Advertisement

IMA ಪ್ರಕರಣ ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಡಿಸಿಪಿ ಅಜಯ್‌ ಹಿಲ್ಲೋರಿ ವಿರುದ್ಧ ಸಿಬಿಐ FIR

09:50 AM Feb 05, 2020 | sudhir |

ಬೆಂಗಳೂರು: ಬಹುಕೋಟಿ ಐ ಮಾನಿಟರಿ ಅಡ್ವೆಸರಿ(ಐಎಂಎ) ವಂಚನೆ ಪ್ರಕರಣದಲ್ಲಿ ರಾಜ್ಯದ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳಾದ ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಡಿಸಿಪಿ ಅಜಯ್‌ ಹಿಲ್ಲೋರಿ ಸೇರಿ ಒಂಭತ್ತು ಮಂದಿ ಮತ್ತು ಐಎಂಎ ಕಂಪನಿ ಹಾಗೂ ಇತರರ ವಿರುದ್ಧ ಬೆಂಗಳೂರಿನ ಸಿಬಿಐ(ಭ್ರಷ್ಟಾಚಾರ ನಿಗ್ರಹ ದಳ) ಭ್ರಷ್ಟಾಚಾರ ಹಾಗೂ ಅಪರಾಧ ಒಳ ಸಂಚು ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

Advertisement

ಪ್ರಕರಣದಲ್ಲಿ ಎ1(ಮೊದಲ ಆರೋಪಿ) ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಎಂ.ರಮೇಶ್‌, ಎ2 ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಐಪಿಎಸ್‌ ಅಧಿಕಾರಿ ಅಜಯ್‌ ಹಿಲ್ಲೋರಿ, ಎ3 ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಗೌರಿಶಂಕರ್‌, ಎ4 ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಡಿವೈಎಸ್ಪಿಯಾಗಿದ್ದ ಇ.ಬಿ.ಶ್ರೀಧರ್‌, ಎ5 ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿದ್ದ ಹೇಮಂತ್‌ ನಿಂಬಾಳ್ಕರ್‌, ಎ6 ಪ್ರಕರಣದ ಮಾಸ್ಟರ್‌ ಮೈಂಡ್‌, ಐಎಂಎ ಮುಖ್ಯಸ್ಥ ಮೊಹಮ್ಮದ್‌ ಮನ್ಸೂರ್‌ ಖಾನ್‌, ಎ7 ನಿರ್ದೇಶಕ ನಿಜಾವುದ್ದೀನ್‌, ಎ8 ನಿರ್ದೇಶಕ ವಸೀಂ, ಎ9 ಅಶ್ರದ್‌ ಖಾನ್‌, ಎ10 ಐಎಂಎ ಸಂಸ್ಥೆ ಮತ್ತು ಎ11 ಸರ್ಕಾರದ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಅಧಿಕ ಬಡ್ಡಿ ಹಾಗೂ ಇತರೆ ಆಮಿಷಗಳನ್ನೊಡ್ಡಿ ಸಾವಿರಾರು ಮಂದಿಯಿಂದ ಸುಮಾರು ನಾಲ್ಕು ಸಾವಿರ ಕೋಟಿ ರೂ. ಸಂಗ್ರಹಿಸಿ ವಂಚಿಸಿದ ಪ್ರಕರಣ ಸಂಬಂಧ ಆರಂಭದಲ್ಲಿ ಡಾ ಬಿ.ಆರ್‌.ರವಿಕಾಂತೇಗೌಡ ನೇತೃತ್ವದ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆ ನಡೆಸಿ ಮನ್ಸೂರ್‌ ಖಾನ್‌, ನಿರ್ದೇಶಕರು, ಮೌಲ್ವಿಗಳು, ಮಧ್ಯವರ್ತಿಗಳು ಹಾಗೂ ಒಬ್ಬರು ಐಎಎಸ್‌ ಅಧಿಕಾರಿಗಳು, ಉಪವಿಭಾಗಾಧಿಕಾರಿ ಸೇರಿ ಸುಮಾರು 25ಕ್ಕೂ ಅಧಿಕ ಮಂದಿಯನ್ನು ಬಂಧಿಸಿತ್ತು. ಜತೆಗೆ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಯಲ್ಲಿರುವ ವಸ್ತುಗಳು ಹಾಗೂ ಕೋಟ್ಯಂತರ ರೂ. ನಗದು ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕಳೆದ ವರ್ಷ ಸರ್ಕಾರ ಪ್ರಕರಣದ ಹೆಚ್ಚಿನ ತನಿಖೆಗೆ ಸಿಬಿಐಗೆ ವಹಿಸಿತ್ತು.

ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದ ಸಿಬಿಐ ಅಧಿಕಾರಿಗಳು ಎಸ್‌ಐಟಿ ತನಿಖಾ ವರದಿಯನ್ನಾಧರಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಕೂಡ ಸಲ್ಲಿಸಿತ್ತು. ಬಳಿಕ ಐಎಂಎ ಮುಖ್ಯಸ್ಥ ಮನ್ಸೂರ್‌ ಖಾನ್‌ನ ಅವ್ಯವಹಾರ ಹಾಗೂ ಅಕ್ರಮ ಹಣ ಸಂಗ್ರಹಕ್ಕೆ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಮತ್ತು ಡಿಸಿಪಿ ಅಜಯ್‌ ಹಿಲ್ಲೋರಿ ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂಬ ಗಂಭೀರ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ಸರ್ಕಾರ ಅನುಮತಿ ನೀಡಿದ ಮೇರೆಗೆ ಸಿಬಿಐ ಫೆ.1ರಂದು ಎಲ್ಲ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಅಪರಾಧ ಒಳಸಂಚು ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದೆ.

ಆರೋಪ ಏನು?
ಹೆಚ್ಚಿನ ಲಾಭಾಂಶ ಕೊಡುವ ಆಮಿಷವೊಡ್ಡಿ ಅಕ್ರಮವಾಗಿ ಹಣ ಹೂಡಿಕೆ ಮಾಡುತ್ತಿರುವ ಐಎಂಎ ಕಂಪನಿಯ ಬಗ್ಗೆ 2016ರಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಕಂಪನಿಯ ಬಗ್ಗೆ ನಿಗಾವಹಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿತ್ತು. ಆಗ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಅಜಯ್‌ ಹಿಲ್ಲೋರಿ ಮೂಲಕ ಇನ್‌ಸ್ಪೆಕ್ಟರ್‌ ರಮೇಶ್‌ಗೆ ಪತ್ರದ ಮೂಲಕವೇ ಸೂಚಿಸಲಾಗಿತ್ತು. ಆದರೆ, ಸೂಕ್ತ ತನಿಖೆ ನಡೆಸದೆ 2016ರ ಆ. 29ರಂದು ಪ್ರಕರಣವನ್ನು ಮುಕ್ತಗೊಳಿಸಿದ್ದರು. ಐಎಂಎ ಕಂಪನಿ ನಿಯಮ ಪ್ರಕಾರವೇ ವ್ಯವಹಾರ ನಡೆಸುತ್ತಿದೆ. ಯಾವುದೇ ಹೂಡಿಕೆದಾರ ದೂರು ನೀಡದೇ ಇರುವುದರಿಂದ ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ (ಕೆಪಿಐಡಿ) ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ರಮೇಶ್‌ ವರದಿ ನೀಡಿದ್ದರು ಎಂದು ಸಿಬಿಐ ಎಫ್ಐಆರ್‌ನಲ್ಲಿ ತಿಳಿಸಿದೆ.

Advertisement

ಆದರೆ, ಈ ವರದಿಯನ್ನು ತಿರಸ್ಕರಿಸಿದ ಆರ್‌ಬಿಐ ನೇರವಾಗಿ ಕಂದಾಯ ಇಲಾಖೆಗೆ ಪತ್ರ ಬರೆದು ಮತ್ತೂಮ್ಮೆ ಪರಿಶೀಲಿಸುವಂತೆ ಸೂಚಿಸಿತ್ತು. ಈ ಮಧ್ಯೆ ಐಎಂಎ ಕಂಪನಿ ವಿರುದ್ಧ ದೂರುಗಳು ಬಂದಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪೊಲೀಸ್‌ ತನಿಖೆಗೆ ಸೂಚಿಸಿದ್ದರು. ಆದರೆ, ಪಿಐ ರಮೇಶ್‌, ಪಿಎಸ್‌ಐ ಗೌರಿಶಂಕರ್‌ ಮತ್ತು ಡಿಸಿಪಿ ಅಜಯ್‌ ಹಿಲೋರಿ ಯಾವುದೇ ಕ್ರಮ ತೆಗೆದುಕೊಳ್ಳದೆ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ ಎಂಬ ನೆಪವೊಡ್ಡಿ ಪ್ರಕರಣ ಮುಚ್ಚಿ ಹಾಕಿದ್ದರು. ಅಷ್ಟೇ ಅಲ್ಲದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ವಂಚಕ ಕಂಪನಿಯ ಮುಖ್ಯಸ್ಥ ಮನ್ಸೂರ್‌ ಖಾನ್‌ನ ಆಮಿಷಕ್ಕೊಳಗಾಗಿ ಆತನ ಪರವಾಗಿ ವರದಿ ಸಲ್ಲಿಸಿದ್ದರು. ಈ ಮೂವರು ಅಧಿಕಾರಿಗಳು ಒಳಚಂಚು ರೂಪಿಸಿ, ಐಎಂಎ ಕಂಪನಿಗೆ ಲಾಭ ಮಾಡಿಕೊಟ್ಟಿ¨ªಾರೆ ಎಂದು ಸಿಬಿಐ ಹೇಳಿದೆ.

ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ (ಕೆಪಿಐಡಿ) ಐಎಂಎ ಕಂಪನಿಯ ವ್ಯವಹಾರಗಳನ್ನು ತನಿಖೆ ನಡೆಸುವಂತೆ 2018ರ ಜುಲೈ 4ರಂದು ಸರ್ಕಾರ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವಹಿಸಿತ್ತು. ಆಗ ಈ ವಿಭಾಗದ ಐಜಿಪಿಯಾಗಿದ್ದ ಹೇಮಂತ್‌ ನಿಂಬಾಳ್ಕರ್‌ ಮತ್ತು ಡಿವೈಎಸ್ಪಿ ಇ.ಬಿ. ಶ್ರೀಧರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಅವರು 2019ರ ಜ. 1ರಂದು ಕಂಪನಿ ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ಕಾನೂನು ಬದ್ಧವಾಗಿಯೇ ಹಣ ಸಂಗ್ರಹಿಸುತ್ತಿದೆ ಎಂದು ಕಂಪನಿಯ ಪರವಾಗಿ ವರದಿ ಸಿದ್ದಪಡಿಸಿ 2019ರ ಜ. 18ರಂದು ಸಲ್ಲಿಸಿದ್ದರು. ಈ ರೀತಿಯ ವರದಿಗಳಿಗೆ ಪ್ರತಿಯಾಗಿ ತನಿಖಾಧಿಕಾರಿಗಳು ಹಾಗೂ ಕೆಲ ಸರ್ಕಾರಿ ಅಧಿಕಾರಿಗಳು ಲಂಚ ಹಾಗೂ ಮೌಲ್ಯಯುತ ವಸ್ತುಗಳನ್ನು ಸ್ವೀಕರಿಸಿದ್ದಾರೆ ಎಂಬ ಆರೋಪ ಸಿಬಿಐ ಮಾಡಿದೆ.

ಲಂಚದ ಬಗ್ಗೆ ಮನ್ಸೂರ್‌ ಖಾನ್‌ ಹೇಳಿಕೆ
ಈ ಮಧ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮನ್ಸೂರ್‌ ಖಾನ್‌ ಸಿಬಿಐ ವಿಚಾರಣೆ ಸಂದರ್ಭದಲ್ಲಿ ತನ್ನ ಪರವಾಗಿ ವರದಿ ನೀಡುವಂತೆ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಕೋಟ್ಯಂತರ ರೂ. ಲಂಚ ನೀಡಿರುವುದಾಗಿ ಹೇಳಿಕೆ ನೀಡಿದ್ದ. ಈ ಎಲ್ಲ ಮಾಹಿತಿ ಆಧರಿಸಿ ಐಪಿಎಸ್‌ ಅಧಿಕಾರಿಗಳು ಸೇರಿ ಎಲ್ಲರವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next