Advertisement
ಆದರೆ, ಸಾಯಿಪ್ರಕಾಶ್ ಒಬ್ಬರು ಮಾತ್ರ ಕನ್ನಡದಲ್ಲೇ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿಕೊಂಡು ಬಂದವರು. ಈಗ ಅವರು ಸೆಂಚುರಿ ನಿರ್ದೇಶಕರಾಗಿದ್ದಾರೆ. ಒಂದೆರೆಡು ವರ್ಷಗಳ ಹಿಂದೆಯೇ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಸೆಂಚುರಿ ಮುಗಿಸುತ್ತಾರೆ ಎಂಬ ಭಾವನೆ ಎಲ್ಲರಲ್ಲೂ ಇತ್ತು. ಆದರೆ, ಅವರು ಒಪ್ಪಿಕೊಂಡ ಕೆಲವು ಚಿತ್ರಗಳು ಕಾರಣಾಂತರಗಳಿಂದ ಶುರುವಾಗಲೇ ಇಲ್ಲ, ಶುರುವಾದವು ಮುಗಿಯಲಿಲ್ಲ.
Related Articles
Advertisement
ನನಗೆ ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಬಾಳೆಹಣ್ಣು ಅನ್ನೋದನ್ನ ಬಾಲೆಹನ್ನು ಅನ್ನುತ್ತಿದೆ. ಎಲ್ಲರೂ ತಿದ್ದಿದ್ದಾರೆ. ದೊಡ್ಡ ದೊಡ್ಡ ಕಲಾವಿದರು, ನಿರ್ಮಾಪಕರು ಮತ್ತು ತಂತ್ರಜ್ಞರ ಜೊತೆಗೆ ಕೆಲಸ ಮಾಡೋಕೆ ಸಿಕ್ಕಿದೆ. ಶಿವರಾಜಕುಮಾರ್ ಅವರ ಜೊತೆಗೆ 9 ಚಿತ್ರ ಮಾಡಿದ್ದೀನಿ. ಮಾಲಾಶ್ರೀ ಜೊತೆಗೆ 19, ಅನಂತ್‌ನಾಗ್ ಅವರ ಜೊತೆ 13, ರವಿಚಂದ್ರನ್ ಅವರ ಜೊತೆಗೆ 5, ಕಾಶೀನಾಥ್ ಅವರ ಜೊತೆಗೆ 3 … ನಾನೊಬ್ಬ ಪುಣ್ಯವಂತ, ಭಾಗ್ಯವಂತ, ಅದೃಷ್ಟವಂತ’ ಎನ್ನುತ್ತಾರೆ ಸಾಯಿಪ್ರಕಾಶ್.
ನಂಬಿಕೆ, ನಂಬಿಕೆ ಮತ್ತು ನಂಬಿಕೆ: ಒಬ್ಬ ಮನುಷ್ಯ 100 ಚಿತ್ರಗಳನ್ನು ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಸಾಯಿಪ್ರಕಾಶ್ ಅವರಿಗೆ ಇದು ಹೇಗೆ ಸಾಧ್ಯವಾಯಿತು ಎಂದರೆ, “ನಂಬಿಕೆ ಉಳಿಸಿಕೊಂಡೆ. ನನ್ನ ಕೆಲವು ಚಿತ್ರಗಳು ದೊಡ್ಡ ಹಿಟ್ ಆಗದಿದ್ದರೂ, ನಿರ್ಮಾಪಕರಿಗೆ ತೊಂದರೆಯಾಗಲಿಲ್ಲ. ಆ ನಂಬಿಕೆಯಿಂದಲೇ ಇಷ್ಟು ದಿನ ಬರುವುದಕ್ಕೆ ಸಾಧ್ಯವಾಯಿತು. ನಾನು ಯಾವತ್ತೂ ನನ್ನ ಮಾತನ್ನು ತಪ್ಪಿದವನಲ್ಲ.
ಹೇಳಿದ ಸಮಯ ಮತ್ತು ಬಜೆಟ್‌ಗೆ ಚಿತ್ರ ಮುಗಿಸಿಕೊಡುತ್ತಿದ್ದೆ. ನನ್ನ ಚಿತ್ರಗಳಲ್ಲಿ 80 ಪರ್ಸೆಂಟ್ ಸಕ್ಸಸ್ ರೇಟ್ ಇದೆ. ಒಂದೇ ಗುರಿ, ಒಂದೇ ದಾರಿ ಅಂತ ಇಷ್ಟು ವರ್ಷ ಬಂದಿದ್ದಕ್ಕೆ 101ನೇ ಚಿತ್ರ ಮಾಡುತ್ತಿರುವುದಕ್ಕೆ ಸಾಧ್ಯವಾಗುತ್ತಿದೆ. ನಾನು ಆಗ ನಂಬಿಕೆ ಉಳಿಸಿಕೊಂಡಿದ್ದರಿಂದಲೇ, ನಾನು ಕಷ್ಟದಲ್ಲಿದ್ದಾಗ ನನ್ನ ಸಹಾಯಕ್ಕಾದರು. ನನ್ನ ನಿರ್ದೇಶನದಲ್ಲಿ ನಟಿಸಿದ ಕಲಾವಿದರೇ, ಕರೆದು ನನಗೆ ಅವಕಾಶ ಕೊಟ್ಟರು.
ಚಂದ್ರಿಕಾ ಅವರು ಕರೆದು “ಶ್ರೀನಾಗಶಕ್ತಿ’ ಚಿತ್ರ ಮಾಡಿಸಿದರು. ಕೋಮಲ್ “ನಂದೀಶ’ ಚಿತ್ರವನ್ನು ಕೊಟ್ಟರು. ಸೆಂಟಿಮೆಂಟ್ ಚಿತ್ರ ಚೆನ್ನಾಗಿ ಮಾಡ್ತೀನಿ ಅಂತ ಮಾಲಾಶ್ರೀ ಅವರು ನನ್ನಿಂದ “ಗಂಗಾ’ ಚಿತ್ರವನ್ನು ಮಾಡಿಸಿದರು. ಅದೇ ನಂಬಿಕೆ ಇವತ್ತಿಗೂ ನನ್ನನ್ನು ಕಾಪಾಡಿಕೊಂಡು ಬಂದಿದೆ. ಇಲ್ಲದಿದ್ದರೆ ನೋಡಿ, ಎಲ್ಲಿಯ ನಾನು, ಎಲ್ಲಿಯ ಉತ್ತರ ಕರ್ನಾಟಕದ ಒಂದು ಮಠ?
ಆ ಮಠದವರ್ಯಾಕೆ ಬಂದು ನನ್ನಿಂದ ಚಿತ್ರ ಮಾಡಿಸಬೇಕು ಅಂತ ಇಲ್ಲಿಯವರೆಗೂ ಬರುತ್ತಿದ್ದರು? ನಾನು ನಂಬಿದವರಿಗೆ ಮೋಸ ಮಾಡಿಲ್ಲ. ಮೋಸ ಮಾಡುವುದಕ್ಕೆ ಬಾಬಾ ಬಿಡುವುದೂ ಇಲ್ಲ’ ಎನ್ನುತ್ತಾರೆ ಸಾಯಿಪ್ರಕಾಶ್. ಈ ಸರ ನನಗೆ ಸಾವಿರ ಕೋಟಿಗೆ ಸಮ: ಇನ್ನು ತಮ್ಮ ಮಾತುಗಳಲ್ಲಿ ಪದೇಪದೇ ಸಾಯಿಬಾಬಾರನ್ನು ನೆನಪಿಸಿಕೊಳ್ಳುವ ಸಾಯಿಪ್ರಕಾಶ್, ಅವರ ಆಶೀರ್ವಾದ ಇಲ್ಲದಿದ್ದರೆ ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ ಎನ್ನುತ್ತಾರೆ.
“ನಾನು 100 ಚಿತ್ರಗಳನ್ನು ಮಾಡಿದ್ದು ಒಂದು ಕಡೆಯಾದರೆ, ಬಾಬಾ ಅವರ ಪಾತ್ರ ಮಾಡಿದ್ದು ಇನ್ನೊಂದು ದೊಡ್ಡ ಸಾಧನೆ. ಎಷ್ಟು ಜನರಿಗೆ ಅಂತಹ ಅವಕಾಶ ಸಿಗುತ್ತೆ ಹೇಳಿ? ಆ ಚಿತ್ರದ ನೂರನೆಯ ದಿನದ ಸಮಾರಂಭವನ್ನು ಪುಟ್ಟಪರ್ತಿಯಲ್ಲಿ ಆಯೋಜಿಸುವುದಕ್ಕೆ ಪುಟ್ಟಪರ್ತಿ ಬಾಬಾ ಅವರು ಅವಕಾಶ ಕೊಟ್ಟಿದ್ದರು. ಅದೇ ದಿನ ಈ ಹಾರವನ್ನು (ಕುತ್ತಿಗೆಗೆ ಹಾಕಿದ್ದ ಹಾರವನ್ನು ತೋರಿಸುತ್ತಾ!) ಕೊಟ್ಟಿದ್ದರು. ಈ ಸರ ನನಗೆ ಸಾವಿರ ಕೋಟಿಗೆ ಸಮ.
ಆ ಚಿತ್ರ ಬಂದು ಎಷ್ಟು ವರ್ಷಗಳಾದವು, ಇವತ್ತಿಗೂ ಸಾಯಿ ಭಕ್ತರು ಬಂದು ನಮಸ್ಕಾರ ಮಾಡುತ್ತಾರೆ. ಎಷ್ಟೋ ಜನ ಬಾಬಾರನ್ನು ನನ್ನಲ್ಲಿ ನೋಡುತ್ತಾರೆ. ಇದೆಲ್ಲಾ ನಾನು ನಿರ್ದೇಶಕನಾಗಿ ಮಾಡಿದ್ದಲ್ಲ. ನನ್ನನ್ನ ನಿರ್ದೇಶಕ ಎನ್ನುವುದಕ್ಕಿಂತ ಆಧ್ಯಾತ್ಮಿಕವಾಗಿ ಗುರುತಿಸುತ್ತಾರೆ. ಅದೇ ಕಾರಣಕ್ಕೆ ಆದಿಚುಂಚನಗಿರಿ ಮಠದ ಕುರಿತು ಚಿತ್ರ ಮಾಡುವುದಕ್ಕೆ ಅವಕಾಶ ಸಿಗುತ್ತದೆ. ದೂರದ ಉತ್ತರ ಕರ್ನಾಟಕದ ಮಠದಿಂದ ಚಿತ್ರ ಮಾಡುವುದಕ್ಕೆ ಕರೆ ಬರುತ್ತದೆ.
ಅಷ್ಟು ಸಾಕು ನನಗೆ. ಯಾರು ಗುರುತಿಸಲಿಲ್ಲ ಎಂದರೂ, ಯಾವ ಪ್ರಶಸ್ತಿ ಬರಲಿಲ್ಲ ಎಂದರೂ ಬೇಸರವಿಲ್ಲ’ ಎನ್ನುತ್ತಾರೆ ಸಾಯಿಪ್ರಕಾಶ್. ಸಾವಿರದಲ್ಲಿ ಹತ್ತು ಜನರ ನೆನಪು ಇರಲ್ಲ: ಇನ್ನು ಸಾಯಿಪ್ರಕಾಶ್ ಒಂದು ಕಾಲದಲ್ಲಿ ಮೂರೂ¾ರು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದ ಬಿಝಿ ನಿರ್ದೇಶಕರಾಗಿದ್ದವರು. ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಒಂದು ವರ್ಷ ಅವರ ನಿರ್ದೇಶನದ 10 ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನೊಂದು ವರ್ಷ 9 ಚಿತ್ರಗಳು ಬಿಡುಗಡೆಯಾಗಿದ್ದವು.
ಆ ಸಂದರ್ಭ ಹೇಗಿತ್ತು ಎಂದರೆ, “ಅದೊಂದು ಸುವರ್ಣ ಯುಗ ಎಂದರೆ ತಪ್ಪಿಲ್ಲ. ಬರೀ ನನ್ನೊಬ್ಬನಿಗಲ್ಲ, ಇಡೀ ಚಿತ್ರರಂಗಕ್ಕೆ ಅದೊಂದು ಅದ್ಭುತ ಕಾಲಘಟ್ಟ. ಮುಹೂರ್ತದ ದಿನವೇ ಚಿತ್ರ ಸೋಲ್ಡ್‌ಔಟ್ ಆಗೋದು. ವಿತರಕರ ಮಧ್ಯೆ ದೊಡ್ಡ ಸ್ಪರ್ಧೆಯೇ ಇರೋದು. ಅವರೇ ಚಿತ್ರದ ಶೇ 60ರಷ್ಟು ದುಡ್ಡು ಕೊಟ್ಟುಬಿಡೋರು. ನಮ್ಮ ಇನ್ವೆಸ್ಟ್‌ಮೆಂಟ್ ಅಂತ ಇದ್ದಿದ್ದು 40 ಪರ್ಸೆಂಟ್ ಮಾತ್ರ. ಈಗ ಎಲ್ಲವೂ ನಮ್ಮದೇ.
ಪೋಸ್ಟರ್‌ಗೆ ಸಹ ನಾವೇ ಖರ್ಚು ಮಾಡಬೇಕಾದ ಸ್ಥಿತಿ ಇದೆ. ಒಂದು ಕೋಟಿ ಕೊಟ್ಟು ಕಾರ್ ತೆಗೆದುಕೊಳ್ಳುವ ನಾವು, ಅದಕ್ಕೊಬ್ಬ ಒಳ್ಳೆಯ ಡ್ರೆ„ವರ್ ಬೇಕು ಅಂತ ಯೋಚಿಸಲ್ಲ. ಚಿತ್ರರಂಗ ಸಹ ಅದೇ ತರಹ ಆಗುತ್ತಿದೆ. ಈಗ ಯಾರು, ಏನು ಬೇಕಾದರೂ ಮಾಡಬಹುದು. ಹಾಗಾಗಿ ಅಷ್ಟೊಂದು ಜನ ನಿರ್ದೇಶಕರು ಬರುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಾವಿರ ನಿರ್ದೇಶಕರು ಬಂದಿರಬಹುದು. ಅದರಲ್ಲಿ 10 ಜನರ ನೆನಪು ಇರಲ್ಲ’ ಎಂಬ ಪ್ರಶ್ನೆಯೊಂದಿಗೆ ಮಾತು ಮುಗಿಸುತ್ತಾರೆ ಸಾಯಿಪ್ರಕಾಶ್.
ಸೆಂಚ್ಯುರಿ ನಿರ್ದೇಶಕರ ಕನ್ನಡ ಚಿತ್ರಗಳು-ಕೆ. ಬಾಲಚಂದರ್: ತಪ್ಪಿದ ತಾಳ, ಬೆಂಕಿಯಲ್ಲಿ ಅರಳಿದ ಹೂವು, ಎರಡು ರೇಖೆಗಳು, ಮುಗಿಲ ಮಲ್ಲಿಗೆ ಮತ್ತು ಸುಂದರ ಸ್ವಪ್ನಗಳು
-ರಾಮ್‌ನಾರಾಯಣ್: ಭರವಿ, ಶಾಂಭವಿ, ದಾಕ್ಷಾಯಿಣಿ, ಭುವನೇಶ್ವರಿ, ಜಗದೀಶ್ವರಿ, ಕಲ್ಪನಾ
-ದಾಸರಿ ನಾರಾಯಣ ರಾವ್: ಸ್ವಪ್ನ ಮತ್ತು ಪೊಲೀಸ್ ಪಾಪಣ್ಣ
-ಕೆ. ರಾಘವೇಂದ್ರ ರಾವ್: ಶ್ರೀ ಮಂಜುನಾಥ
-ಕೋಡಿ ರಾಮಕೃಷ್ಣ: ನಾಗರಹಾವು ಸಾಯಿಪ್ರಕಾಶ್ ನಿರ್ದೇಶನದ ಕೆಲವು ಜನಪ್ರಿಯ ಚಿತ್ರಗಳು
ತಾಯಿಗೊಬ್ಬ ತರೆಲ ಮಗ, ಪೊಲೀಸನ ಹೆಂಡ್ತಿ, ಗೋಲ್ಮಾಲ್ ರಾಧಾಕೃಷ್ಣ, ಕಿತ್ತೂರಿನ ಹುಲಿ, ಲಯನ್ ಜಗಪತಿ ರಾವ್, ತವರುಮನೆ ಉಡುಗೊರೆ, ಮಾಲಾಶ್ರೀ ಮಾಮಾಶ್ರೀ, ನಗರದಲ್ಲಿ ನಾಯಕರು, ಸೋಲಿಲ್ಲದ ಸರದಾರ, ಮುದ್ದಿನ ಮಾವ, ಆತಂಕ, ಭಗವಾನ್ ಶ್ರೀ ಸಾಯಿಬಾಬ, ಹೆತ್ತ ಕರುಳು, ಗಡಿಬಿಡಿ ಅಳಿಯ, ತವರಿಗೆ ಬಾ ತಂಗಿ, ನವಶಕ್ತಿ ವೈಭವ, ತವರಿನ ಸಿರಿ, ಭಾಗ್ಯದ ಬಳೆಗಾರ, ದೇವರು ಕೊಟ್ಟ ತಂಗಿ, ಅಣ್ಣ-ತಂಗಿ, ಶ್ರೀ ನಾಗಶಕ್ತಿ, ಗಂಗಾ. * ಚೇತನ್ ನಾಡಿಗೇರ್