Advertisement
ಉದ್ಯೋಗಿಗಳಿಗೆ ಗೊತ್ತಿಲ್ಲ: “ನಮ್ಮದು ಮಧ್ಯಮವರ್ಗ ಕುಟುಂಬ. ಪತಿ ಐಎಂಎ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನಾನು ಹೌಸ್‌ವೈಫ್. ಕೆಲ ವರ್ಷಗಳ ಹಿಂದೆ ನಮ್ಮ ನಿವೇಶನವೊಂದನ್ನು ಮಾರಾಟ ಮಾಡಿ ಬೇರೆಡೆ ಮತ್ತೂಂದು ನಿವೇಶನ ಖರೀದಿ ಮಾಡಲಾಗಿತ್ತು. ಈ ವೇಳೆ ಉಳಿದಿದ್ದ 15 ಲಕ್ಷ ರೂ. ಅನ್ನು ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದೇವೆ.ಆದರೆ, ಸಂಸ್ಥೆ ಸರಿಯಾಗಿ ಬಡ್ಡಿ ಹಣ ಕೂಡ ಕೊಡುತ್ತಿರಲಿಲ್ಲ. ಕೇಳಿದರೆ ಇಲ್ಲದ ಸಬೂಬು ಹೇಳುತ್ತಿತ್ತು. ನಮ್ಮಂತೆ ಹತ್ತಾರು ಮಂದಿ ನೌಕರರು ಲಕ್ಷ ಲಕ್ಷ ಹಣ ಹಾಕಿದ್ದಾರೆ. ನಮ್ಮೆಲ್ಲರ ಗತಿ ಏನು? ವರ್ಷಗಟ್ಟಲೇ ಕೆಲಸ ಮಾಡಿಕೊಂಡು ಬರುತ್ತಿರುವ ಸಂಸ್ಥೆಯ ಸಿಬ್ಬಂದಿಗೆ ಈ ಅವ್ಯವಹಾರದ ಬಗ್ಗೆ ಮಾಹಿತಿಯಿಲ್ಲ. ಹಣ ಹಿಂದಿರುಗಿಸುವಂತೆ ಕೇಳಿದರೆ, ಸಾರ್ವಜನಿಕರಿಗೆನೊ ನಂಬಿಕೆ ಇಲ್ಲ.ಸಂಸ್ಥೆಯ ನೌಕರರಾದ ನಿಮಗೂ ನಂಬಿಕೆ ಇಲ್ಲವೇ? ಎಂದುಸುಮ್ಮನಿರಿಸುತ್ತಿದ್ದ’ ಎಂದು ಮನ್ಸೂರ್ ವಿರುದ್ಧ ಐಎಂಎನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರ ಪತ್ನಿ ಬನಶಂಕರಿ ನಿವಾಸಿ ಶೋಭಾ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಅಂಕಪಟ್ಟಿಗಳನ್ನು ಕೊಡುತ್ತಿಲ್ಲ: ಅದೇ ಸಂಸ್ಥೆಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಮತ್ತೂಬ್ಬ ಉದ್ಯೋಗಿ ಆರ್.ಟಿ.ನಗರದ ಮೊಹಮ್ಮದ್ ಷರೀಫ್, 20 ಲಕ್ಷ ರೂ. ಹೂಡಿಕೆ ಮಾಡಿದ್ದೇನೆ. ವಂಚನೆ ಬೆಳಕಿಗೆ ಬರುತ್ತಿದ್ದಂತೆ ಕೆಲಸಕ್ಕೆ ರಾಜೀನಾಮೆ ಕೊಟ್ಟು, ನಾನು ಸಲ್ಲಿಸಿರುವ ಅಸಲಿ ಅಂಕಪಟ್ಟಿಗಳನ್ನು ಕೊಡುವಂತೆ ಕೇಳಿದರೂ, ಸರಿಯಾಗಿ ಸ್ಪಂದನೆ ಇಲ್ಲ. ದಯವಿಟ್ಟು ನಮ್ಮ ಹಣ ಹಾಗೂ ಅಂಕಪಟ್ಟಿಯನ್ನು ಕೊಡಿಸಿ ಎಂದು ಅಂಗಲಾಚಿದರು.
ದಿವ್ಯಾಂಗನ ಸಹೋದರಿ ವಿವಾಹಕ್ಕೆ ಹಣವಿಲ್ಲ: “ನಾನು ಹುಟ್ಟುತ್ತ ಅಂಗವಿಕಲನಾಗಿದ್ದು, ನನ್ನ ಮನೆಯಲ್ಲಿರುವ ಇತರೆ ಮೂವರು ಕೂಡ ವಿಕಲಚೇತನರಾಗಿದ್ದಾರೆ. ಮನ್ಸೂರ್ ಖಾನ್ ಮಾತು ನಂಬಿ, ಲಾಭಾಂಶ ಕೊಡುತ್ತೇನೆ ಎಂದು ಎರಡೂವರೆ ಲಕ್ಷ ರೂ. ಹಾಕಿಸಿದ್ದ. ಇದೀಗ ಮೋಸ ಮಾಡಿ ಪರಾರಿಯಾಗಿದ್ದೇನೆ. ಕೆ.ಆರ್.ಮಾರುಕಟ್ಟೆಯಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದೊಂದು ರೂ. ಕಷ್ಟ ಪಟ್ಟು ಸಂಪಾದಿಸಿದ್ದೇನೆ. ಆ ಹಣದಲ್ಲೇ ಸಹೋದರಿಯ ಮದುವೆ ಮಾಡಲು ಸಿದ್ಧತೆ ನಡೆಸಿದ್ದೆವು. ಇದೇ ತಿಂಗಳ 23 ರಂದು ಮದುವೆ ನಿಶ್ಚಯವಾಗಿತ್ತು. ಎರಡು ತಿಂಗಳಿಂದ ಹಣ ಕೇಳುತ್ತಾ ಬಂದಿದ್ದೇನೆ. ಕೊಡುತ್ತೇನೆ ಅಂತಾ ಹೇಳುತ್ತಿದ್ದ ಆತ, ಹೇಳದೆ, ಕೇಳದೆ ನಾಪತ್ತೆಯಾಗಿದ್ದಾನೆ. ಏನು ಮಾಡುತ್ತಿದ್ದಾರೆ ಪೊಲೀಸರು? ಸಣ್ಣ-ಪುಟ್ಟ ಕಳ್ಳನನ್ನು ಬಂಧಿಸುವ ಪೊಲೀಸರು, ಮನ್ಸೂರ್ ಖಾನ್‌ನನ್ನು ಬಂಧಿಸಲು ಸಾಧ್ಯವಿಲ್ಲವೇ? ತಾಕತ್ತು ಇದ್ದರೆ ಬಂಧಿಸಿ, ನಮಗೆ ನ್ಯಾಯಕೊಡಿಸಲಿ ಎಂದು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು ಸಲೀಂ.
ಖಾತೆ ವಿವರ ಯಾರಿಗೂ ನೀಡಬೇಡಿ: ಐಎಂಎ ಕಂಪನಿಯಿಂದ ಈಗಾಗಲೇ ವಂಚನೆಗೊಳಗಾಗಿರುವ ಹೂಡಿಕೆದಾರರ ಪರಿಸ್ಥಿತಿಯ ಲಾಭ ದುರುಪಯೋಗ ಪಡಿಸಿಕೊಳ್ಳಲು ಹಲವು ವಂಚಕರು ಯತ್ನಿಸಿರುವ ಸಂಗತಿ ಬಯಲಾಗಿದೆ. ಪರಿಸ್ಥಿತಿಯ ಲಾಭ ಪಡೆದು ವಂಚನೆಗೊಳಗಾಗಿರುವ ಹೂಡಿಕೆದಾರರ ಬ್ಯಾಂಕ್ ಖಾತೆವಿವರಗಳನ್ನು ಪಡೆದು ಅವರ ಅಕೌಂಟ್‌ಗೆ ಕನ್ನ ಹಾಕಲು ವಂಚಕರು ಯತ್ನಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ವಂಚಕರ ಮಾತುಗಳಿಗೆ ಮರುಳಾಗದಂತೆ ಸಾರ್ವಜನಿಕರ ಮನವಿ ಮಾಡಿದ್ದಾರೆ. ಐಎಂಎ ಹೆಸರಿನಲ್ಲಿ ದೂರವಾಣಿ ಕರೆಮಾಡಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಹಾಕುತ್ತಿದ್ದು, ಬ್ಯಾಂಕ್ ಖಾತೆ ವಿವರ, ಒಟಿಪಿ ಸೇರಿದಂತೆ ಇನ್ನಿತರೆ ಮಾಹಿತಿ ಕೇಳಿದರೆ ಯಾರೊಂದಿಗೂ ಹಂಚಿಕೊಳ್ಳಬಾರದು. ಈ ರೀತಿಯ ಕರೆಗಳು ಬಂದರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡುವಂತೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಆದೇಶ ಹೊರಡಿಸಿದ್ದಾರೆ.