Advertisement

ಐಎಂ ಉಗ್ರರಿಗೆ ಹಣಕಾಸು ನೆರವು: ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು

09:15 AM Oct 14, 2017 | Team Udayavani |

ಹೊಸದಿಲ್ಲಿ: ಇಂಡಿಯನ್‌ ಮುಜಾಹಿ ದೀನ್‌ ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಕರ್ನಾಟಕದಲ್ಲಿ ಐದು ಲಕ್ಷ ರೂ. ಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. 

Advertisement

ಅಕ್ರಮ ಹಣ ಸಾಗಾಟ ಆರೋಪದ ಮೇಲೆ ಮಂಗಳೂರಿನಲ್ಲಿ ಈ ದಾಳಿ ನಡೆಸಿ ಆಸ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಧೀರಜ್‌ ಸಾವೋ ಎಂಬಾತನ ಹಣದ ವ್ಯವಹಾರವನ್ನು ಗಮನಿಸಿ, ಈತನಿಗೆ ಸೇರಿದ ಆಸ್ತಿ ಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈತನ ಅಕೌಂಟ್‌ಗೆ ದೇಶದ ವಿವಿಧ ಭಾಗಗಳಿಂದ ಹಣ ಹರಿದುಬಂದಿದೆ. ಈ ಹಣದಲ್ಲಿ ತನ್ನ ಕಮಿಷನ್‌ ಇರಿಸಿಕೊಳ್ಳುತ್ತಿದ್ದ ಸಾವೋ ಉಳಿದ ಹಣವನ್ನು ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಗೆ ಸೇರಿದ ಜುಬೈರ್‌ ಹುಸೇನ್‌, ಅಯೆಶಾ ಬಾನು, ರಾಜು ಖಾನ್‌ ಮತ್ತು ಇತರರ ಖಾತೆಗೆ ರವಾನಿಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಈತನ ವಹಿವಾಟಿನ ಮೇಲೆ ಸಂದೇಹ ಬಂದಿದ್ದು, ಹೀಗಾಗಿ ಚಲನವಲನ ಗಮನಿಸುತ್ತಿದ್ದೆವು. ಈತನ ಹಣದ ಸಹಾಯದಿಂದಲೇ ಬಾನು ಮತ್ತು ಹುಸೇನ್‌ ಮಂಗಳೂರಿನ ಪಂಜಿ ಮೊಗರುವಿನಲ್ಲಿ ಖರೀದಿಸಿದ್ದ ವಸತಿಯೋಗ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಎಲ್ಲ ಆರೋಪಿಗಳು ಪಾಕಿಸ್ಥಾನ ನಾಗರಿಕ ಖಾಲಿದ್‌ ಜತೆ ಸಂಪರ್ಕದಲ್ಲಿದ್ದಾರೆ. ಈತನ ನಿರ್ದೇಶನದ ಮೇರೆಗೆ ಹಲವಾರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಉಗ್ರರಿಗೆ ಹಣವನ್ನು ಕಳುಹಿಸ ಲಾಗುತ್ತಿತ್ತು. ಜತೆಗೆ ತಮಗೆ ಸೇರಬೇಕಾದ ಕಮಿಷನ್‌ ಅನ್ನೂ ಪಡೆದುಕೊಳ್ಳುತ್ತಿದ್ದರು. ಈ ಎಲ್ಲ ಖಾತೆಗಳಿಗೆ ದೇಶದ ವಿವಿಧ ಭಾಗಗಳಿಂದ ಅನಾಮಧೇಯ ವ್ಯಕ್ತಿಗಳು ಹಣ ಹಾಕುತ್ತಿದ್ದರು. ಎಲ್ಲಿ ಅಕೌಂಟ್‌ ಓಪನ್‌ ಆಗಿರುತ್ತದೆಯೋ ಆ ಬ್ರ್ಯಾಂಚ್‌ ಬಿಟ್ಟು ಉಳಿದ ಕಡೆಗಳಲ್ಲಿ ತತ್‌ಕ್ಷಣವೇ ಎಟಿಎಂಗಳನ್ನು ಬಳಸಿಕೊಂಡು ಹಣ ತೆಗೆಯುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next