Advertisement

ಐಎಂಎ: ಶೀಘ್ರ 53 ಸಾವಿರ ಠೇವಣಿದಾರರಿಗೆ ಹಣ ವಾಪಸ್‌

11:12 AM Sep 11, 2022 | Team Udayavani |

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯ ಹೂಡಿಕೆದಾರರಿಗೆ ಸಿಹಿ ಸುದ್ದಿ ನೀಡಲು ಐಎಂಎ ಸಕ್ಷಮ ಪ್ರಾಧಿಕಾರ ಸಿದ್ಧತೆ ನಡೆಸುತ್ತಿದೆ. ಜಪ್ತಿ ಮಾಡಿರುವ ಐಎಂಎಗೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹರಾಜು ಪ್ರಕ್ರಿಯೆ ನಡೆಸಿ ವಂಚನೆಗೊಳಗಾದ 53,100 ಠೇವಣಿದಾರರಿಗೆ ಶೀಘ್ರದಲ್ಲೇ ಹಿಂತಿರುಗಿಸಲಿದೆ.

Advertisement

ಐಎಂಎನಲ್ಲಿ ಹಣ ಹೂಡಿಕೆ ಮಾಡಿದ 59 ಸಾವಿರ ಠೇವಣಿದಾರರು ಪರಿಹಾರಕ್ಕಾಗಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 50 ಸಾವಿರ ರೂ. ಹಾಗೂ ಅದಕ್ಕಿಂತ ಕಡಿಮೆ ಮೊತ್ತ ಹೂಡಿದ 5,900 ಠೇವಣಿದಾರರ ಕೈಗೆ ಸಂಪೂರ್ಣ ಮೊತ್ತ ಹಿಂತಿರುಗಿಸಲಾಗಿದೆ. ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೂ ಪೂರ್ಣ ಪ್ರಮಾಣದಲ್ಲಿ ಚಿನ್ನಾಭರಣ ವಾಪಸ್ಸಾಗಿದೆ. ಆದರೆ, 1 ಲಕ್ಷ ರೂ. ನಿಂದ 60 ಲಕ್ಷ ರೂ.ವರೆಗೂ ಹಣ ಹೂಡಿಕೆ ಮಾಡಿರುವ 53,100 ಠೇವಣಿದಾರರಿಗೆ ಜಪ್ತಿ ಮಾಡಿರುವ ಐಎಂಎ ಆಸ್ತಿಗಳ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಹಂತ-ಹಂತವಾಗಿ ದುಡ್ಡು ಹಿಂತಿರುಗಿಸಲಾಗುವುದು. ಶೀಘ್ರದಲ್ಲೇ ಠೇವಣಿದಾರರಿಗೆ ಹೂಡಿಕೆ ಹಣ ಮರಳಲಿದೆ ಎಂದು ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಅಧಿಕಾರಿ ಅಮಲಾನ್‌ ಆದಿತ್ಯ ಬಿಸ್ವಾಸ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಕೋಟ್ಯಂತರ ರೂ. ಮೌಲ್ಯದ ಆಸ್ತಿ ಜಪ್ತಿ: ಐಎಂಎ ವಿಶೇಷ ನ್ಯಾಯಾಲಯದ ಆದೇಶದಂತೆ ಐಎಂಎ ಸಂಸ್ಥಾಪಕ ಮನ್ಸೂರ್‌ ಖಾನ್‌ ಹಾಗೂ ಸಂಸ್ಥೆಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿ ಹರಾಜು ಹಾಕಿ ವಂಚನೆಗೊಳಗಾದವರಿಗೆ ಹಿಂತಿರುಗಿಸುವ ಕಾರ್ಯದಲ್ಲಿ ಸಕ್ಷಮ ಪ್ರಾಧಿಕಾರ ನಿರತವಾಗಿದೆ. 100 ಕೋಟಿ ರೂ.ಮೌಲ್ಯದ ಜಮೀನು, ನಿವೇಶನ ಹಾಗೂ 110 ಕೋಟಿ ರೂ.ಗೂ ಅಧಿಕ ಮೌಲ್ಯದ 4 ಕಟ್ಟಡಗಳನ್ನು ಪ್ರಾಧಿಕಾರ ಸುಪರ್ಧಿಗೆ ಪಡೆದಿದೆ. 15 ಕೋಟಿ ರೂ. ಮೌಲ್ಯದ ವಿವಿಧ ಫ್ಲ್ಯಾಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ಮನ್ಸೂರ್‌ನಿಂದ ಫ್ಲ್ಯಾಟ್‌ ಅನ್ನು ಬಾಡಿಗೆಗೆ ಪಡೆದವರಿಗೆ ಒಟ್ಟು ಸುಮಾರು 1 ಕೋಟಿ ರೂ. ನೀಡಿ, ಫ್ಲ್ಯಾಟ್‌ ಬಿಡಿಸಿಕೊಳ್ಳಲಾಗುವುದು. ಐಎಂಎಗೆ ಸೇರಿದ 72 ಕೋಟಿ ರೂ. ಮೌಲ್ಯದ ಚಿನ್ನಾಭರಣ, 5 ಕೋಟಿ ರೂ.ಗೂ ಅಧಿಕ ಮೌಲ್ಯದ ಐಷಾರಾಮಿ ವಾಹನಗಳು, ಲಕ್ಷಾಂತರ ರೂ. ಮೌಲ್ಯದ ಟೀವಿಗಳು ಇನ್ನಿತರ ವಸ್ತುಗಳನ್ನು ಇತ್ತೀಚೆಗೆ ವಶಕ್ಕೆ ಪಡೆಯಲಾಗಿದೆ. ಕೆಲ ದಿನಗಳಲ್ಲೇ ಇವುಗಳ ಹರಾಜು ನಡೆಯಲಿದೆ. ಒಟ್ಟಾರೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿಯನ್ನು ಸಕ್ಷಮ ಪಾಧಿಕಾರ ಜಪ್ತಿ ಮಾಡಿಕೊಳ್ಳಲಿದೆ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2 ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್‌ ರೋವರ್‌ ಐಷಾರಾಮಿ ಕಾರನ್ನು 1 ಕೋಟಿ ರೂ.ಗೆ ಹರಾಜು ಹಾಕಲು ಮುಂದಾಗಿದ್ದರೂ, ಇಷ್ಟೊಂದು ಮೊತ್ತಕ್ಕೆ ಖರೀದಿಸಲು ಯಾರೂ ಮುಂದೆ ಬಂದಿಲ್ಲ. ಇನ್ನು ಉಳಿದಂತೆ ಜಾಗ್ವರ್‌, ಫಾರ್ಚುನರ್‌ ಸೇರಿ ನಾಲ್ಕು ಐಷಾರಾಮಿ ಕಾರುಗಳು ಹರಾಜಿನಲ್ಲಿ ಮಾರಾಟವಾಗಿದೆ. ಆರು ಕಾರುಗಳು, ಆ್ಯಂಬುಲೆನ್ಸ್‌ ಸೇರಿದಂತೆ ಸಣ್ಣ-ಪುಟ್ಟ ವಾಹನಗಳ ಹರಾಜು ಪ್ರಕ್ರಿಯೆ ಬಾಕಿ ಇದೆ.

Advertisement

ಬೇಗ್‌ ಆಸ್ತಿಯೂ ಮುಟ್ಟುಗೋಲು : ಐಎಂಎಗೆ ಸೇರಿದ ನೂರಾರು ಕೋಟಿ ರೂ.ಮಾಜಿ ಸಚಿವ ರೋಷನ್‌ ಬೇಗ್‌ ಖಜಾನೆ ಸೇರಿರುವುದು ಸಿಬಿಐ, ಇಡಿ ತನಿಖೆಯಲ್ಲಿ ದೃಢಪಟ್ಟಿದೆ.

ಬೇಗ್‌ ಆಸ್ತಿಯನ್ನೂ ಮುಟ್ಟುಗೋಲು:

ಹಾಕಿ ಹರಾಜು ಹಾಕಲು ಪ್ರಾಧಿಕಾರಕ್ಕೆ ಕೋರ್ಟ್‌ನಿಂದ ಅನುಮತಿ ಸಿಕ್ಕಿದೆ. ಇದೀಗ ಬೇಗ್‌ರ ಆಸ್ತಿಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ಐಎಂಎಗೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಹರಾಜಾದ ಕೂಡಲೇ ಠೇವಣಿದಾರರಿಗೆ ಬಾಕಿ ಹಣ ಹಿಂತಿರುಗಿಸಲು ಸಕ್ಷಮ ಪ್ರಾಧಿಕಾರ ಮುಂದಾಗಲಿದೆ. -ಅಮಲಾನ್‌ ಆದಿತ್ಯ ಬಿಸ್ವಾಸ್‌, ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಅಧಿಕಾರಿ

 

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next