Advertisement

ಅಪರಿಚಿತ ಅಜ್ಜಿಯ ಕಣ್ಣುಗಳಲ್ಲಿ ನಾನು ಮೊಮ್ಮಗ !

09:11 PM Apr 14, 2019 | Sriram |

ರಾತ್ರಿ ಬಸ್‌ನಲ್ಲಿ ಬೆಂಗಳೂರಿಗೆ ಹೊರಟಿದ್ದೆ. ಆರಂಭದಲ್ಲಿ ಪಯಣ ಸುಖಕರವಾಗಿತ್ತು. ಬಸ್‌ ಯಾವಾಗ ಸುಳ್ಯ ದಾಟಿತೋ ಆಗ ಚಳಿ ಶುರುವಾಗತೊಡಗಿತು. ಹೊರಡುವ ಗಡಿಬಿಡಿಯಲ್ಲಿ ಜರ್ಕಿನ್‌ ತರಲು ಮರೆತಿದ್ದೆ.

Advertisement

ಬಸ್‌ ಸಂಪಾಜೆ ದಾಟಿ ಘಾಟಿ ಏರುತ್ತಿದ್ದಂತೆ ಚಳಿಯ ತೀವ್ರತೆಯೂ ಏರಿ ನಡುಗತೊಡಗಿದೆ. ಟೀ ಶರ್ಟ್‌ ಮೇಲೆ ಶರ್ಟ್‌ ಹಾಕಿಕೊಂಡರೂ ಪ್ರಯೋಜನವಾಗಲಿಲ್ಲ. ಮಡಿಕೇರಿ ತಲುಪಿದ ಮೇಲೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಪ್ರಯಾಣ ಅಸಹನೀಯವಾಗುತ್ತಿತ್ತು. ಏನೂ ಮಾಡಿದರೂ ಚಳಿ ಕಡಿಮೆಯಾಗುತ್ತಿಲ್ಲ. ಬಸ್‌ ಇಳಿದು ಬಿಡಲೆ ಎನ್ನುವಷ್ಟರ ಮಟ್ಟಿಗೆ ಕಂಗಾಲಾಗಿದ್ದೆ. ಸುತ್ತಲೂ ನೋಡಿದೆ. ಎಲ್ಲರೂ ಬೆಚ್ಚನೆ ಮಲಗಿ ಸಕ್ಕರೆ ನಿದ್ದೆಯಲ್ಲಿದ್ದರು. ಅಷ್ಟರಲ್ಲಿ ನನ್ನನ್ನೇ ಗಮನಿಸುತ್ತಿದ್ದ ಪಕ್ಕದ ಸೀಟಿನಲ್ಲಿ ಮಲಗಿದ್ದ ಅಜ್ಜಿ ನಿಧಾನವಾಗಿ ಎದ್ದು ಕುಳಿತು “ತುಂಬಾ ಚಳಿ ಆಗ್ತಾ ಇದೆಯಾ?’ ಎಂದು ಕಕ್ಕುಲತೆಯಿಂದ ವಿಚಾರಿಸಿದರು. ಅವರೇನೂ ನನಗೆ ಪರಿಚಿತರಲ್ಲ. ಬಸ್‌ ಹತ್ತುವಾಗ ಅವರನ್ನು ನೋಡಿ ಮುಗುಳ್ನಕ್ಕಿದ್ದೆ ಅಷ್ಟೇ.

“ಹೌದಜ್ಜಿ ಸಿಕ್ಕಾಪಟ್ಟೆ ಚಳಿ’ ಎಂದೆ. “ಒಂದು ನಿಮಿಷ ಇರು’ ಎಂದವರೇ ತಮ್ಮ ಬಾಗ್‌ನಿಂದ ರಗ್‌ನಂತಹ ದಪ್ಪನೆಯ ಬೆಡ್‌ಶೀಟ್‌ ತೆಗೆದು ನನ್ನತ್ತ ಚಾಚಿದರು. “ಹೊದ್ದುಕೋ ಚಳಿ ಕಡಿಮೆಯಾಗುತ್ತದೆ’ ಎಂದರು.

“ಥಾಂಕ್ಸ್‌ ಅಜ್ಜಿ ‘ಎಂದು ಹೇಳಿ ಮೈಗೆ ಸುತ್ತಿಕೊಂಡೆ. “ನಿನ್ನ ನೋಡುವಾಗ ನನ್ನ ಮೊಮ್ಮಗನ ನೆನಪಾಯಿತು’ ಎಂದರು ಅಜ್ಜಿ ಸೀಟಿಗೊರಗುತ್ತ. ಅಪರಿಚಿತನಲ್ಲೂ ತಮ್ಮವನನ್ನು ಕಂಡ ಅಜ್ಜಿಯ ಔದಾರ್ಯಕ್ಕೆ ಸಾಟಿ ಇಲ್ಲ ಎನಿಸಿತು.

– ರಮೇಶ್‌ ಬಳ್ಳಮೂಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next