Advertisement

ನನಗೆ ಬೇಸರವಾಗಿದ್ದು ನಿಜ: ಅರ್ಜುನ್‌ ಸರ್ಜಾ

11:03 AM Feb 18, 2018 | |

“ಪ್ರೇಮ ಬರಹ’ ಚಿತ್ರಕ್ಕೆ ಬಂದ ವಿಮರ್ಶೆಗಳನ್ನೋದಿ ಅರ್ಜುನ್‌ ಸರ್ಜಾ ಅವರಿಗೆ ಬೇಸರವಾಗಿದೆಯಂತೆ ಎಂಬ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಅದು ನಿಜವೇ ಎಂಬ ಪ್ರಶ್ನೆ ಬರಬಹುದು. ಈ ಕುರಿತು ಅವರನ್ನು ಕೇಳಿದರೆ, ಬೇಸರ ಎನ್ನುವುದಕ್ಕಿಂತ ಚಿತ್ರದ ಗುಣಮಟ್ಟ ನೋಡಿ ಮಾರ್ಕ್ಸ್ ಕೊಟ್ಟಿದ್ದರೆ ಇನ್ನಷ್ಟು ಖುಷಿಯಾಗುತಿತ್ತು ಎಂದು ಸ್ವತಃ ಹೇಳಿಕೊಂಡಿದ್ದಾರೆ.

Advertisement

ಶನಿವಾರ ನಡೆದ “ಪ್ರೇಮ ಬರಹ’ ಚಿತ್ರದ ಸಂತೋಷ ಕೂಟದಲ್ಲಿ ಮಾತನಾಡಿದ ಅವರು, “ಚಿತ್ರ ನೋಡಿದವರು ಖುಷಿಪಟ್ಟಿದ್ದಾರೆ. ಆದರೆ, ಚಿತ್ರದ ವಿಮರ್ಶೆ ಬಂದಾಗ ಸ್ವಲ್ಪ ಬೇಸರ ಆಗಿದ್ದು ನಿಜ. ಬಹುಶಃ ಇಷ್ಟಕ್ಕೂ ನಾನು ಯಾವ ರೀತಿಯ ಚಿತ್ರ ಮಾಡಿದ್ದೇನೆ? ಇಲ್ಲಿ ಅಶ್ಲೀಲತೆ ಇಲ್ಲ. ಡಬ್ಬಲ್‌ ಮೀನಿಂಗ್‌ ಇಲ್ಲ. ಒಂದು ಪ್ರೇಮಕಥೆಯನ್ನು ದೇಶಭಕ್ತಿಯ ಹಿನ್ನೆಲೆಯಲ್ಲಿ ಹೇಳಿದ್ದೇನೆ. ಯೋಧರ ಕಷ್ಟ-ಸುಖ ತೋರಿಸಿದ್ದೇನೆ. ಭಾವನಾತ್ಮಕ ಸಂಬಂಧಗಳ ಬಗ್ಗೆ ಹೇಳಿದ್ದೇನೆ.

ಆದರೂ, ಯಾಕೆ ಇಷ್ಟು ಮಾರ್ಕ್ಸ್ ಅನ್ನೋದೇ ಗೊತ್ತಿಲ್ಲ. ಕಡಿಮೆ ಮಾರ್ಕ್ಸ್ ನೋಡಿ ಬೇಜಾಗಿದ್ದು ನಿಜ. ಆ ಸಮಯದಲ್ಲಿ ನಾನು ಓವರ್‌ ರಿಯಾಕ್ಟ್ ಮಾಡಿದೆ°àನೋ? ಇರಲಿ, ಆ ಬಗ್ಗೆ ಈಗ ಮಾತಾಡುವುದು ಸರಿಯಲ್ಲ. ಮುಂದೆ ಇನ್ನಷ್ಟು ಚಿತ್ರಗಳು ಬರಲಿವೆ. ಸದ್ಯಕ್ಕೆ ಕನ್ನಡದಲ್ಲಿ “ಕುರುಕ್ಷೇತ್ರ’ ರೆಡಿಯಾಗಿ ಬರುತ್ತದೆ. ಬೇರೆ ಭಾಷೆಯಲ್ಲೂ ಇಷ್ಟರಲ್ಲೇ ಸಿನಿಮಾಗಳು ಸೆಟ್ಟೇರಲಿವೆ’ ಎನ್ನುತ್ತಾರೆ ಅರ್ಜುನ್‌ ಸರ್ಜಾ.

“ನಾನು ಇದುವರೆಗೆ 150 ಚಿತ್ರಗಳಲ್ಲಿ ನಟಿಸಿದ್ದೇನೆ. ನಾನು ನಿರ್ದೇಶಿಸಿ, ನಿರ್ಮಿಸಿ ಮತ್ತು ಹಾಡೊಂದರಲ್ಲಿ ಕಾಣಿಸಿಕೊಂಡಿರುವ “ಪ್ರೇಮ ಬರಹ’ ನನ್ನ 151ನೇ ಚಿತ್ರ. ನನ್ನ ಇಷ್ಟು ವರ್ಷಗಳ ಜರ್ನಿ ನನಗೆ ಬಹಳ ಖುಷಿ ಕೊಟ್ಟಿದೆ. ಇಲ್ಲಿ ಸಾಕಷ್ಟು ಅನುಭವಗಳನ್ನು ಕಂಡಿದ್ದೇನೆ. ನಾನು ಎಂದಿಗೂ ಲಿಫ್ಟ್ನಲ್ಲಿ ಹೋದವನಲ್ಲ. ಒಂದೊಂದೇ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದವನು. ಮೆಟ್ಟಿಲು ಹತ್ತುವಾಗ, ಜಾರಿ ಕೆಳಗೆ ಬಿದ್ದವನು, ಪುನಃ ಏರಿಕೊಂಡು ಹೋದವನು.

ಬೀಳುವಾಗ, ಏನನ್ನೋ ಹಿಡಿದುಕೊಂಡು ಪುನಃ ಮೇಲೆ ಏರಿಕೊಂಡು ಬಂದಿದ್ದರಿಂದ ಇಂದು ಈ ಮಟ್ಟದಲ್ಲಿದ್ದೇನೆ. ನಾನು ಈ ಪಯಣದಲ್ಲಿ ಸಾಕಷ್ಟು ಗೆಲುವು, ಸೋಲು ಕಂಡಿದ್ದೇನೆ. ದೇವರ ದಯೆಯಿಂದ ಎಲ್ಲವನ್ನೂ ಕಾಪಾಡಿಕೊಂಡು ಬಂದಿದ್ದೇನೆ. ಕೆಳಗೆ ಬೀಳುವುದು ಸಹಜ. ಆದರೆ, ಬಿದ್ದು ಎದ್ದು ಓಡುವವನೇ ನಿಜವಾದ ಗಂಡಸು. ನನ್ನ ಪ್ರಕಾರ, ಪ್ರತಿ ಸಲವೂ ಬಿದ್ದಾಗ, ನಾನು ಎಂದಿಗೂ ಯೋಚಿಸಿಲ್ಲ.

Advertisement

ಯಾವತ್ತೂ ಪಶ್ಚಾತ್ತಾಪ ಪಟ್ಟಿಲ್ಲ. ನನ್ನ ಮಗಳಿಗೂ ಇದೇ ಮಾತನ್ನು ಹೇಳಿದ್ದೇನೆ. ಸೋಲು, ಗೆಲುವು ಇಲ್ಲಿ ಸಹಜ. ಯಾವುದನ್ನೂ ಹೆಚ್ಚು ತಗೋಬಾರದು. ನಾವು ಮಾಡಿದ ಚಿತ್ರ ಗೆಲ್ಲುತ್ತೋ, ಇಲ್ಲವೋ ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಮ್ಮ ಮುಂದೆ ಶ್ರಮ ಮತ್ತು ಶ್ರದ್ಧೆ ಇರಬೇಕು. ಅದೊಂದೇ ನಮ್ಮನ್ನು ಕಾಪಾಡುತ್ತೆ ಎಂದು ಹೇಳಿಕೊಟ್ಟಿದ್ದೇನೆ’ ಎಂದು ಹೇಳಿದರು.

ಗೆದ್ದಾಗ ಹಿಗ್ಗಿಲ್ಲ, ಸೋತಾಗ ಕುಗ್ಗಿಲ್ಲ ಎನ್ನುವ ಅರ್ಜುನ್‌ ಸರ್ಜಾ, “ನಾನು ಎಲ್ಲವನ್ನೂ ಸುಲಭವಾಗಿಯೇ ತೆಗೆದುಕೊಂಡಿದ್ದರಿಂದಲೇ ಇಲ್ಲಿವಯರೆಗೆ ಓಡಿಕೊಂಡು ಬರಲು ಸಾಧ್ಯವಾಗಿದೆ. ಇಷ್ಟು ಓಡಿದರೂ, ನಾನು ಈಗಲೂ ಓಡುತ್ತಿದ್ದೇನೆ. ನನಗೆ ಈಗಲೂ ಸಹ ಎಲ್ಲಾ ಭಾಷೆಗಳಿಂದಲೂ ಆವಕಾಶಗಳು ಬರುತ್ತಿವೆ. ನಾನೇ ಮೂರ್‍ನಾಲ್ಕು ಚಿತ್ರಗಳು ಬೇಡ ಅನ್ನುವಷ್ಟು ಕಥೆ ಹುಡುಕಿ ಬರುತ್ತಿವೆ.

ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಅವಕಾಶಗಳು ಇವೆ. ನನಗೆ ಹಣ ಮಾಡುವ ಉದ್ದೇಶವಿಲ್ಲ. ಶ್ರದ್ಧೆಯಿಂದ ಕೆಲಸ ಮಾಡಬೇಕೆಂಬ ಆಸೆ. ಆ ಶ್ರದ್ಧೆಯೇ ಇಂದು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಸದ್ಯಕ್ಕೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಮಯವಿಲ್ಲದಷ್ಟು ಚಿತ್ರಗಳಂತೂ ಬರುತ್ತಿವೆ. ಇನ್ನು ಮುಂದೆ ನಾನು ನಟನೆ ಕಡೆಗೆ ಗಮನ ಹರಿಸುತ್ತೇನೆ’ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next