Advertisement
ರಾಜ್ಯದ ಪ್ರಜ್ಞಾವಂತ ಜನತೆ ಡಿ.5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಹೊಸದಾಗಿ ಬಿಜೆಪಿಗೆ ಸೇರ್ಪಡೆಯಾಗಿರುವ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಸಂಪುಟದ ಸಚಿವರು ಪ್ರಚಾರ ಮಾಡುತ್ತಿರುವ ವೈಖರಿಯನ್ನು ತಮಾಷೆಯಿಂದ ನೋಡುತ್ತಿದೆ.
Related Articles
Advertisement
ಪುಣ್ಯಕ್ಕೆ ಮಾಜಿ ಸಚಿವ ರೋಶನ್ ಬೇಗ್ ಅವರಿಗೆ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೇಟ್ ಕೊಡಲಿಲ್ಲ. ಇಂಟರ್‌ನ್ಯಾಶನಲ್ ಮೋನಿಟರಿ ಫಂಡ್ (ಐಎಂಎಫ್) ಎಂಬ ಬ್ಲೇಡ್ ಕಂಪೆನಿ ಎಸಗಿದ ಮಹಾ ವಂಚನೆಯ ಜೊತೆಗೆ ಬೇಗ್ ಹೆಸರು ತಳಕು ಹಾಕಿಕೊಂಡಿದೆ. ಐಎಂಎಫ್ “ಹಲಾಲ್ ಬ್ಯಾಂಕಿಂಗ್’ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಅಧಿಕ ಪ್ರತಿಫಲ ನೀಡುವ ಆಮಿಷ ತೋರಿಸಿ ಮುಸ್ಲಿಂರಿಂದ ಕೋಟಿಗಟ್ಟಲೆ ಹೂಡಿಕೆ ಸಂಗ್ರಹಿಸಿ ಪಂಗನಾಮ ಹಾಕಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಸರವಣ ಅವರನ್ನು ಕಣಕ್ಕಿಳಿಸಿದೆ. ಶಿವಾಜಿನಗರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ (ಶೇ.40). ರೋಶನ್ ಬೇಗ್ ಕಾಂಗ್ರೆಸ್ ಅಥವಾ ಜನತಾ ದಳ (ಎಸ್) ಟಿಕೇಟಿನಲ್ಲಿ ಈ ಕ್ಷೇತ್ರದಿಂದ ನಿರಾಯಾಸವಾಗಿ ಗೆಲ್ಲುತ್ತಿದ್ದರು. ಆದರೆ ಹಿಂದು ಅಭ್ಯರ್ಥಿಗಳಾದ ಕಾಂಗ್ರೆಸಿನ ಎ.ಕೆ.ಅನಂತಕೃಷ್ಣ ಹಾಗೂ ಬಿಜೆಪಿಯ ಸುರಾನ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎದುರು ಅವರು ಸೋತ ಇತಿಹಾಸವೂ ಇದೆ. ನಾಯ್ಡು ಎರಡು ಸಲ ರೋಶನ್ ಬೇಗ್ ಅವರನ್ನು ಸೋಲಿಸಿರುವುದರಿಂದ ಈ ಕ್ಷೇತ್ರಕ್ಕೆ ಅವರೇ ಉತ್ತಮ ಅಭ್ಯರ್ಥಿಯಾಗುತ್ತಿದ್ದರು.
ಬಹುತೇಕ ಬೆಂಗಳೂರಿನ ಭಾಗವೇ ಆಗಿರುವ ಹೊಸಕೋಟೆ ಉಪ ಚುನಾವಣೆಯಲ್ಲಾಗುತ್ತಿರುವ ಮುಜುಗರವನ್ನು ಮರೆಮಾಚಲು ಬಿಜೆಪಿ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಚಿಕ್ಕಬಳ್ಳಾಪುರದ ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಈ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಇತ್ತೀಚೆಗಿನವರೆಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿದ್ದ ಎಂ.ಟಿ.ಬಿ. ನಾಗರಾಜ್‌ರನ್ನು ಸೋಲಿಸಬೇಕೆನ್ನುವುದು ಶರತ್ ಬಚ್ಚೇಗೌಡರ ಗುರಿ. ರಾಜ್ಯದ ಸಿರಿವಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ನಾಗರಾಜ್ ಟೇಬಲ್ ಮೌಲ್ಡ್ ಇಟ್ಟಿಗೆ ವ್ಯವಹಾರದಲ್ಲಿ ತೊಡಗಿಕೊಂಡವರು. ಎಂ.ಟಿ.ಬಿ. ಎಂದರೆ ಮಂಜುನಾಥ ಟೇಬಲ್ ಬ್ರಿಕ್ಸ್‌ನ ಸಂಕ್ಷಿಪ್ತ ರೂಪ. ಕುರುಬ ಸಮುದಾಯಕ್ಕೆ ಸೇರಿದ ನಾಗರಾಜ್ ಮೊರಸು ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.
ಹೊಸಕೋಟೆ ರಣಾಂಗಣಶರತ್ ಬಚ್ಚೇಗೌಡರಿಗೆ ಟಿಕೆಟ್ ನಿರಾಕರಿಸಿರುವುದನ್ನು ಸಂಸತ್ ಅಥವಾ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕುಟುಂಬದ ಹಿಡಿತವನ್ನು ಮುರಿಯುವ ಪ್ರಯತ್ನ ಎಂದು ವ್ಯಾಖ್ಯಾನಿಸಬಹುದು. ಅವರ ಅಜ್ಜ ಚನ್ನಬೈರೇಗೌಡ ಸ್ವತಂತ್ರ ಪಾರ್ಟಿಯ ವಿಧಾನ ಪರಿಷತ್ ಸದಸ್ಯರಾಗಿ ದ್ದರು. ಕಾಂಗ್ರೆಸಿನ ಮಾಜಿ ಸಚಿವ ಎನ್. ಚಿಕ್ಕೇಗೌಡ, ಚನ್ನಬೈರೇಗೌಡರಿಗೆ ಸಂಬಂಧಿಯಾಗಬೇಕು. ಇನ್ನೋರ್ವ ಸಂಬಂಧಿ ವಿ. ಮನೇಗೌಡ ಅವರೂ ಎಂಎಲ್‌ಸಿಯಾಗಿದ್ದವರು. ಚನ್ನಬೈರೇ ಗೌಡರ ಅಳಿಯ ಡಿ. ಎಸ್. ಗೌಡ ಪಕ್ಕದ ದೇವನಹಳ್ಳಿ ಕ್ಷೇತ್ರದ ಶಾಸಕರಾಗಿದ್ದರು. ಶರತ್ ಗೌಡರ ತಂದೆ ಬಚ್ಚೇಗೌಡ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದರೂ ಹೊಸಕೋಟೆಯಿಂದ ಗೆದ್ದು ಸಚಿವರಾಗಿದ್ದಾರೆ. ಒಂದು ರೀತಿಯಲ್ಲಿ ಬಚ್ಚೇಗೌಡ ರಿಗೀಗ ಉಭಯ ಸಂಕಟ. ಅವರು ಪಕ್ಷ ನಿಷ್ಠೆಯನ್ನು ಆಯ್ದುಕೊಳ್ಳುತ್ತಾರೋ/ಪುತ್ರನ ರಾಜಕೀಯ ಭವಿಷ್ಯ ವನ್ನು ಆಯ್ದುಕೊಳ್ಳುತ್ತಾರೋ ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಅದು ಅಸಹಜವಲ್ಲ. ದೇವೆಗೌಡ ಕುಟುಂಬ ಮಾತ್ರವಲ್ಲ ರಾಜಕೀಯವಾಗಿ ಉಳಿದವರ ಬೆಳವಣಿಗೆಯನ್ನು ತಡೆಯುವ ಇನ್ನೂ ಹಲವು ಕುಟುಂಬಗಳು ಇವೆ. ಗೋಕಾಕದ ಜಾರಕಿಹೊಳಿ ಕುಟುಂಬ ಇದಕ್ಕೆ ಇನ್ನೊಂದು ಉದಾಹರಣೆ. ಸಚಿವರಾಗಿ ಪಕ್ಷಾಂತರಿಗಳು
ಕುಟುಂಬ ರಾಜಕಾರಣಕ್ಕೆ ಪ್ರಮುಖ ರಾಜಕೀಯ ಪಕ್ಷಗಳನ್ನೇ ದೂಷಿಸಬೇಕು. ಈ ಪಕ್ಷಗಳು ಜಾತಿ ಮತ್ತು ಗೆಲುವಿನ ಸಾಧ್ಯತೆಯನ್ನು ಮಾನದಂಡವಾಗಿರಿಸಿಕೊಂಡು ಪಕ್ಷಾಂತರಿಗಳನ್ನು ಬರಮಾಡಿಕೊಳ್ಳುತ್ತವೆ.
ಆದರೆ ಈಗ ರಾಜ್ಯದ ಜನತೆಯ ಮುಂದಿರುವ ಪ್ರಶ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಹರಿಗೆ ಗೆದ್ದು ಬಂದರೆ ಮಂತ್ರಿ ಮಾಡುತ್ತೇವೆ ಎಂಬುದಾಗಿ ನೀಡಿರುವ ಭರವಸೆ ಕುರಿತಾದದ್ದು. ಈ ಅಂಕಣದಲ್ಲಿ ಹಲವಾರು ಬಾರಿ ಹೇಳಿರುವಂತೆ ಮಂತ್ರಿಗಳ ಆಯ್ಕೆ ವಿಚಾರದಲ್ಲಿ ಜನರನ್ನು ಗುತ್ತಿಗೆ ತೆಗೆದುಕೊಂಡಿರುವಂತೆ ಭಾವಿಸಬಾರದು. ಆದರೆ ಈಗ ಆಗುತ್ತಿರುವುದು ಅದೇ. ನ್ಯಾಯಾಂಗವೇ ರಚಿಸಿರುವ ಕೊಲಿಜಿಯಂ ವ್ಯವಸ್ಥೆಯಲ್ಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ವಕೀಲರೂ ಸೇರಿ ಹಲವರು ದೂರುತ್ತಿದ್ದಾರೆ. ಹೀಗಿರುವಾಗ ಮಂತ್ರಿಗಳ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ನಿರೀಕ್ಷಿಸಬಹುದೆ? ಜನರು ತಮ್ಮ ಮೇಲೆ ಹೇರಿದವರನ್ನು ತೆಪ್ಪಗೆ ಒಪ್ಪಿಕೊಳ್ಳಬೇಕಷ್ಟೆ. ಚುನಾವಣೆಯಲ್ಲಿ ಸ್ಪರ್ಧಿಸದ ಇಬ್ಬರನ್ನು ಸೇರಿ ಅನರ್ಹಗೊಂಡಿರುವ ಹೆಚ್ಚಿನ ಶಾಸಕರಿಗೆ ಸರಕಾರ ನಡೆಸುವ ಅರ್ಹತೆ ಇಲ್ಲ. ಇಂಥ ಸಚಿವರು ಇಲ್ಲದೆಯೂ ಆಡಳಿತ ನಡೆಸಬಹುದು. ಓರ್ವ ರಾಜಕೀಯ ನಾಯಕನ ಆಯ್ಕೆ ಅವನಿಗೆ ಅಥವಾ ಅವನ ಕುಟುಂಬಕ್ಕಷ್ಟೆ ಕಳವಳದ ಅಥವಾ ಹೆಮ್ಮೆಯ ವಿಷಯವಾಗಿರಬಹುದು. ಆದರೆ ಸದ್ಯ ಯಡಿಯೂರಪ್ಪ ನೇತೃತ್ವದ 4ನೇ ಸರಕಾರದ ಅಳಿವು ಉಳಿವಿನ ಪ್ರಶ್ನೆಯೂ ಇದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ˆಕುಮಾರಸ್ವಾಮಿಯವರ ಸರಕಾರ ಅದಾಗಿಯೇ ಪತನಗೊಳ್ಳುವ ತನಕ ತಾಳ್ಮೆಯಿಂದ ಕಾಯ ಬೇಕಿತ್ತು. ಆಗ ಜೆಡಿಎಸ್ ಸರಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿತ್ತು. ಒಂದು ವೇಳೆ ಜೆಡಿಎಸ್ ಸಿದ್ಧಾಂತದ ನೆಪ ಹೇಳಿ ಬೆಂಬಲ ನೀಡದಿದ್ದರೆ ಮರಳಿ ಹೊಸದಾಗಿ ಚುನಾವಣೆ ನಡೆಸುವುದೇ ಉಳಿಯುವ ದಾರಿಯಾಗುತ್ತಿತ್ತು. ಪಕ್ಷಾಂತರದಲ್ಲಿ ತನ್ನ ಪಾತ್ರವಿರುವುದನ್ನು ಬಿಜೆಪಿ ಒಪ್ಪಿಕೊಳ್ಳುವುದು ಅನಿವಾರ್ಯ. ಹೀಗಾಗಿ ಉಪಚುನಾವಣೆಯನ್ನು ರಾಜ್ಯದ ಮೇಲೆ ಹೇರುವ ಮೂಲಕ ಸಮಯ, ಸಂಪನ್ಮೂಲವನ್ನು ವ್ಯರ್ಥ ಗೊಳಿಸಿದ ದೂಷಣೆಯನ್ನೂ ಅದು ಹೊತ್ತುಕೊಳ್ಳಬೇಕಾಗುತ್ತದೆ. ಪದೇ ಪದೆ ಚುನಾವಣೆ ನಡೆಸುವುದರಿಂದ ಸಂಪನ್ಮೂಲ,ಸಮಯ ನಷ್ಟವಾಗುವು ದನ್ನು ತಡೆಯಲು ಲೋಕಸಭೆ-ವಿಧಾನಸಭೆಗಳಿಗೆ ಏಕಕಾಕಲಕ್ಕೆ ಚುನಾವಣೆ ನಡೆಸಬೇಕೆಂದು ಪ್ರಧಾನಿ ಮೋದಿ ಪ್ರತಿಪಾದಿಸುತ್ತಿದ್ದಾರೆ. ಆದರೆ ರಾಜಕೀಯ ನಾಯಕರ ಇತಿಹಾಸವನ್ನು ಗಮನಿಸಿದರೆ ಗೆದ್ದವರು ಪಕ್ಷಾಂತರ ಮಾಡುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. ಎರಡನೇ ಹಂತದಲ್ಲಿ ನಡೆದ ಆಪರೇಷನ್ ಕಮಲದಿಂದ ಬಿಜೆಪಿಯ ವರ್ಚಸ್ಸಿಗೆ ಸಾಕಷ್ಟು ಹಾನಿಯಾಗಿದೆ. “ಭಿನ್ನವಾದ ಪಕ್ಷ’ ಎಂಬ ತನ್ನ ಹಿರಿಮೆಯನ್ನು ಈ ಪಕ್ಷ ಗಂಭೀರವಾಗಿ ಪರಿಗಣಿಸಿ ತಕ್ಷಣದ ಲಾಭಕ್ಕಾಗಿ ಹಾತೊರೆದರೆ ಭವಿಷ್ಯದಲ್ಲಿ ಅಪಾಯವಿದೆ ಎಂಬುದನ್ನು ಅರಿತುಕೊಳ್ಳಬೇಕು ಮತ್ತು ಅಧಿಕಾರದ ನಾಗಾಲೋಟದಲ್ಲಿ ಉಳಿದ ಪಕ್ಷಗಳನ್ನು ಮೂರ್ಖರನ್ನಾಗಿ ಮಾಡಬಾರದು. -ಅರಕೆರೆ ಜಯರಾಮ್