Advertisement

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

01:35 AM Oct 19, 2021 | Team Udayavani |

ಮಂಗಳೂರು: ಆಳಸಮುದ್ರ ಮೀನುಗಾರಿಕೆ ನಿರತ ಬೋಟ್‌ಅಪಾಯಕ್ಕೆ ಸಿಲುಕಿದಾಗ ಅಥವಾ ಮುನ್ನೆಚ್ಚರಿಕೆಯ ಮಾಹಿತಿ ತುರ್ತಾಗಿ ರವಾನಿಸಲು “ದ್ವಿಮುಖ ಸಂಪರ್ಕ’ ವ್ಯವಸ್ಥೆಯನ್ನು ಎಲ್ಲ ದೋಣಿಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.

Advertisement

ಮೀನುಗಾರರ ಸುರಕ್ಷೆ, ಬೋಟುಗಳ ರಕ್ಷಣೆ ಹಾಗೂ ರಾಷ್ಟ್ರೀಯ ಭದ್ರತೆಗೆ ಪೂರಕವಾಗಿ ಕಡಲಿನಲ್ಲಿರುವ ಬೋಟುಗಳ ಮೇಲೆ ಕರಾವಳಿ ತಟ ರಕ್ಷಣಾ ಪಡೆಯ ನಿಗಾ ಉದ್ದೇಶದಿಂದ ಹೊಸ ಯೋಜನೆ ಜಾರಿಯಾಗಿದೆ.

ಪರೀಕ್ಷಾರ್ಥವಾಗಿ ಮಂಗಳೂರಿನ ಒಂದು ಬೋಟ್‌ನಲ್ಲಿ ಸಾಧನವನ್ನು ಅಳವಡಿಸಲಾಗಿದೆ. ಇದರ ಮುಖೇನ ಸಿಗ್ನಲ್‌ ಲಭ್ಯತೆ, ಸಂಪರ್ಕ ಸಾಧ್ಯತೆ, ಚಾರ್ಜಿಂಗ್‌ ಇತ್ಯಾದಿ ವಿಚಾರಗಳ ಬಗ್ಗೆ ಕರಾವಳಿ ತಟ ರಕ್ಷಣಾ ಪಡೆಯ ತಾಂತ್ರಿಕ ವಿಭಾಗದ ತಂಡ ಪರಿಶೀಲನೆ ನಡೆಸುತ್ತಿದೆ. ಅಂತಿಮ ವರದಿಯನ್ನು ತಾಂತ್ರಿಕ ವಿಭಾಗವು ಮೀನುಗಾರಿಕೆ ಇಲಾಖೆಗೆ ನೀಡಲಿದ್ದು, ಅದರ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಸದ್ಯ ಬೋಟ್‌ಗಳ ನಡುವೆ ಸಂಪರ್ಕಕ್ಕಾಗಿ “ಟ್ರಾನ್ಸ್‌ ಪೋಂಡರ್‌’ ಎಂಬ ಸಾಧನವಿದೆ. ಇದರಿಂದ ಮೀನು ಗಾರಿಕೆ ಇಲಾಖೆ, ಕರಾವಳಿ ತಟ ರಕ್ಷಣಾ ಪಡೆಯೊಂದಿಗೆ ಆಗಲಿ, ಬೋಟ್‌ ಮಾಲಕರೊಂದಿ ಗಾಗಲಿ ಸಂವಹನ ಸಾಧ್ಯವಿಲ್ಲ. ಇದರ ಸಂಪರ್ಕ ವ್ಯಾಪ್ತಿಯೂ ಅಲ್ಪ.

ದ್ವಿಮುಖ ಸಂಪರ್ಕ ಸಾಧನ ಏಕೆ?
ಆಳಸಮುದ್ರ ಮೀನುಗಾರಿಕೆ ನಿತ್ಯ ಆತಂಕದ, ಅಪಾಯಕಾರಿ ಸಂಗತಿ. ಹವಾಮಾನ ವೈಪರೀತ್ಯದಿಂದ ಮೀನುಗಾರರ ಪ್ರಾಣ ಹಾನಿ, ಸೊತ್ತುಗಳು ನಷ್ಟವಾಗುತ್ತವೆ. ಹವಾಮಾನ ಮುನ್ಸೂಚನೆ ವರದಿ ವಿನಿಮಯದಲ್ಲಿ ವಿಳಂಬ, ತುರ್ತು ಸಂದರ್ಭದಲ್ಲಿ ನೆರವು ದೊರಕದೆ ಅವಘಡಗಳು ಸಂಭವಿಸುತ್ತವೆ. ತುರ್ತು ಮಾಹಿತಿ ಸಕಾಲದಲ್ಲಿ ತಲುಪದೆ ಕರಾವಳಿ ತಟ ರಕ್ಷಣಾ ಪಡೆ/ ಕಾವಲು ಪಡೆಯು ಸೂಕ್ತ ಸಮಯದಲ್ಲಿ ಅವಘಡ ಸಂಭವಿಸುವ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಸಮುದ್ರದ ಮೂಲಕ ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಕರಾವಳಿ ನೆಲ ಪ್ರವೇಶಿಸುವ ಅಪಾಯ ಕೂಡ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ದ್ವಿಮುಖ ಸಾಧನ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದೆ.

Advertisement

ಇದನ್ನೂ ಓದಿ:ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ಸಾಧನದಿಂದ ಲಾಭವೇನು?
ದ್ವಿಮುಖ ಸಂಪರ್ಕ ವ್ಯವಸ್ಥೆಯಿಂದ ಮೀನುಗಾರರು ತುರ್ತು ಸಂದರ್ಭ ಸಕಾಲದಲ್ಲಿ ಕರಾವಳಿ ತಟ ರಕ್ಷಣಾ ಪಡೆ, ದ.ಕ.ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆ ಪ್ರತಿನಿಧಿ, ಬೋಟ್‌ ಮಾಲಕರನ್ನು ಸಂಪರ್ಕಿಸಿ ನೆರವು ಕೋರಬಹುದು. ಜತೆಗೆ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕರಾವಳಿ ಕಾವಲು ಪಡೆಯು ಮೀನುಗಾರರ ದೋಣಿಗಳನ್ನು ಟ್ರ್ಯಾಕ್‌ ಮಾಡಬಹುದು. ಸಮುದ್ರದಲ್ಲಿ ಅಪರಿಚಿತ ದೋಣಿಗಳು ಇದ್ದರೆ ಪತ್ತೆ ಹಚ್ಚಬಹುದು. ಹವಾಮಾನ ಇಲಾಖೆಯ ತುರ್ತು ಸಂದೇಶಗಳನ್ನು ಕೂಡ ಕಡಲಿನಲ್ಲಿರುವ ಮೀನುಗಾರರಿಗೆ ತಲುಪಿಸಬಹುದು.

ಪ್ರಸಕ್ತ ಒಂದು ಬೋಟ್‌ಗೆ
ದ್ವಿಮುಖ ಸಂಪರ್ಕ ಸಾಧನ ಅಳವಡಿಸಲಾಗಿದ್ದು ಅದನ್ನು ಕರಾವಳಿ ತಟ ರಕ್ಷಣಾ ಪಡೆ ಪರಿಶೀಲನೆ ನಡೆಸುತ್ತಿದೆ. ಇದರ ಆಧಾರದಲ್ಲಿ ಸಾಧನದ ಮಹತ್ವದ ಬಗ್ಗೆ ರಕ್ಷಣಾ ಪಡೆಯು ವಿವರವಾದ ವರದಿಯನ್ನು ಮೀನುಗಾರಿಕಾ ಇಲಾಖೆಯ ಕೇಂದ್ರ ಕಚೇರಿಗೆ ನೀಡಲಿದೆ. ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಹರೀಶ್‌ ಕುಮಾರ್‌,
ಜಂಟಿ ನಿರ್ದೇಶಕರು (ಪ್ರಭಾರ)
ಮೀನುಗಾರಿಕೆ ಇಲಾಖೆ, ಮಂಗಳೂರು

ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳಲ್ಲಿ ದ್ವಿಮುಖ ಸಂವಹನ ಸಂಪರ್ಕ ಸಾಧನ ಕಡ್ಡಾಯ ಮಾಡಲಾಗುತ್ತದೆ. ಬೇಗನೆ ಬ್ಯಾಟರಿ ಖಾಲಿ ಯಾಗುತ್ತದೆ ಎಂಬ ಬಗ್ಗೆ ಆಕ್ಷೇಪವಿದೆ. ಬೋಟುಗಳಲ್ಲಿಯೇ ಸೋಲಾರ್‌ ಮೂಲಕ ರಿಚಾರ್ಜ್‌ ಮಾಡಿಕೊಳ್ಳಲು ಸಾಧ್ಯವಾಗುವಂತಹ ಯತ್ನಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
– ಎಸ್‌. ಅಂಗಾರ, ಸಚಿವರು, ಮೀನುಗಾರಿಕಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next