Advertisement

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಿ

09:56 PM Jul 24, 2019 | mahesh |

ಕಲ್ಲುಗುಡ್ಡೆ: ನೂಜಿಬಾಳ್ತಿಲ ಗ್ರಾ.ಪಂ. ಸಾಮಾನ್ಯ ಸಭೆ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯರಾದ ಪಿ.ಯು. ಸ್ಕರಿಯಾ, ಕೆ.ಜೆ ತೋಮಸ್‌ ಮಾತನಾಡಿ, ಪಂಚಾಯತ್‌ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಹಾಗೂ ಕೆಲವು ಮನೆಗಳ ಬಳಿ ಬೀಳುವ ಸ್ಥಿತಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಅಪಾಯ ಸಂಭವಿಸುವ ಮೊದಲೇ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು. ನೂಜಿಬಾಳ್ತಿಲ ಗ್ರಾಮದ ಕನ್ವರೆಯಲ್ಲಿರುವ ಅಪಾಯಕಾರಿ ಮರ ಹಾಗೂ ರೆಂಜಿಲಾಡಿ ಗ್ರಾಮದ ಕೇಪು ಹಳ್ಳದ ಬಳಿ ಇರುವ ಅಪಾಯಕಾರಿ ಮರ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

Advertisement

ವಿದ್ಯುತ್‌ ಸಂಪರ್ಕ ನೀಡಿಲ್ಲ
ರೆಂಜಿಲಾಡಿ ಗ್ರಾಮದಲ್ಲಿ ಹಲವಾರು ಮನೆಗಳಿಗೆ ದೀನ ದಯಾಳ್‌ ಯೋಜನೆಯಲ್ಲಿ ವಿದ್ಯುತ್‌ ವೈರಿಂಗ್‌ ಮಾಡಿ ತಿಂಗಳುಗಟ್ಟಲೆ ಕಳೆದಿದ್ದರೂ ಮೆಸ್ಕಾಂ ವಿದ್ಯುತ್‌ ಸಂಪರ್ಕ ನೀಡಿರುವುದಿಲ್ಲ. ಪ್ರಶ್ನಿಸಿದರೆ, ಒಂದೊಂದು ಉತ್ತರ ನೀಡಿ ಪಾರಾಗುತ್ತಿದ್ದಾರೆ. ಆದರೆ ಇದೇ ಯೋಜನೆಯಲ್ಲಿ ಕೆಲವರಿಗೆ ಪಂಪ್‌ ಲೈನ್‌ಗೂ ವಿದ್ಯುತ್‌ ಸಂಪರ್ಕ ನೀಡಿದ್ದಾರೆ ಎಂದು ದೂರಿದ ಸದಸ್ಯ ರಾಜು ಗೋಳಿಯಡ್ಕ, ಈ ಕೂಡಲೇ ವಿದ್ಯುತ್‌ ಸಂಪರ್ಕ ನೀಡುವಂತೆ ನಿರ್ಣಯಿಸಿ ಮೆಸ್ಕಾಂಗೆ ಕಳುಹಿಸಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ತೋಮಸ್‌ ಕೆ.ಜೆ. ಅವರು ಮೀನಾಡಿ ಭಾಗದಲ್ಲೂ ಇಂತಹ ಹಲವಾರು ಸಮಸ್ಯೆಗಳಿವೆ ಎಂದರು.

ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ಸಹಿತ ಕೆಲವು ಕಡೆಗಳಲ್ಲಿ ಸಂಪರ್ಕ ಬಾಕಿ ಇದೆ ಎಂದು ಹರೀಶ್‌ ನಡವಳಿಕೆ ಹೇಳಿದರು. ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಇಂತಹ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆಸಿ ಸೂಚಿಸಲಾಗುವುದು ಎಂದರು.

ಚರಂಡಿ ಬಂದ್‌ ಮಾಡಬೇಡಿ
ಗ್ರಾ.ಪಂ. ವ್ಯಾಪ್ತಿಯಲ್ಲಿರುವ ರಸ್ತೆಗಳ ಇಕ್ಕೆಲ ಗಳಲ್ಲಿರುವ ಪೊದೆಗಳನ್ನು ತೆಗೆಸಲು ಸದಸ್ಯರೆಲ್ಲರು ಮುತುವರ್ಜಿ ವಹಿಸಬೇಕು. ರಸ್ತೆ ಬದಿಯ ಚರಂಡಿ ದುರಸ್ತಿ ಮಾಡಿದ್ದರೂ, ಕೆಲವರು ಅಂಗಡಿ, ಮನೆ, ಕಟ್ಟಡಗಳಿಗೆ ಹೋಗುವಲ್ಲಿ ಚರಂಡಿ ಬಂದ್‌ ಮಾಡಿದ್ದಾರೆ. ಚರಂಡಿ ಬಂದ್‌ ಮಾಡಿಸಿರುವವರು ನೀರು ಸರಿಯಾಗಿ ಹರಿದು ಹೋಗುವಂತೆ ಮಾಡಬೇಕು. ರಸ್ತೆ ಹಾಳಾಗದಂತೆ ಎಚ್ಚರ ವಹಿಸ ಬೇಕೆಂದು ಸದಾನಂದ ಗೌಡ ಸೂಚಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ರಜಿತಾ ಪದ್ಮನಾಭ, ವಲ್ಸಮ್ಮ ಕೆ.ಜೆ., ಹೊನ್ನಮ್ಮ, ಜಾನಕಿ, ಅಮ್ಮಣಿ ಜೋಸೆಫ್, ಪುಷ್ಪಲತಾ ಸಲಹೆ ನೀಡಿದರು. ಪಿಡಿಒ ಆನಂದ ಎ. ಸ್ವಾಗತಿಸಿದರು.

ಅರಣ್ಯ ಇಲಾಖೆಗೆ ಒತ್ತಾಯ
ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಮಾತನಾಡಿ, ರೆಂಜಿಲಾಡಿ ಗ್ರಾಮದ ಗರ್ಗಸ್‌ಪಾಲ್‌ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ 3 ಮರ ಗಳನ್ನು ತೆರವುಗೊಳಿಸಲಾಗಿದೆ. ಅರಣ್ಯ ನಿಯಮದಂತೆ ಒಮ್ಮೆ 3 ಮರಗಳನ್ನು ಮಾತ್ರ ತೆಗೆಯಲು ಅವಕಾಶವಿದ್ದು, ಅಗತ್ಯವಿದ್ದಲ್ಲಿ ಒಂದೆರಡು ಮರಗಳನ್ನು ತೆರವುಗೊಳಿಸಲು ಆಗ್ರಹಿಸಬೇಕಾಗಿದೆ ಎಂದರು. ಪ್ರತ್ಯುತ್ತರಿಸಿದ ಅಧ್ಯಕ್ಷ ಸದಾನಂದ ಗೌಡ, ತೀರಾ ಸಮಸ್ಯೆ ಇರುವ ಕಡೆಗಳಲ್ಲಿ ಮರ ತೆರವಿಗೆ ಕ್ರಮ ಕೈಗೊಳ್ಳುವಂತೆ ನಿರ್ಣಯಿಸಿ ಕಳುಹಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next