Advertisement

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

11:11 PM Mar 27, 2024 | Team Udayavani |

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವುದರಲ್ಲಿ ವಿಶೇಷವೇನಿಲ್ಲವಾದರೂ ಇದನ್ನು ಮುಂದಿಟ್ಟು ವಿಶ್ವದ ಕೆಲವು ದಿಗ್ಗಜ ರಾಷ್ಟ್ರಗಳು ಭಾರತಕ್ಕೆ ಪ್ರಜಾಸತ್ತೆ, ಕಾನೂನಿನ ಪಾಠ ಹೇಳಲು ಮುಂದಾಗಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ. ಕೇಜ್ರಿವಾಲ್‌ ಬಂಧನದ ಕುರಿತಾಗಿ ಜರ್ಮನಿ, ಅಮೆರಿಕದ ವಿದೇಶಾಂಗ ಸಚಿವಾಲಯಗಳು ನೀಡಿರುವ ಪ್ರತಿಕ್ರಿಯೆ, ಪ್ರಜಾಸತ್ತೆ ಮತ್ತು ಕಾನೂನಿನ ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನಿಸಿದಾಗ ಭಾರತದ ಆಂತರಿಕ ವಿಚಾರಗಳಲ್ಲಿ ಈ ದೇಶಗಳು ಮೂಗು ತೂರಿಸಲು ಯತ್ನಿಸಿರುವುದು ಸುಸ್ಪಷ್ಟ.

Advertisement

ಅರವಿಂದ ಕೇಜ್ರಿವಾಲ್‌ ಬಂಧನ, ವಿಚಾರಣೆ ಇವೆಲ್ಲವೂ ದೇಶದ ಕಾನೂನು ವ್ಯವಸ್ಥೆಯಡಿಯಲ್ಲಿಯೇ ನಡೆಯುತ್ತಿವೆ. ರಾಜಕಾರಣಿಗಳ ವಿರುದ್ಧದ ಪ್ರಕರಣ ಎಂದ ಮೇಲೆ ಆಡಳಿತ-ವಿಪಕ್ಷಗಳ ವಾಗ್ಯುದ್ಧ, ಆರೋಪ-ಪ್ರತ್ಯಾರೋಪ ಮತ್ತಿತರ ಬೆಳವಣಿಗೆಗಳು ಸಾಮಾನ್ಯ. ಇವುಗಳಿಗೂ ಕಾನೂನು ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲವಾಗಿದ್ದು, ಕಾನೂನು ತನ್ನದೇ ಆದ ಹಾದಿಯಲ್ಲಿ ಸಾಗುತ್ತದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದ್ದು, ಈ ಬಗ್ಗೆ ದೇಶದ ಯಾವೊಬ್ಬ ಪ್ರಜೆಯೂ ಅಪನಂಬಿಕೆಯನ್ನು ಹೊಂದಲು ಸಾಧ್ಯವಿಲ್ಲ. ಕೇಜ್ರಿವಾಲ್‌ ಬಂಧನವೂ ದೇಶದ ಕಾನೂನು ಚೌಕಟ್ಟಿನೊಳಗೇ ನಡೆದಿದ್ದು, ವಿಚಾರಣೆ ಕೂಡ ನಿಷ್ಪಕ್ಷವಾಗಿಯೇ ನಡೆಯುತ್ತಿದೆ. ರಾಜಕೀಯ ಕೆಸರೆರಚಾಟ ಏನೇ ಇದ್ದರೂ ಅದು ಕೇವಲ ರಾಜಕೀಯಕ್ಕೆ ಸೀಮಿತವೇ ಹೊರತು ಅದನ್ನು ದೇಶದ ನ್ಯಾಯಾಂಗ ವ್ಯವಸ್ಥೆಗೆ ಆರೋಪಿಸಲಾಗದು.

ಇಂತಹ ಪರಿಸ್ಥಿತಿಯಲ್ಲಿ ಜರ್ಮನಿ, ಅಮೆರಿಕದ ವಿದೇಶಾಂಗ ಸಚಿವಾಲಯಗಳು ಕೇಜ್ರಿವಾಲ್‌ ಬಂಧನದ ಬಗೆಗೆ ಯಾವುದೋ ಒತ್ತಡಕ್ಕೆ ಸಿಲುಕಿದ ಮಾದರಿಯಲ್ಲಿ ಹೇಳಿಕೆಗಳನ್ನು ನೀಡಿದ್ದೇ ಅಲ್ಲದೆ ಭಾರತಕ್ಕೆ ಪ್ರಜಾಪ್ರಭುತ್ವ, ನ್ಯಾಯಾಂಗ ಸ್ವಾತಂತ್ರ್ಯದ ಬಗೆಗೆ ಬೋಧನೆ ಮಾಡಹೊರಟಿರುವುದು ತೀರಾ ಅನವಶ್ಯಕ ಮತ್ತು ಅತಿರೇಕದ ಕ್ರಮವಾಗಿದೆ. ಕೇಜ್ರಿವಾಲ್‌ ಬಂಧನ, ಭಾರತದ ಆಂತರಿಕ ವಿಷಯವಾಗಿದ್ದು, ಇದರಿಂದ ಜನರ ಸ್ವಾತಂತ್ರ್ಯ, ನ್ಯಾಯಾಂಗ ಅಥವಾ ಆಡಳಿತ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗುವಂಥ ಬೆಳವಣಿಗೆಗಳು ದೇಶದಲ್ಲಿ ನಡೆದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಾಕ್ಸಮರವನ್ನೇ ಮುಂದಿಟ್ಟು ವಿದೇಶಗಳ ವಿದೇಶಾಂಗ ಸಚಿವಾಲಯಗಳು ಹೇಳಿಕೆ ನೀಡುತ್ತವೆ ಎಂದಾದರೆ ಅದಕ್ಕಿಂತ ಬಲುದೊಡ್ಡ ವಿಪರ್ಯಾಸ ಬೇರೊಂದಿಲ್ಲ.

ಜರ್ಮನಿ ಮತ್ತು ಅಮೆರಿಕದ ರಾಜತಾಂತ್ರಿಕರನ್ನು ಕರೆಸಿ, ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟ ಮಾತುಗಳಲ್ಲಿ ಈ ಬಗ್ಗೆ ತನ್ನ ವಿರೋಧವನ್ನು ದಾಖಲಿಸಿದೆ. ದೇಶವೊಂದರ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದು ದೇಶದ ಸಾರ್ವಭೌಮತೆಯ ಮೇಲೆ ಸವಾರಿ ಮಾಡಿದಂತೆ ಮಾತ್ರವಲ್ಲದೆ ದ್ವಿಪಕ್ಷೀಯ ಸಂಬಂಧದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಖಡಕ್‌ ಆಗಿಯೇ ತಿಳಿಸಿದೆ. ಇನ್ನಾದರೂ ವಿಶ್ವ ರಾಷ್ಟ್ರಗಳು ಬೇರೊಂದು ದೇಶದ ಬಗೆಗೆ ಹೇಳಿಕೆ ನೀಡುವು ದಕ್ಕೂ ಮುನ್ನ ಒಂದಿಷ್ಟು ರಾಜತಾಂತ್ರಿಕ ಮುತ್ಸದ್ಧಿತನವನ್ನು ಪ್ರದರ್ಶಿಸಬೇಕಾಗಿದೆ. ನಮ್ಮ ನೆರೆಯ ಚೀನ, ಪಾಕಿಸ್ಥಾನದ ಮಾದರಿಯಲ್ಲಿ ಭಾರತದಲ್ಲಿ ನಡೆಯುವ ಸಣ್ಣಪುಟ್ಟ ಬೆಳವಣಿಗೆಗಳಿಗೂ ಪ್ರತಿಕ್ರಿಯಿಸುವ ಚಾಳಿಯಿಂದ ವಿಶ್ವ ರಾಷ್ಟ್ರಗಳು ಹೊರಬರಬೇಕು. ಇದರ ಬದಲು ವಿಶ್ವ ಸಮುದಾಯವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಭಯೋತ್ಪಾದನೆ ದಮನದ ವಿಚಾರದಲ್ಲಿ ಈ ರಾಷ್ಟ್ರಗಳು ಕಿಂಚಿತ್‌ ಗಮನಹರಿಸಿದ್ದಲ್ಲಿ ಜಾಗತಿಕವಾಗಿ ಶಾಂತಿ ನೆಲೆಸುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next