ರಾಷ್ಟ್ರೀಯ ದಿನವನ್ನು ಸಂಭ್ರಮದಿಂದ ಆಚರಿಸಲು ಓಮನ್‌ನ ಬೀದಿ ಬೀದಿಗಳು ಒಂದೆಡೆ ಶೃಂಗಾರಗೊಳ್ಳುತ್ತಿದ್ದವು. ಈ ಸುಸಂದರ್ಭವನ್ನು ಕಣ್ತುಂಬಿಕೊಳ್ಳಲು ಪೂರ್ತಿ ದೇಶವೇ ತುದಿಗಾಲಲ್ಲಿ ನಿಂತಿತ್ತು. ಆದರೆ ಇವರ ನಡುವಿನಲ್ಲಿನಲ್ಲಿಯೇ ಸದ್ದಿಲ್ಲದೆ ಓರ್ವ ಕಲಾವಿದೆ ಮಾತ್ರ ಈ ವಿಶೇಷ ದಿನಕ್ಕೆ ತನ್ನದೇ ಆದ ಕೊಡುಗೆ ನೀಡಲು ಸಜ್ಜಾಗಿದ್ದರು. ಗುಂಡುಸೂಜಿ ಮತ್ತು ದಾರವನ್ನು ಬಳಸಿ ರಾಷ್ಟ್ರಪುರುಷ ಸುಲ್ತಾನ್ ಕ್ವಾಬೂಸ್ ಬಿನ್ ಸೈಯದ್ ಕಲಾಕೃತಿ ರಚಿಸಿ ಗೌರವ ಸಲ್ಲಿಸುವ ಮೂಲಕ ಎಲ್ಲರರ ಮೆಚ್ಚುಗೆಗೆ ಪಾತ್ರರಾದರು. ಅವರೇ ಮಂಗಳೂರು ಮೂಲದ ಡಾ| ಹಫ್ಸಾ ಭಾನು ಅಬಿದ್.
ವೃತ್ತಿಪರ ದಂತ ವೈದ್ಯೆಯಾಗಿ ಓಮನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರದ್ದು ಒಂದು ಉತ್ತಮ ವಿಷಯನ್ನಾಧರಿಸಿ ಕಲಾಕೃತಿ ರಚಿಸುವ ಹವ್ಯಾಸ. ಸುಲ್ತಾನ್ ಕ್ವಾಬೂಸ್ ಬಿನ್ ಸೈಯದ್ ಅವರ 3ft x 3ft ಕಲಾಕೃತಿ ರಚನೆಗೆ 5000 ಗುಂಡು ಸೂಜಿಗಳು ಮತ್ತು 900 ಯಾರ್ಡ್ ( ಸುಮಾರು 823 ಮೀ.)ನಷ್ಟು ದಾರವನ್ನು ಬಳಸಿದ್ದಾರೆ. ಕಲಾಕೃತಿ ರಚನೆಗೆ ಸುಮಾರು 3 ತಿಂಗಳು ಸಮಯ ಸಂದಿದೆ.
ಡಾ| ಹಫ್ಸಾಭಾನು ಅಬಿದ್ ಅವರು ಇಂಡಿಯನ್ ಸ್ಕೂಲ್ ಮಸ್ಕತ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, ದಂತವೈದ್ಯಶಾಸ್ತ್ರವನ್ನು ಮಂಗಳೂರಿನ ದೇರಳಕಟ್ಟೆಯ ಯೆನೆಪೋಯಾ ಡೆಂಟಲ್ ಕಾಲೇಜಿನಲ್ಲಿ ಅಭ್ಯಸಿಸಿದ್ದಾರೆ. ಕಳೆದ ವರ್ಷ ಇವರು ರಚಿಸಿದ ಸುಲ್ತಾನ್ ಕ್ವಾಬೂಸ್ ಬಿನ್ ಸೈಯದ್ ಭಾವಚಿತ್ರ ಮೆಚ್ಚುಗೆ ಗಳಿಸಿದ್ದು, ಈ ಬಾರಿಯೂ ಹೊಸತೇನಾದರೂ ಮಾಡಬೇಕು ಎಂಬ ಯೋಚನೆಯಲ್ಲಿದ್ದಾರಂತೆ ಡಾ| ಹಫಾÕ ಭಾನು. ಈ ಕಲೆಯನ್ನು ಸ್ವತಃ ಅವರೇ ಅಭ್ಯಸಿಸಿದ್ದು ಯಾವುದೇ ಔಪಚಾರಿಕ ತರಬೇತಿ ಪಡೆದಿಲ್ಲ.
ಮಗನ ಶಾಲೆಯ ಚಟುವಟಿಕೆಗಳೇ ದಾರ ಬಳಸಿ ಚಿತ್ರ ರಚನೆ ಮಾಡುವ ನನ್ನ ಕಲೆಗೆ ಪ್ರೇರಣೆ. ಈಗ ಕೇವಲ ಚಿಕ್ಕ ಪುಟ್ಟ ಚಿತ್ರಗಳ ರಚನೆ ಮಾತ್ರ ಮಾಡುತ್ತಿದ್ದು, ಮುಂದೆ ಇನ್ನಷ್ಟು ಮಾಡಬೇಕೆಂಬ ತುಡಿತವಿದೆ. ಸಂಬಂಧಿಕರು, ಸ್ನೇಹಿತರು ನನ್ನ ಕಲೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದಾರೆ. ಕೇವಲ ಜಿಯೋಮ್ಯಾಟ್ರಿಕ್ ವಿನ್ಯಾಸಗಳಿಗೆ ಮಾತ್ರ ನನ್ನನ್ನು ನಾನು ಒಗ್ಗಿಸಿಕೊಳ್ಳದೆ, ಅರೇಬಿಕ್ ಕ್ಯಾಲಿಗ್ರಾಫಿ, ಸೆನಿಕ್ ಡಿಸೈನ್ಸ್, ಪೋಟ್ರೇಟ್ಸ್ ಮತ್ತು ವಾಲ್‌ಆರ್ಟ್‌ಗಳನ್ನೂ ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಾರೆ ಡಾ| ಹಫ್ಸಾ ಭಾನು.