Advertisement

ಪಾತ್ರದಲ್ಲಿ ನಾನು ಕಂಡರೆ ನಟಿಸಲು ಸಿದ್ಧ

11:35 AM Apr 30, 2018 | |

ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಮಾತಿಗೆ ಸಿಗೋದು ಅಪರೂಪ. ಸಿಕ್ಕರೆ ಮಾತ್ರ ಮನದಾಳದಿಂದ ಮಾತನಾಡುತ್ತಾರೆ. ಇತ್ತೀಚೆಗೆ ನಡೆದ “ಕೆಲವು ದಿನಗಳ ನಂತರ’ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ರಾಘವೇಂದ್ರ ರಾಜಕುಮಾರ್‌ ಪತ್ರಕರ್ತರೊಂದಿಗೆ ತಮ್ಮ ಸಿನಿಮಾ, ಕನಸು, ಉದ್ದೇಶ ಸೇರಿದಂತೆ ಹಲವು ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ …

Advertisement

ಕೈಯಲ್ಲಿ ಮೂರು ಸಿನಿಮಾ: ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಅವರು ಮತ್ತೆ ನಟನೆ ಹಾಗೂ ಗಾಯನಕ್ಕೆ ವಾಪಾಸ್ಸಾಗಿದ್ದಾರೆ. ಸುಮಾರು 14 ವರ್ಷಗಳ ನಂತರ ರಾಘವೇಂದ್ರ ರಾಜ್‌ಕುಮಾರ್‌ ಸಿನಿಮಾವೊಂದಕ್ಕೆ ಹಾಡಿದ್ದಾರೆ. ಅದು ಹಿರಿಯ ನಿರ್ದೇಶಕ ಭಗವಾನ್‌ ನಿರ್ದೇಶನದ “ಆಡುವ ಗೊಂಬೆ’ ಚಿತ್ರಕ್ಕೆ. ಈ ಮೂಲಕ ಮತ್ತೆ ಗಾಯನಕ್ಕೆ ಬಂದಂತಾಗಿದೆ.

ರಾಘವೇಂದ್ರ ರಾಜಕುಮಾರ್‌ “ಚೀಲಂ’ ಎಂಬ ಸಿನಿಮಾದಲ್ಲಿ ವಿಲನ್‌ ಆಗಿ ನಟಿಸಲು ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತಿರಬಹುದು. ಇದರ ಜೊತೆಗೆ ಇನ್ನೆರಡು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಒಂದು ಹಾರರ್‌ ಸಿನಿಮಾವಾದರೆ ಮತ್ತೂಂದು ನಿಖೀಲ್‌ ಮಂಜು ನಿರ್ದೇಶನದ ಸಿನಿಮಾ. “ಯಾವುದೇ ಪಾತ್ರವಾದರೂ ಬಣ್ಣ ಹಚ್ಚುತ್ತಿರಬೇಕೆಂದು ಅಪ್ಪಾಜಿ ಹೇಳುತ್ತಿದ್ದರು. ಅದರಂತೆ ಈಗ ಮತ್ತೆ ನಟನೆಗೆ ವಾಪಾಸ್ಸಾಗಿದ್ದೇನೆ.

“ಚೀಲಂ’ನಲ್ಲಿ ನೀವು ವಿಲನ್‌ ಮಾಡಬೇಕೆಂದು ಆ ಚಿತ್ರದ ನಿರ್ದೇಶಕಿ ಕೇಳಿಕೊಂಡರು. “ನಿಮಗೆ ಆ ಪಾತ್ರದಲ್ಲಿ ನಾನು ಕಂಡರೆ ನಟಿಸಲು ರೆಡಿ’ ಅಂದೆ. ಆ ನಂತರ ಪ್ರತಾಪ್‌ ಎಂಬ ನಿರ್ದೇಶಕರ ಹಾರರ್‌ ಸಿನಿಮಾವೊಂದನ್ನು ಒಪ್ಪಿದ್ದೇನೆ. ಅಲ್ಲಿ ನನ್ನ ವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಇನ್ನು, ನಿಖೀಲ್‌ ಮಂಜು ಅವರ “ಅಮ್ಮನ ಮನೆ’ಯಲ್ಲೂ ನಟಿಸಲಿದ್ದೇನೆ. ಇಲ್ಲಿ ಅಪ್ಪ-ಅಮ್ಮನ ಮೌಲ್ಯದ ಕುರಿತು ಅವರು ಹೇಳಲಿದ್ದಾರಂತೆ.

ಬಹುತೇಕ ಕಾರ್ಯಕ್ರಮಗಳಲ್ಲಿ ಅಪ್ಪ-ಅಮ್ಮನ ಜೊತೆಗೇ ಇದ್ದ ನನ್ನನ್ನು ನೋಡಿ, ನನ್ನ ಮೂಲಕ ಅಪ್ಪ-ಅಮ್ಮನ ಕುರಿತಾದ ಸಂದೇಶ ಹೇಳಿಸಬೇಕೆಂಬುದು ನಿರ್ದೇಶಕರ ಆಸೆಯಂತೆ. ಹಾಗಾಗಿ, ಒಪ್ಪಿಕೊಂಡೆ. ನಾನು ಮತ್ತೆ ನಟಿಸುತ್ತೇನೆ ಎಂಬ ಯಾವ ಆಸೆಯೂ ಇರಲಿಲ್ಲ. ನಾಲ್ಕು ವರ್ಷಗಳ ಹಿಂದೆ ನನಗೆ ಹುಷಾರಿಲ್ಲದೇ ಆಗಿದ್ದಾಗ, 48 ಗಂಟೆ ಸಮಯ ಕೊಟ್ಟಿದ್ರು.

Advertisement

ಆಗ ಅಮ್ಮ ನನ್ನ ತಲೆ ಮೇಲೆ ಕೈ ಇಟ್ಟು, “ಕಂದ ನಿನಗೆ ಏನೂ ಆಗಲ್ಲ. ನಿಮ್ಮಪ್ಪನ ಆಶೀರ್ವಾದ ನಿನಗಿದೆ. ನೀನು ವಾಪಾಸ್‌ ಬರಿ¤àಯಾ ಅಂದಿದ್ರು. ಅದರಂತೆ ಬಂದಿದ್ದೇನೆ. ಆದರೆ ಈಗ ಮತ್ತೆ ಕೆರಿಯರ್‌ ಶುರು ಮಾಡಿದ್ದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರವಿದೆ’ ಎಂದು ಸಿನಿಮಾ ಒಪ್ಪಿಕೊಂಡ ಬಗ್ಗೆ ಹೇಳುತ್ತಾರೆ ಅವರು. 

ಸಿವಿಲ್‌ ಸರ್ವೀಸ್‌ ಅಕಾಡೆಮಿ ಮಗನ ಕನಸು: ಇತ್ತೀಚೆಗೆ ಪ್ರಕಟವಾದ ಯುಪಿಎಸ್‌ಇ ಪರೀಕ್ಷೆಯಲ್ಲಿ ಡಾ.ರಾಜ್‌ಕುಮಾರ್‌ ಅಕಾಡೆಮಿ ಆಫ್ ಸಿವಿಲ್‌ ಸರ್ವೀಸ್‌ನ 16 ಮಂದಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂದು ವರ್ಷದ ಹಿಂದೆ ಆರಂಭವಾದ ಸಂಸ್ಥೆ ಒಳ್ಳೆಯ ಸಾಧನೆ ಮಾಡಿದ ಖುಷಿ ರಾಘಣ್ಣ ಅವರಿಗಿದೆ. ಡಾ.ರಾಜ್‌ಕುಮಾರ್‌ ಅಕಾಡೆಮಿ ಆಫ್ ಸಿವಿಲ್‌ ಸರ್ವೀಸ್‌ ಅಕಾಡೆಮಿ ಆರಂಭವಾಗಿದ್ದು ಅವರ ಎರಡನೇ ಮಗ ಗುರು ರಾಜಕುಮಾರ್‌ ಅವರಿಂದವಂತೆ.

“ಇದು ನನ್ನ ಮಗನ ಕನಸು. ಅದೊಂದು ದಿನ ಬಂದು, “ಅಪ್ಪ ನಾನು ಐಎಎಸ್‌ ಅಕಾಡೆಮಿ ಆರಂಭಿಸುತ್ತೇನೆ. ನೀನು ನನಗೆ ಬೆಂಬಲವಾಗಿದ್ದರೆ ಸಾಕು’ ಎಂದ. ಅವನ ಉದ್ದೇಶ ಚೆನ್ನಾಗಿತ್ತು. ಐಎಎಸ್‌ ತರಬೇತಿ ಪಡೆಯಬೇಕಾದರೆ ಇಲ್ಲಿಂದ ದೆಹಲಿಗೆ ಹೋಗಬೇಕು. ತುಂಬಾ ಖರ್ಚಾಗುತ್ತದೆ. ಸಾಮಾನ್ಯ ರೈತನ ಮಗನಿಗೆ ಅದು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡದ ಐಎಎಸ್‌ ಅಧಿಕಾರಿಗಳ ಸಂಖ್ಯೆ ಕಡಿಮೆ ಇದೆ.

ಇದೇ ಕಾರಣದಿಂದ ನಾವೇ ಅಕಾಡೆಮಿ ಆರಂಭಿಸಿ, ತರಬೇತಿಗೆ ಅವಕಾಶ ಕೊಟ್ಟರೆ ಸಾಕಷ್ಟು ಮಂದಿ ಅಧಿಕಾರಿಗಳು ಬರಬಹುದು ಎಂಬುದು ಆತನ ಕನಸಾಗಿತ್ತು. ಆತನ ಸ್ನೇಹಿತೆ ಕೂಡಾ ಬೆಂಬಲವಾಗಿದ್ದಳು. ನಾನು ಕೂಡಾ ದೆಹಲಿಯ ತರಬೇತಿ ಕೇಂದ್ರಕ್ಕೆ ಭೇಟಿಕೊಟ್ಟಾಗ ಅಲ್ಲಿನವರು, “ರಾಜ್‌ ಮಕ್ಕಳಾದ ನೀವು ಸೇರಿ ಐಎಎಸ್‌ ಅಕಾಡೆಮಿ ಮಾಡಬೇಕು’ ಎಂಬ ಮನವಿ ಬಂತು. ಅದರಂತೆ ಗುರು ಮಾಡಿದ್ದಾನೆ.

ಅದಕ್ಕಿಂತ ಹೆಚ್ಚಾಗಿ ನಮ್ಮ ಅಪ್ಪಾಜಿಗೆ, ಅಮ್ಮನಿಗೆ, ಶಿವಣ್ಣನಿಗೆ ಡಾಕ್ಟರೇಟ್‌ ಕೊಟ್ಟಿದ್ದಾರೆ. ಅವೆಲ್ಲವೂ ಅಭಿಮಾನಿಗಳಿಂದ ಸಮಾಜಕ್ಕೆ ನಾವೂ ಏನಾದರೂ ಕೊಡಬೇಕು. ಒಂದಷ್ಟು ಮಂದಿ ಐಎಎಸ್‌ ಅಧಿಕಾರಿಗಳು ಹೊರಬಂದರೆ ಅವರಿಂದ ಸಾಕಷ್ಟು ಒಳ್ಳೆಯ ಕೆಲಸಗಳು ಆಗುತ್ತವೆ. ಆ ಆಶಯದೊಂದಿಗೆ ಈ ಅಕಾಡೆಮಿ ಆರಂಭವಾಗಿದ್ದು. ಅಕಾಡೆಮಿಯಿಂದ ಒಳ್ಳೆಯ ಅಧಿಕಾರಿಗಳು ಬರಬೇಕೆಂಬುದು ನಮ್ಮ ಆಸೆ’ ಎಂದು ಅಕಾಡೆಮಿ ಬಗ್ಗೆ ಮಾತನಾಡುತ್ತಾರೆ. 

ಮೂರು ವರ್ಷಗಳ ಸೌಹಾರ್ದ ಪ್ರಶಸ್ತಿ: ಚಿತ್ರರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುವ ಸಲುವಾಗಿ ಆರಂಭವಾದ ಡಾ.ರಾಜಕುಮಾರ್‌ ಸೌಹಾರ್ದ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ನೀಡಿರಲಿಲ್ಲ. ಈಗ ಈ ವರ್ಷ ಸೇರಿ ಒಟ್ಟು ಮೂರು ವರ್ಷಗಳ ಪ್ರಶಸ್ತಿಯನ್ನು ನೀಡಲು ಸಮಿತಿ ನಿರ್ಧರಿಸಿದೆಯಂತೆ. “ಮೂರು ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ಮಾಡುತ್ತೇವೆ.

ಈ ವರ್ಷ ಮೂರು ಪ್ರಶಸ್ತಿಯಲ್ಲಿ ಒಂದು ಪ್ರಶಸ್ತಿಯನ್ನು ಅಮ್ಮನ ಹೆಸರಿನಲ್ಲಿ ನೀಡುವ ಉದ್ದೇಶವಿದೆ’ ಎನ್ನುವ ರಾಘಣ್ಣ, “ಪ್ರಶಸ್ತಿ ಅರ್ಹ ವ್ಯಕ್ತಿಗಳಿಗೆ ಸಲ್ಲಬೇಕು. ಅದಕ್ಕಾಗಿ ಸಮಿತಿಯೊಂದನ್ನು ರಚಿಸುತ್ತಿದ್ದೇವೆ’ ಎನ್ನುತ್ತಾರೆ. ಇನ್ನು ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜಕುಮಾರ್‌ ಹಾಗೂ ಪಾರ್ವತಮ್ಮ ರಾಜಕುಮಾರ್‌ ಅವರ ಸ್ಮಾರಕಗಳನ್ನು ಸೇರಿಸಿ ಯೋಗ ಕೇಂದ್ರ ಮಾಡುವ ಉದ್ದೇಶವಿದೆ ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್‌.

“ಅಪ್ಪ-ಅಮ್ಮ ಇಬ್ಬರ ಸ್ಮಾರಕಗಳನ್ನು ಸೇರಿಸಿ ಯೋಗ ಕೇಂದ್ರ ನಿರ್ಮಾಣವಾಗಲಿದೆ. ಈಗಾಗಲೇ ಸರ್ಕಾರದಿಂದಲೂ ಅನುಮತಿ ಸಿಕ್ಕಿದೆ. ಇಲ್ಲಿಗೆ ಬಂದವರು ಹೊಸ ಎನರ್ಜಿಯೊಂದಿಗೆ ಹೊರಹೋಗಬೇಕು ಎನ್ನುವುದು ನಮ್ಮ ಉದ್ದೇಶ. ಯೋಗ ಕೇಂದ್ರದ ನಿರ್ಮಾಣ ಹೇಗಿರಬೇಕೆಂಬುದನ್ನು ರಾಕ್‌ಲೈನ್‌ ವೆಂಕಟೇಶ್‌ ನೋಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅವರು. 

ಚಲಿಸುವ ಮೋಡಗಳು “ಮೈ ಲಾರ್ಡ್‌’ ಹಾಡು ಮರುಬಳಕೆ: ಡಾ.ರಾಜಕುಮಾರ್‌ ಅವರ “ಚಲಿಸುವ ಮೋಡಗಳು’ ಚಿತ್ರದ “ಮೈ ಲಾರ್ಡ್‌ ನನ್ನ ವಾದ ಕೇಳಿ …ಕೇಳಿ… ಕೇಳಿ’ ಹಾಡು ಎವರ್‌ಗ್ರೀನ್‌. ಈಗ 36 ವರ್ಷಗಳ ನಂತರ ಆ ಹಾಡು ಸಿನಿಮಾವೊಂದರಲ್ಲಿ ಮರುಬಳಕೆಯಾಗುತ್ತಿದೆ. ಅದು ಬೇರಾರ ಸಿನಿಮಾವಲ್ಲ, ವಿನಯ್‌ ರಾಜಕುಮಾರ್‌ ಅವರ “ಅನಂತು ವರ್ಸಸ್‌ ನುಸ್ರತ್‌’ ಸಿನಿಮಾದಲ್ಲಿ.

ಈ ಸಿನಿಮಾದಲ್ಲಿ ವಿನಯ್‌, ಲಾಯರ್‌ ಆಗಿ ನಟಿಸಿದ್ದಾರೆ. ಅದೇ ಕಾರಣದಿಂದ ಈ ಹಾಡನ್ನು ಮರುಬಳಕೆ ಮಾಡಲಾಗಿದೆ. ಈ ಬಗ್ಗೆ ರಾಘಣ್ಣ ಖುಷಿಯಾಗಿದ್ದಾರೆ. “36 ವರ್ಷಗಳ ನಂತರ ಅಪ್ಪಾಜಿಯ “ಮೈ ಲಾರ್ಡ್‌ ….’ ಹಾಡು ವಿನಯ್‌ನ ಚಿತ್ರದಲ್ಲಿ ರೀಕ್ರಿಯೇಟ್‌ ಆಗುತ್ತಿದೆ. ಸೇಮ್‌ ಸ್ಟೆಪ್‌ ಇಟ್ಟುಕೊಂಡು ಆ ಹಾಡನ್ನು ಮಾಡಲಾಗುತ್ತಿದೆ’ ಎನ್ನುತ್ತಾರೆ ರಾಘಣ್ಣ. 

Advertisement

Udayavani is now on Telegram. Click here to join our channel and stay updated with the latest news.

Next