ಅವತ್ತು ರಾತ್ರಿ ಹತ್ತು ಗಂಟೆ ಆಗಿತ್ತು. ನಾನು ಧಾರವಾಡ ರೇಲ್ವೆ ಸ್ಟೇಷನ್‌ನಲ್ಲಿ ಗುಲಬರ್ಗಾಕ್ಕೆ ಹೋಗುವ ರೈಲಿಗೆ ಕಾಯುತ್ತಾ ಕುಳಿತಿದ್ದೆ. ಅಷ್ಟರಲ್ಲೇ ಯುವಕರ ಗುಂಪೊಂದು ನನ್ನ ಪಕ್ಕದಲ್ಲೇ ಬಂದು ಅಸಭ್ಯವಾಗಿ ವರ್ತಿಸತೊಡಗಿತು. ಅಕ್ಕಪಕ್ಕ ನೋಡಿದೆ. ಅಲ್ಲಿ ಯಾರೂ ಇರಲಿಲ್ಲ, ಅಲ್ಲಿದ್ದಿದ್ದು ನಾನೊಬ್ಬಳೇ. ಅನತಿ ದೂರದಲ್ಲಿ ಯುವಕನೊಬ್ಬ ಪುಸ್ತಕ ಓದುತ್ತಾ ಕುಳಿತಿದ್ದ. ನಾನು ದಡಬಡನೆ ಎದ್ದು ಅವನ ಬಳಿಗೆ ಓಡಿದೆ. ಅವನು ನನ್ನತ್ತ ನೋಡಲೇ ಇಲ್ಲ. ಕೊನೆಗೆ ನಾನೇ ಅವನಿಗೆ ನನ್ನ ಪರಿಸ್ಥಿತಿಯನ್ನು ಹೇಳಿಕೊಂಡು ಅಲ್ಲೇ ಕುಳಿತುಬಿಟ್ಟೆ.
ನನ್ನ ಪುಣ್ಯಕ್ಕೆ ಅವನೂ ಗುಲ್ಬರ್ಗಕ್ಕೆ ಹೋಗುವವನೇ ಆಗಿದ್ದ. ಸ್ವಲ್ಪ ಸಮಯದ ನಂತರ ನಾವು ಹೋಗುವ ರೈಲು ಬಂತು. ಆ ಯುವಕ, ನನ್ನ ರಿಸರ್ವೇಶನ್ ಸೀಟಿನಲ್ಲಿ ನನ್ನನ್ನು ಕೂರಿಸಿ, ನನಗೆ ಧೈರ್ಯ ತುಂಬಿ, ಅವನು ತನ್ನ ಸೀಟಿನತ್ತ ನಡೆದ. ನಾನಿದ್ದ ಬೋಗಿಯಲ್ಲಿ ಪುರುಷರ ದಂಡೇ ನೆರೆದಿತ್ತು. ರಾತ್ರಿ ಏರುತ್ತಿದ್ದಂತೆ, ನನಗೆ ಎದೆ ಢವಗುಟ್ಟಲು ಶುರುವಾಯಿತು.
11.30ರ ಸಮಯ. ಮತ್ತೆ ನಾನು ಆ ಯುವಕನ ಸೀಟಿನ ಬಳಿ ಓಡಿದೆ. ಅವನು ನಿದ್ದೆಗೆ ಜಾರಿದ್ದ. ಅವನನ್ನು ಎಬ್ಬಿಸಿ ಮತ್ತೆ ನನ್ನ ಆತಂಕ ಹೇಳಿಕೊಂಡೆ. ಅವನ ಸೀಟಿನ ಬಳಿಯಿದ್ದ ದಂಪತಿಯನ್ನು ನನಗೆ ತೋರಿಸಿ, “ಹೆದರಬೇಡ… ಆರಾಮಾಗಿ ಮಲಗು’ ಎಂದು ಹೇಳಿ ತನ್ನ ಸೀಟನ್ನು ನನಗೆ ಬಿಟ್ಟು, ಅವನು ನನ್ನ ಸೀಟಿನ ಬಳಿಗೆ ಹೋದ.
ನನ್ನ ಒಂದು ಥಾಂಕ್ಸ್‌ಗೂ ಕಾಯದೇ ನಿಸ್ವಾರ್ಥವಾಗಿ ಉಪಕಾರ ಮಾಡಿದ ಆ ಮಹಾನುಭಾವನ ಹೆಸರನ್ನು ಕೇಳಲೂ ನನಗೆ ನೆನಪಾಗಲಿಲ್ಲ. ಅವನೂ ನನ್ನ ಹೆಸರಾಗಲಿ, ಮೊಬೈಲ್ ನಂಬರನ್ನಾಗಲಿ, ಕೇಳಲಿಲ್ಲ. ಆದರೆ, ಅವನ ಬ್ಯಾಗ್‌ನ ತುದಿಯಲ್ಲಿ ಆ ದಿನದ “ಉದಯವಾಣಿ’ ಪತ್ರಿಕೆ ನೋಡಿದ ನೆನಪು.
– ಲತಾ ಪವನಕುಮಾರ ಜನ್ನು, ಶಿರಸಿ