ಬಳ್ಳಾರಿ: 2008ರಲ್ಲಿ ನನ್ನ ದಾರಿ ತಪ್ಪಿಸಿದರು. 2018ರಲ್ಲಿ ಷರತ್ತು ಇಟ್ಟು ಕೊಂಡು ಕಾಂಗ್ರೆಸ್ ಅಧಿಕಾರ ಕೊಟ್ಟಿತ್ತು, ಆದರೆ ಸ್ವತಂತ್ರವಾಗಿ ಅಧಿಕಾರ ಚಲಾವಣೆ ಮಾಡಲು ಬಿಡಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದರೆ ಬಡತನ ಹೋಗಲಾಡಿಸಲು ಸಾದ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬಳ್ಳಾರಿಯ ಕುರೆಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ಎರಡು ಪಕ್ಷದ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿ ಅನುಭವವಿದೆ. ಈಗಿ ಇರುವುದು 2006ರ ಬಿಜೆಪಿಯಲ್ಲ, ರಾಷ್ಟ್ರೀಯ ನಾಯಕರ ಶಕ್ತಿಯಿರುವ ಬಿಜೆಪಿ. 2006ರಲ್ಲಿ ಬಿಜೆಪಿ ಅವರು ತಗ್ಗಿಬಗ್ಗಿ ಇದ್ದರು, ಈಗ ಅವರೂ ಕಾಂಗ್ರೆಸ್ ಮೀರಿ ಹೋಗಿದ್ದಾರೆ ಎಂದರು.
2018ರಲ್ಲಿ ಕಾಂಗ್ರೆಸ್ ಜೊತೆಗೆ ಹೊಗಿದ್ದಕ್ಕೆ ಗುಲಾಮನಾಗಿರುವ ಹಾಗಾಗಿತ್ತು. ಸಿದ್ದರಾಮಯ್ಯ ಅಧಿಕಾರ ಹೋದರೂ, ನಾನು ಸಿಎಂ ಆದರೂ ಮನೆ ಬಿಟ್ಟು ಕೊಡಲಿಲ್ಲ. ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಮಾಡಿ ಕಾಂಗ್ರೆಸ್ ನವರು ಕುತ್ತಿಗೆ ಕೊಯ್ದರು. ಕಾಂಗ್ರೆಸ್ ಬೆಂಬಲ ಕೊಡದೇ ನಿಖಿಲ್ ಕುಮಾರ ಸ್ವಾಮಿ ಸೋತರು. ತುಮಕೂರಿನಲ್ಲಿ ಅದೇ ಆಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿ ಆಗಲು ಮಾತ್ರ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋಗಿದ್ದಾರೆ. ಮೂವತ್ತು ವರ್ಷದಿಂದಲೂ ನಮಗೆ ಮಾತ್ರ ಕುಟುಂಬ ರಾಜಕಾರಣ ಎಂದು ಲೇಬಲ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ವರುಣದಲ್ಲಿ ಭವಿಷ್ಯಕ್ಕಾಗಿ ಹೊರಗೆ ಹೊಗ್ತಿದ್ದಾರೆ. ಖರ್ಗೆ ಮುಖ್ಯಮಂತ್ರಿಯಾಗಿ ಬರಲಾಗಲ್ಲ ಎಂದು ಮಗನನ್ನು ತರುತ್ತಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಅವರಿಗೂ ಮಗನ ಚಿಂತೆ ಎಂದು ಎಚ್ ಡಿಕೆ ಹೇಳಿದ್ದಾರೆ.
ಇದನ್ನೂ ಓದಿ:ಹೋರಾಟದ ಬಳಿಕವೇ ಮಹದಾಯಿ ಹಾಗೂ ಕಳಸಾ ಬಂಡೂರಿಗೆ ಡಿಪಿಆರ್ ದೊರೆಕಿದೆ: ಸಿಎಂ ಬೊಮ್ಮಾಯಿ
ರಮೇಶ್ ಜಾರಕಿಹೊಳಿ ವಿಚಾರಕ್ಕೆ ಮಾತನಾಡಿ, ಸಿಡಿ ಕತೆ ನಮಗೆ ಬೇಡ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಮರ್ಯಾದೆ ಇಲ್ಲ. ಮರ್ಯಾದಸ್ಥರು ರಮೇಶ್ ಜಾರಕಿಹೊಳಿ ಕತೆ ಓದಲಿಕ್ಕೂ ಅಗುವುದಿಲ್ಲ. ಡಿ.ಕೆ. ಶಿವಕುಮಾರ ಮನೆ ಮೇಲೆ, ಸಿಬಿಐ ಈಡಿ ದಾಳಿ ಮಾಡಿದಾಗ ಸಿಡಿ ಸಿಕ್ಕಿದ್ದರೆ ತನಿಖೆ ಮಾಡಿಸಲಿ. ಅವರದ್ದೇ ಸರ್ಕಾರ ಇದೆಯಲ್ಲ ಎಂದರು.
ಎಲ್ಲಿ ಬೇಕಾದರಲ್ಲಿ ಸ್ಪರ್ಧೆ ಮಾಡಲು ನನ್ನದು ಟೂರಿಂಗ್ ಟಾಕೀಸ್ ಅಲ್ಲ ಎಂದ ಅವರು, ಹಾಸನದ ಏಳು ಸ್ಥಾನದಲ್ಲಿ ಯಾವುದೇ ಸಮಸ್ಯೆ ಇಲ್ಲ ಫೆ.3ರಂದು ಎಲ್ಲ ಕ್ಲಿಯರ್ ಆಗುತ್ತದೆ ಎಂದರು.