ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಸೇರಿ ಮೂವರು ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಹಿಂದೆ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ, ಪುಲಕೇಶಿನಗರ ಉಪ ವಿಭಾಗದ ಎಸಿಪಿ ಯಾಗಿದ್ದ ಎಸ್. ರಮೇಶ್ ಕುಮಾರ್ ಹಾಗೂ ಕಮರ್ಷಿ ಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ರಮೇಶ್‌ಗೆ ನೋಟಿಸ್ ಜಾರಿ ಮಾಡಿದ್ದು, ಕ್ರಮವಾಗಿ ಆಗಸ್ಟ್ 2, 4 ಹಾಗೂ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಶಿವಾಜಿನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ಐಎಂಎ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸಾವಿರಾರು ಮಂದಿಯಿಂದ ಲಕ್ಷಾಂತರ ರೂ.ಹಣ ಹೂಡಿಕೆ ಮಾಡಿಸಿಕೊಂಡಿದೆ. ಆದರೆ, ನಿಗದಿತ ಸಮಯಕ್ಕೆ ಹಣ ವಾಪಸ್ ಕೊಡದೆ ವಂಚಿಸಿದ ಸಂಬಂಧ ಕೆಲ ದೂರುಗಳು ಬಂದಿದ್ದರೂ ಮೂವರು ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿಲ್ಲ. ಅಲ್ಲದೆ, ಮನ್ಸೂರ್ ಖಾನ್ ವಂಚನೆ ವಿಚಾರ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯಲೋಪ ಎಸಗಿದ್ದಾರೆ. ಇದರೊಂದಿಗೆ ತನ್ನ ವಿರುದ್ಧ ಬಂದಿದ್ದ ದೂರುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಮೂವರು ಅಧಿಕಾರಿಗಳಿಗೆ ಮನ್ಸೂರ್ ಖಾನ್ ಹಣ ಕೊಟ್ಟಿದ್ದಾನೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಕುರಿತು ಮಾಹಿತಿ ಸಂಗ್ರಹಿಸಲು ನೋಟಿಸ್ ನೀಡಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದರು.
ರೌಡಿಶೀಟರ್ ಇಸ್ತಿಯಾಕ್ ಬಂಧನ: ಶಿವಾಜಿನಗರದ ಬಿಬಿಎಂಪಿ ಸದಸ್ಯೆ ಫರೀದಾ ಅವರ ಪತಿ ಇಸ್ತಿಯಾಕ್ ಪೈಲ್ವಾನ್‌ನನ್ನು ಎಸ್‌ಐಟಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ಆರೋಪಿ ಮನ್ಸೂರ್ ಖಾನ್‌ನಿಂದ ಇಸ್ತಿಯಾಕ್ ಎರಡು ಕೋಟಿ ರೂ.ಪಡೆದುಕೊಂಡಿದ್ದ ಆರೋಪದ ಮೇರೆಗೆ ಬಂಧಿಸಲಾಗಿದೆ. ಇಸ್ತಿಯಾಕ್ ವಿರುದ್ಧ 1993ರಿಂದಲೂ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಐಟಿ ತಿಳಿಸಿದೆ.
ಇಂದು ವಿಚಾರಣೆ
ಪ್ರಕರಣ ಸಂಬಂಧ ಬುಧವಾರ ಅನರ್ಹ ಶಾಸಕ ರೋಷನ್ ಬೇಗ್ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ವಿಚಾರಣೆಗೆ ಹಾಜ ರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಜಮೀರ್, ಆಸ್ತಿಯೊಂದನ್ನು ಖರೀದಿಸಿದ್ದೆ. ಅದೇ ವಿಚಾರಕ್ಕೆ ನೋಟಿಸ್ ನೀಡಿದ್ದಾರೆ. ಈ ಹಿಂದೆಯೇ ನೋಟಿಸ್ ಜಾರಿ ಮಾಡಬೇಕಿತ್ತು. ತಡವಾಗಿ ನೋಟಿಸ್ ನೀಡಿದ್ದಾರೆ. ಯಾಕೆ ತಡ ಮಾಡಿದರು ಎಂದು ಗೊತ್ತಿಲ್ಲ. ಆದರೂ ಬುಧವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು.