಡಿದ್ದಾರೆ.
ಟ್ರಂಪ್ ಆಡಳಿತ ಹೆಚ್-1 ಬಿ ವೀಸಾ ಮೇಲೆ ಕಡಿವಾಣ ಹಾಕಲು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಸಲಹೆ ಮಹತ್ವ ಪಡೆದಿದೆ. ಮಂಗಳವಾರ ಅಮೆರಿಕ ಕಾಂಗ್ರೆಸ್ ಸದಸ್ಯರ ನಿಯೋಗವು ದೆಹಲಿಗೆ ಆಗಮಿಸಿದ್ದು, ಅವರೊಂದಿಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ತಿಳಿಸಿದ್ದಾರೆ.
ಅಮೆರಿಕ ತನ್ನ ಧೋರಣೆಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಕೌಶಲ್ಯ ಕೆಲಸಗಾರರು ಅಮೆರಿಕಕ್ಕೆ ಬಾರದಂತೆ ತಡೆಯುವ ಪ್ರಯತ್ನ ಮಾಡುವುದರ ಬದಲು ದೂರದೃಷ್ಟಿ ಹೊಂದಿರಬೇಕು ಎಂದೂ ಮೋದಿ ಒತ್ತಿಹೇಳಿದ್ದಾರೆ. ಎರಡೂ ದೇಶಗಳ ಸಂಬಂಧವನ್ನು ಬಲಪಡಿಸಲು ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಅಮೆರಿಕದೊಂದಿಗೆ ನಡೆಸಿರುವ ಮಾತುಕತೆಯ ವಿವರವನ್ನು ಮೋದಿ ನಿಯೋಗದ ಸದಸ್ಯರ ಜೊತೆ ವಿನಿಮಯ ಮಾಡಿಕೊಂಡರು.
ವೀಸಾಗೆ ನಿರ್ಬಂಧವಿಲ್ಲ
ಭಾರತೀಯ ಕೌಶಲ್ಯ ಕೆಲಸಗಾರರಿಗೆ ವೀಸಾ ಕೊಡಲು ಅಮೆರಿಕ ಸರ್ಕಾರ ಹಿಂದೆ ಮುಂದೆ ನೋಡುತ್ತಿರುವಾಗಲೇ, ಬ್ರಿಟನ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು ಬರುವ ಭಾರತೀಯ ವಿದ್ಯಾರ್ಥಿಗಳ ವೀಸಾದ ಮೇಲೆ ಯಾವ ನಿರ್ಬಂಧವೂ ಇಲ್ಲ, ಮಿತಿಯೂ ಇಲ್ಲ ಎಂದು ಬ್ರಿಟನ್ ಸರ್ಕಾರ ಸ್ಪಷ್ಟಪಡಿಸಿದೆ.