ತಿರುವನಂತಪುರಂ:ಎಡೆಬಿಡದೆ ಸುರಿಯುತ್ತಿರುವ ಮಳೆ, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು ಕೇರಳದ ನಿವಾಸಿಗಳಿಗೆ ದುಃಸ್ವಪ್ನವಾಗಿದ್ದು, ಬುಧವಾರವೂ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ರಾಜ್ಯದ ಎಂಟು ಜಿಲ್ಲೆಗಳಿಗೆ ಗುರುವಾರದವರೆಗೂ ರೆಡ್ ಅಲರ್ಟ್ ಘೋಷಿಸಿದೆ.
ವಯನಾಡ್, ಕೋಝಿಕೋಡ್, ಕಣ್ಣೂರು, ಕಾಸರಗೋಡು, ಮಲಪ್ಪುರಂ, ಪಾಲಕ್ಕಾಡ್, ಇಡುಕ್ಕಿ ಹಾಗೂ ಎರ್ನಾಕುಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ.
ಮಳೆ ಹಾಗೂ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 45ಕ್ಕೆ ಏರಿದೆ. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ಲಾಣದಲ್ಲಿ ಶನಿವಾರದವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಕಳೆದ ಹಲವಾರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದ ನಿಟ್ಟಿನಲ್ಲಿ ವಿಮಾನಗಳನ್ನು ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸದಂತೆ ಸೂಚನೆ ನೀಡಿ ಬೇರೆ ನಿಲ್ದಾಣದತ್ತ ಕಳುಹಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಪೆರಿಯಾರ್ ನದಿ ತುಂಬಿ ಹರಿಯುತ್ತಿದ್ದು, ನೀರು ವಿಮಾನ ನಿಲ್ದಾಣದ ರನ್ ವೇ ಕೂಡಾ ಜಲಾವೃತವಾಗಿದೆ. ಆಗಸ್ಟ್ 18ರವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಹಲವು ಡ್ಯಾಂಗಳ ಗೇಟ್ ಗಳನ್ನು ತೆರೆದ ಪರಿಣಾಮ ನೀರಿನ ಮಟ್ಟ ಹೆಚ್ಚಳವಾಗಿದೆ. ಇಡುಕ್ಕಿಯ ವಿವಿಧೆಡೆ ಭೂಕುಸಿತ ಹಾಗೂ ರಸ್ತೆ, ಸೇತುವೆಗಳೆಲ್ಲ ಜಲಾವೃತವಾಗಿದೆ. ಪ್ರವಾಸಿಗರಿಗೂ ಕೂಡಾ ಕೇರಳಕ್ಕೆ ಆಗಮಿಸದಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ವರದಿ ವಿವರಿಸಿದೆ.