Advertisement
ಅಧಿಕ ಲಾಭಾಂಶದ ಆಮಿಷವೊಡ್ಡಿ 55 ಸಾವಿರಕ್ಕೂ ಹೆಚ್ಚಿನ ಜನರಿಂದ 1,400 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಐಎಂಎ ಪ್ರಕರಣದಲ್ಲಿ ಸಂತ್ರಸ್ತರಿಗೆ ಸದ್ಯಕ್ಕೆ ಪರಿಹಾರ ಸಿಗುವುದೇ ಅನುಮಾನ ಎನ್ನಲಾಗುತ್ತಿದೆ. ಐಎಂಎ ಸಂಸ್ಥೆಗೆ ಸೇರಿದ ಒಟ್ಟು 300 ಕೋಟಿ ರೂ. ಮೌಲ್ಯದ ಚಿರ ಹಾಗೂ ಸ್ಥಿರ ಆಸ್ತಿಯನ್ನು ಇದುವರೆಗೆ ಐಎಂಎ ಸಕ್ಷಮ ಪ್ರಾಧಿಕಾರವು ಸುಪರ್ದಿಗೆ ಪಡೆದುಕೊಂಡಿದೆ.
Related Articles
Advertisement
ಉ.ಪ್ರದೇಶ, ದೆಹಲಿಯಲ್ಲಿ ಕಟ್ಟಡ ಜಪ್ತಿ ಬಾಕಿ:
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಐಎಂಎಗೆ ಸೇರಿದ ಒಂದೂವರೆ ಕೋಟಿ ರೂ. ಮೌಲ್ಯದ 8 ಎಕರೆ ಜಾಗವನ್ನು ಸಕ್ಷಮ ಪ್ರಾಧಿಕಾರವು ಇತ್ತೀಚೆಗೆ ಪತ್ತೆ ಹಚ್ಚಿದೆ. ಇದನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ದೆಹಲಿಯಲ್ಲಿ 26 ಲಕ್ಷ ರೂ. ಮೌಲ್ಯದ 2 ಕಟ್ಟಡ ವಶಪಡಿಸಿಕೊಳ್ಳಬೇಕಿದೆ. ಇದುವರೆಗೆ ಜಪ್ತಿಪಡಿಸಿಕೊಂಡಿರುವ ಐಎಂಎಗೆ ಸೇರಿದ 300 ಕೋಟಿ ರೂ. ಹೊರತುಪಡಿಸಿ ಉಳಿದ ದುಡ್ಡನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದೇ ನಿಗೂಢವಾಗಿದೆ.
ಇಬ್ಬರು ಐಪಿಎಸ್ ಅಧಿಕಾರಿಗಳು ಪಾರು:
ಹಿರಿಯ ಐಪಿಎಸ್ ಅಧಿಕಾರಿಗಳಾದ ಅಜಯ್ ಹಿಲೋರಿ ಹಾಗೂ ಹೇಮಂತ್ ನಿಂಬಾಳ್ಕರ್ ಐಎಂಎ ಹಗರಣದಲ್ಲಿ ಶಾಮೀಲಾಗಿರು ವುದಾಗಿ ಸಿಬಿಐ ತನಿಖಾ ವರದಿಯಲ್ಲಿ ಆರೋಪಿಸಿತ್ತು. ಇದರ ಬೆನ್ನಲ್ಲೇ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಇಬ್ಬರನ್ನೂ ಅಭಿಯೋಜನೆಗೆ ಒಳಪಡಿಸಲು ಕೇಂದ್ರ ಸರ್ಕಾರವು ಅಭಿಯೋಜನಾ ಮಂಜೂರಾತಿ ನೀಡಿತ್ತು. ಇದೀಗ ಇಲಾಖಾ ವಿಚಾರಣೆಯಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧದ ಆರೋಪ ಗಳು ಸಾಬೇತಾಗದ ಹಿನ್ನೆಲೆಯಲ್ಲಿ ವಿಚಾರಣೆ ಮುಕ್ತಾಯಗೊಳಿಸಲಾಗಿದೆ. ಸದ್ಯ ಇಬ್ಬರು ಅಧಿಕಾರಿಗಳು ಪ್ರಕರಣದಿಂದ ಪಾರಾಗಿದ್ದಾರೆ.
200 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಕ್ಷಮ ಪ್ರಾಧಿಕಾರದ ಸುಪರ್ದಿಗೆ ನೀಡುವಂತೆ ಇಡಿಗೆ ಮನವಿ ಮಾಡಿದ್ದೇವೆ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ನೀಡುವುದು ಸಕ್ಷಮ ಪ್ರಾಧಿಕಾರದ ಗುರಿಯಾಗಿದೆ.-ಆದಿತ್ಯ ಆಮ್ಲನ್ ಬಿಸ್ವಾಸ್, ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಅಧಿಕಾರಿ.
-ಅವಿನಾಶ ಮೂಡಂಬಿಕಾನ