ಬೆಂಗಳೂರು: ಅಧಿಕ ಬಡ್ಡಿ ಆಮಿಷವೊಡ್ಡಿ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ಇಡೀ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿದ ಐ ಮಾನಿಟರಿ ಅಡ್ವೈಸರಿ (ಐಎಂಎ)ಕಂಪನಿಯಲ್ಲಿ ಸುಮಾರು 21 ಸಾವಿರ ಮಂದಿ 1,230 ಕೋಟಿ ರೂ. ಹೂಡಿಕೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ನಡುವೆ ಐಎಂಎಗೆ 9 ಲಕ್ಷ ರೂ. ಹೂಡಿಕೆ ಮಾಡಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ವಂಚನೆ ಸುದ್ದಿ ಹೊರಬೀಳುತ್ತಿದ್ದಂತೆ ಖನ್ನತೆಗೆ ಒಳಗಾಗಿದ್ದರು.
ಈ ಮಧ್ಯೆ ಕಂಪನಿಯ ಮೂರು ಕಚೇರಿಗಳಿಗೆ ಬೀಗ ಮುದ್ರೆ ಹಾಕಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಮನ್ಸೂರ್ ಖಾನ್‌ಗೆ ಸೇರಿದ ರೇಂಜ್ ರೋವರ್ ಹಾಗೂ ಜಾಗ್ವಾರ್ ಕಾರನ್ನು ಜಪ್ತಿ ಮಾಡಿದ್ದಾರೆ. ಮತ್ತೂಂದೆಡೆ ಪ್ರಕರಣದ ತನಿಖೆ ಆರಂಭಿಸಿರುವ ಎಸ್‌ಐಟಿ ಸಂಸ್ಥೆಯ ಏಳು ಮಂದಿ ನಿರ್ದೇಶಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. 21 ಸಾವಿರ ಹೂಡಿಕೆದಾ ರರ ಪೈಕಿ ಈಗಾಗಲೇ 20 ಸಾವಿರ ಮಂದಿ (ಬುಧವಾರದವರೆಗೆ) ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಜ್ಯುವೆಲ್ಲರ್ಸ್ ಮತ್ತು ಐಎಂಎ ಗೋಲ್ಡ್ ಲೋನ್ ಹಾಗೂ ಜಯನಗರದಲ್ಲಿರುವ ಸಂಸ್ಥೆಯ ಕಚೇರಿಗೂ ಬೀಗ ಮುದ್ರೆ ಹಾಕಿ, ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹೂಡಿಕೆದಾರರ ನಿರಂತರ ಪ್ರತಿಭಟನೆ ಹಾಗೂ ಆಕ್ರೋಶದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಸ್ಥೆಯ ಕಚೇರಿಗಳಿಗೆ ಬೀಗ ಹಾಕಲಾಗಿದೆ. ಹಾಗೆಯೇ ನಗರದಲ್ಲಿ ವಂಚಕ ಕಂಪನಿಗೆ ಸೇರಿದ ಇತರೆ ಕಚೇರಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ಮನ್ಸೂರ್ ಖಾನ್ ಒಂದು ತಿಂಗಳ ಹಿಂದೆಯೇ ತಲೆಮರೆಸಿಕೊಳ್ಳಲು ಸಿದ್ದತೆ ನಡೆಸಿದ್ದು, 25 ದಿನಗಳ ಹಿಂದೆಯೇ ಕುಟುಂಬದ ಜತೆ ದುಬೈಗೆ ತೆರಳಲು ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ. ಅದಕ್ಕೆ ಪೂರಕವಾದ ಮಾಹಿತಿಗಳು ಕೂಡ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಮೈಸೂರು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲೂ ಸಾವಿರಾರು ಮಂದಿ ಐಎಂಎನಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವುದು ಪತ್ತೆಯಾಗಿದೆ. ಮೈಸೂರಿನ ಉದಯಗಿರಿ ಠಾಣೆಯೊಂದರಲ್ಲೇ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ದೂರು ನೀಡಿದ್ದಾರೆ.