ಸಕಲೇಶಪುರ: ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ದೇಶದಲ್ಲಿ ಮಹಾಘಟ್ ಬಂಧನ್ ರಚನೆಯಾಗಿದೆ. ಮಹಾಘಟ್ ಬಂಧನ್‌ನಲ್ಲಿ ನಾನು ಪ್ರಧಾನಿ ಸ್ಥಾನಕ್ಕೆ
ಆಕಾಂಕ್ಷಿಯಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬುಧವಾರ ಪ್ರಚಾರ ನಡೆಸಿದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು. ಮೋದಿ ಸಹ ಘಟ್‌ಬಂಧನ್ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ.
ಸುಮಾರು 13 ಪಕ್ಷಗಳೊಡನೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾದರೆ, ಅವರದ್ದು ಮಹಾ ಘಟ್‌ಬಂದನ್ ಅಲ್ಲವೇ ಎಂದು ಪ್ರಶ್ನಿಸಿದರು.ಹಿರಿಯ ರಾಜಕಾರಣಿ, ರಾಜಕೀಯ ಭೀಷ್ಮ ಆಡ್ವಾಣಿಯವರನ್ನು ಮೋದಿಯವರು ಮೂಲೆ ಗುಂಪು ಮಾಡಿದ್ದು, ಇದು ಮೋದಿಯವರಿಗೆ ಹಿರಿಯರ ಬಗ್ಗೆ ಇರುವ ಅಭಿಪ್ರಾಯ ತೋರಿಸುತ್ತದೆ. ಆಯಾ ಕಾಲಘಟ್ಟಗಳಲ್ಲಿ ದೇಶವನ್ನು ಆಳಿದ ಪ್ರತಿಯೊಬ್ಬ ಪ್ರಧಾನಿಯೂ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಈ ದೇಶ ಕೇವಲ ಮೋದಿಯಿಂದ ಮಾತ್ರ ಉದ್ದಾರವಾಗಿಲ್ಲ ಎಂದರು.
“ತುಮಕೂರಿನಲ್ಲಿ ನಾನು ಎರಡು ದಿನ ಮಾತ್ರ ಪ್ರಚಾರ ಮಾಡುತ್ತೇನೆ. ಉಳಿದ ಚುನಾವಣಾ ಕಾರ್ಯವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಇತರ ಮಿತ್ರರು ನೋಡಿಕೊಳ್ಳುತ್ತಾರೆ’ ಎಂದರು.