ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಅವಕಾಶ ವಂಚಿತರು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಎಂ.ಉದಾಸಿ, ಹರತಾಳು ಹಾಲಪ್ಪ, ಮಾಡಾಳು ವಿರೂಪಾಕ್ಷಪ್ಪ, ಮುಖ್ಯಮಂತ್ರಿ ಜೊತೆ ಕೆಲಕಾಲ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದರು. ಆದರೆ, ಮೊದಲ ಹಂತದ ವಿಸ್ತರಣೆ ಮಾತ್ರ ಆಗಿದ್ದು, ಮುಂದಿನ ಹಂತದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಯಡಿಯೂರಪ್ಪ ಅವರಿಗೆ ಭರವಸೆ ನೀಡಿದರು. ಸಂಪುಟ ವಿಸ್ತರಣೆ ವೇಳೆ ಜಿಲ್ಲಾವಾರು, ಸಮುದಾಯವಾರು ಪ್ರಾತಿನಿಧ್ಯ ನೀಡಬೇಕು. ಈ ಹಂತದಲ್ಲಿ ಕೆಲವರಿಗೆ ಕೈ ತಪ್ಪುವುದು ಸಹಜ.
ಆದರೆ, ನಿಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ನಾನೇ ನಿಮ್ಮೊಂದಿ ಗಿದ್ದೇನೆ ಎಂದು ಹೇಳಿದರು ಎಂದು ತಿಳಿದು ಬಂದಿದೆ. ನಿಗಮ -ಮಂಡಳಿ ಅಧ್ಯಕ್ಷಗಿರಿಯ ಭರವಸೆಯನ್ನೂ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಕೆಲವರಿಗೆ ನೀಡಿದರು. ಆದರೆ, ನಾವು ಸಚಿವರಾಗಿದ್ದವರು, ನಿಗಮ -ಮಂಡಳಿ ಅಧ್ಯಕ್ಷಗಿರಿ ಬೇಡ ಎಂದು ಕೆಲವರು ಹೇಳಿದರು ಎಂದು ಹೇಳಲಾಗಿದೆ.
ಅನರ್ಹ ಶಾಸಕರಿಂದಲೂ ಭೇಟಿ: ಇದೇ ವೇಳೆ, ಅನರ್ಹಗೊಂಡಿರುವ ಶಾಸಕರಾದ ಡಾ.ಕೆ.ಸುಧಾಕರ್, ಆನಂದ್ ಸಿಂಗ್ ಹಾಗೂ ನಾರಾಯಣಗೌಡ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ನಡುವೆ, ಮಾಜಿ ಸಚಿವ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಹೊರಟ್ಟಿ, “ಶಿಕ್ಷಕರು ಹಾಗೂ ಉಪನ್ಯಾಸಕರ ಸಮಸ್ಯೆ ಸಂಬಂಧ ನಾನು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಸಮಸ್ಯೆ ನಿವಾರಣೆಗೆ ಮನವಿ ಮಾಡಿದ್ದೇನೆ ಅಷ್ಟೇ’ ಎಂದು ಹೇಳಿದರು.
ಸಿಎಂ ಭೇಟಿ ಮಾಡಿದ ಸುಧಾಕರ್
ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಮಂಡಳಿ ವತಿಯಿಂದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 1 ಕೋಟಿ ರೂ. ಚೆಕ್ ಮೂಲಕ ದೇಣಿಗೆ ನೀಡಿದರು.
ನಂತರ ಸುದ್ದಿಗಾರರ ಜತೆ ಮಾತನಾ ಡಿದ ಅವರು, ರಾಜ್ಯದಲ್ಲಿ 22 ಜಿಲ್ಲೆಗಳಲ್ಲಿ ಪ್ರವಾಹದಿಂದ ಸಾಕಷ್ಟು ತೊಂದರೆಯುಂಟಾಗಿದೆ. ಜನರು ಸಮಸ್ಯೆಯಲ್ಲಿದ್ದಾರೆ. ಹೀಗಾಗಿ, ನೆರವು ನೀಡುವುದು ಎಲ್ಲರ ಜವಾಬ್ದಾರಿ. ಮಂಡಳಿ ವತಿಯಿಂದ 1 ಕೋಟಿ ರೂ.ನೀಡಲಾಗಿದೆ. ರಾಜ್ಯದ ಜನತೆ ಉದಾರವಾಗಿ ನೆರವು ನೀಡಬೇಕು ಎಂದು ಮನವಿ ಮಾಡಿದರು.