ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸಿಬಿಐಗೆ ಹೈಕೋರ್ಟ್ ಸೋಮವಾರ ತುರ್ತು ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ನಗರದ ಸಂಜಯನಗರ ನಿವಾಸಿ ಎಸ್.ಎಂ. ಇಕ್ಬಾಲ್ ಅಹ್ಮದ್ ಸೇರಿ ಇತರ 17 ಮಂದಿ ಹಾಗೂ ಚಿತ್ರದುರ್ಗ ಮೂಲದ ಹೂಡಿಕೆದಾರ ಮೊಹಮ್ಮದ್ ಸಿರಾಜುದ್ದೀನ್ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳು ನ್ಯಾ. ಆಲೋಕ್ ಆರಾಧೆ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಿಬಿಐ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಇದೇ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಐಎಂಎ ಸಂಸ್ಥಾಪಕ ಮನ್ಸೂರ್ ಅಹ್ಮದ್ ಖಾನ್, ಕೇಂದ್ರ ಹಣಕಾಸು ಸಚಿವಾಲಯ, ಬೆಂಗಳೂರು ಉತ್ತರ ವಲಯದ ಉಪವಿಭಾಗಾಧಿಕಾರಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಜೂ.28ಕ್ಕೆ ಮುಂದೂಡಿತು.
ಮತ್ತೊಂದು ಅರ್ಜಿ ಸಲ್ಲಿಕೆ: ಈ ಮಧ್ಯೆ ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ನಗರದ ವಕೀಲ ಮೊಯಿಜ್ ಅಹ್ಮದ್ ಖಾನ್ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಅರ್ಜಿದಾರರ ಪರ ವಕೀಲ ಇಸ್ಮಾಯಿಲ್ ಜಬಿವುಲ್ಲಾ ವಕಾಲತ್ತು ಹಾಕಿದ್ದಾರೆ.