ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ.
ಈ ಹಿಂದೆ ಬಹುಕೋಟಿ ಐಎಂಎ ವಂಚನೆ ಕುರಿತು ಯಾವುದೇ ಲೋಪ ನಡೆದಿಲ್ಲ ಎಂದು ಸಂಸ್ಥೆಯ ಪರ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ಗೆ ಅನುಕೂಲಕರ ವರದಿ ನೀಡಲು ಜಿಲ್ಲಾಧಿಕಾರಿ ವಿಜಯ ಶಂಕರ್, ಒಂದೂವರೆ ಕೋಟಿ ರೂ.ಲಂಚ ಪಡೆದಿದ್ದರು. ಈ ಆರೋಪದ ಮೇಲೆ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ತಿಳಿಸಿದೆ.
ಕೆಲ ವರ್ಷಗಳ ಹಿಂದೆಯೇ ಐಎಂಎ ಸಮೂಹ ಸಂಸ್ಥೆ ವಿರುದ್ಧ ಕೆಲ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಸರ್ಕಾರ ಆರೋಪಿತ ಸಂಸ್ಥೆ ಹಾಗೂ ಆರೋಪಿ ಮನ್ಸೂರ್ ಖಾನ್ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿತ್ತು.
ಆದರೆ, ಜಿಲ್ಲಾಧಿಕಾರಿ ವಿಜಯ ಶಂಕರ್ ಸತ್ಯಾಂಶವನ್ನು ಮರೆಮಾಚಿ, ಸಂಸ್ಥೆಯ ಪರ ವರದಿ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಒಂದೂವರೆ ಕೋಟಿ ರೂ. ಅನ್ನು ಲಂಚದ ರೂಪದಲ್ಲಿ ಸ್ವೀಕರಿಸಿದ್ದರು. ಇದಕ್ಕೆ ಪೂರಕವಾದ ಸಾಕ್ಷ್ಯಗಳು ದೊರೆತಿದ್ದು, ಈ ಆಧಾರದ ಮೇಲೆ ಬಂಧಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ಕರ್ತವ್ಯಲೋಪದಿಂದ ವಂಚಕ ಸಂಸ್ಥೆ ತನ್ನ ಗ್ರಾಹಕರನ್ನು ವೃದ್ಧಿಪಡಿಸಿಕೊಂಡಿದಲ್ಲದೆ, ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡಿದೆ. ಈ ಮೂಲಕ ಇದುವರೆಗೂ ಸಾವಿರಾರು ಕೋಟಿ ರೂ.ವಂಚನೆ ಮಾಡಿದೆ ಎಂದು ಎಸ್‌ಐಟಿ ತಿಳಿಸಿದೆ.
ಜುಲೈ 5ರಂದು ಮನ್ಸೂರ್ ಖಾನ್‌ನಿಂದ ನಾಲ್ಕುವರೆ ಕೋಟಿ ರೂ. ಪಡೆದು ಆತನಿಗೆ ಅನುಕೂಲಕರ ವರದಿ ನೀಡಿದ ಆರೋಪದ ಮೇಲೆ ಬೆಂಗಳೂರು ಉತ್ತರ ಉಪವಿಭಾಧಿಕಾರಿ ಎಲ್.ಸಿ.ನಾಗರಾಜ್ ಹಾಗೂ ಗ್ರಾಮಲೆಕ್ಕಿಗ ಮಂಜುನಾಥ್‌ರನ್ನು ಬಂಧಿಸಲಾಗಿತ್ತು.