Advertisement

ಗ್ರಾಮೀಣ ಸೇವೆ ಸಲ್ಲಿಸಲಿಚ್ಚಿಸುವ ವೈದ್ಯರಿಗೆ ತಕ್ಷಣ ಆದೇಶ

09:56 AM Nov 24, 2017 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ 40 ತಜ್ಞ ವೈದ್ಯರ ಹಾಗೂ ನಾಲ್ಕು ಎಂಬಿಬಿಎಸ್‌ ವೈದ್ಯರ ಕೊರತೆ ಇದ್ದು, ಅವರನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ಸಿದ್ಧರಿರುವ ವೈದ್ಯರು ಸಂಪರ್ಕಿಸಿದಲ್ಲಿ ಅವರನ್ನು ತಕ್ಷಣ ಸೇವೆಗೆ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಆರೋಗ್ಯ ಇಲಾಖೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಲು ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಆಡಿಟ್‌ ಕೈಗೊಂಡು ಮರಣದ ಕಾರಣ ತಿಳಿದು ಕ್ರಮ ಜರುಗಿಸಬೇಕು ಎಂದರು. 

ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನು ಸಹ ಮನೆಗಳಲ್ಲಿ ಹೆರಿಗೆಯಾಗುತ್ತವೆ. ಅವರಲ್ಲಿ ಜಾಗೃತಿ ಮೂಡಿಸಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಪ್ರರೇಪಿಸಬೇಕು. ಹೆರಿಗೆ ಸಮಯದಲ್ಲಿ 108 ಅಂಬ್ಯುಲೆನ್ಸ್‌ ಸಹಾಯ ಪಡೆಯಲು ತಿಳಿಸಬೇಕು ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ತಿಂಗಳೂ ಎಲ್ಲ ಗರ್ಭಿಣಿಯರಿಗೆ ತಪಾಸಣೆ ಮಾಡಬೇಕೆಂದು ಸೂಚಿಸಿದರು.

ಇಂದ್ರಧನುಷ್‌ ಲಸಿಕಾ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಿ ಗುರಿ ಹಮ್ಮಿಕೊಂಡಂತೆ ಕಳೆದ ಬಾರಿ ಕೈಗೊಂಡ
ಇಂದ್ರಧನುಷ್‌ ಕಾರ್ಯಕ್ರಮದಲ್ಲಿ 687 ಗರ್ಭಿಣಿಯರ ಪೈಕಿ 685 ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ. ಎರಡು ವರ್ಷದೊಳಗಿನ 3253 ಮಕ್ಕಳ ಪೈಕಿ 2802 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವ ಪ್ರಮಾಣ ಪ್ರತಿ
ಸಲ ಹೆಚ್ಚಿಗೆ ಆಗಬೇಕು. ಕನಿಷ್ಟ ಶೇ 95 ರಷ್ಟು ಪ್ರಗತಿ ಸಾಧಿಸಬೇಕೆಂದು ತಿಳಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಒಂದು ಹಳ್ಳಿಯಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಿದ್ದಲ್ಲಿ ಅಂಥಹ ಗ್ರಾಮಗಳ ವ್ಯಾಪ್ತಿಯಲ್ಲಿ ವಿಸ್ತರಣಾ ಆರೋಗ್ಯ ಕೇಂದ್ರ ಸ್ಥಾಪಿಸಲು ಸರ್ಕಾರ ರಾಜ್ಯಕ್ಕೆ 150 ವಿಸ್ತರಣಾ ಕೇಂದ್ರಗಳಿಗೆ
ಮಂಜೂರಾತಿ ನೀಡಿದೆ. ಈ ಪೈಕಿ ಚಿಂಚೋಳಿ ನಾಲ್ಕು ಹಾಗೂ ಸೇಡಂ ಮೂರು ಸೇರಿದಂತೆ ಜಿಲ್ಲೆಗೆ ಒಟ್ಟು ಒಂಭತ್ತು ವಿಸ್ತರಣಾ ಕೇಂದ್ರಗಳು ಮಂಜೂರಾಗಿವೆ ಎಂದರು.

Advertisement

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ನಾಗರತ್ನಾ ಚಿಮ್ಮಲಗಿ ಮಾತನಾಡಿ, ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್‌ ಘಟಕ
ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಯುನಾನಿ, ಜೇವರ್ಗಿ ಹಾಗೂ ಆಳಂದ ತಾಲೂಕು ಆಸ್ಪತ್ರೆಗಳಲ್ಲಿ ಆಯುರ್ವೇದ, ಸೇಡಂ ಹಾಗೂ ಚಿತ್ತಾಪುರ ತಾಲೂಕು ಆಸ್ಪತ್ರೆಗಳಲ್ಲಿ ಹೊಮಿಯೋಪಥಿ ಘಟಕ ಸ್ಥಾಪಿಸಲು ಆದೇಶಿಸಲಾಗಿದೆ ಎಂದು ಹೇಳಿದರು..

ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್‌.ಆರ್‌. ಎಚ್‌.ಎಂ. ಅಡಿ ಕೆಲಸ ಮಾಡುತ್ತಿರುವ
ಆಯುಷ್‌ ವೈದ್ಯರನ್ನು ಈ ಘಟಕಗಳಿಗೆ ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next