ನನ್ನ ಚಾಕ್ಲೇಟ್ ಹೀರೋ…
ಎರಡು ವಾರಗಳಿಂದ ಕಾಲೇಜಿನಲ್ಲಿ ನಿನ್ನ ಕಣ್ಣು ತಪ್ಪಿಸಿ, ಮಾತಿಗೂ ಸಿಗದೆ, ಹುಡುಗೀರ ಹಿಂಡಿನಲ್ಲಿಯೇ ಸದಾ ನಾನೇಕೆ ಓಡಾಡ್ತಿದೀನಿ ಗೊತ್ತಾ? ನಾನು ನಿಂಗೆ ಮೋಸ ಮಾಡೆª ಎಂಬ ಭಾವನೆ ನಿನ್ನ ಕಣ್ಣ ತುಂಬ ಸುಳಿ ತಿರುಗುತ್ತಿದೆ ಎಂಬುದು ಅರಿತರೂ, ನಿನ್ನೆದುರು ಬಂದು ಎಲ್ಲವನ್ನೂ ಹೇಳುವ ಪರಿಸ್ಥಿತೀಲಿ ನಾನಿಲ್ಲ. ಅದಕ್ಕೇ ಈ ಲೆಟರ್ ಬರೀತಿದೀನಿ. ಕಾಲೇಜು ಮೆಟ್ಟಿಲು ಹತ್ತಿದಾಕ್ಷಣ ಮೊಟ್ಟಮೊದಲಿಗೆ ಅಪ್ಪ, “ಹುಡುಗ್ರ ಜೊತೆ ಮಾತಾಡ್ಬೇಡ’ ಎಂಬ ಲಕ್ಷ್ಮಣರೇಖೆ ಎಳೆದಿದ್ದ. ಅಮ್ಮ “ನೀನಾಯ್ತು, ನಿನ್ನ ಓದಾಯ್ತು. ಚೆಲ್ಲುಚೆಲ್ಲಾಗಿ ಆಡ್ಬೇಡ’ ಎಂಬ ಕಟ್ಟಪ್ಪಣೆ ವಿಧಿಸಿದ್ದಳು.
ಬೊಗಸೆ ಕಂಗಳಲ್ಲಿ ಅಸಂಖ್ಯ ಕನಸುಗಳನ್ನು ತುಂಬಿಕೊಂಡು ಕಾಲೇಜು ಪ್ರವೇಶಿಸಿದ ನನಗೆ ಮೊದಲು ಪರಿಚಯವಾದವನೇ ನೀನು. ಇಡೀ ಕಾಲೇಜಿನಲ್ಲಿ ಚಾಕ್ಲೇಟ್ ಹೀರೋ ಎನಿಸಿಕೊಂಡಿದ್ದ ನೀನು, ನನ್ನನ್ನೇ ಯಾಕೆ ಪ್ರಪೋಸ್ ಮಾಡೆª ಎಂದು ನನಗೀಗಲೂ ಗೊತ್ತಿಲ್ಲ. ನಿನ್ನ ಮುದ್ದು ಮುದ್ದಾದ ಮಾತುಗಳು, ಬೇಸರದ ಘಳಿಗೆಗಳಲ್ಲಿ ಜೇನ ದನಿಯಿಂದ ಹೇಳುವ ಉರ್ದು ಗಜಲ್ಲುಗಳು, ನಕ್ಕಾಗ ಉಂಟಾಗುವ ಕೆನ್ನೆ ಮೇಲಿನ ಗುಳಿ ತುಂಬಾ ತುಂಬಾ ಇಷ್ಟವಾದವು. ನನ್ನೆಲ್ಲ ವೇದನೆಗಳಿಗೆ ನೀನು ಮಡಿಲಾಗುತ್ತಿದ್ದೆ, ನಾನು ನಿನ್ನ ಮಡಿಲ ಮಗು. “ಪ್ರೀತೀನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ…’ ಎಂಬ ಹಳೆಯ ಚಿತ್ರದ ಗೀತೆ ಬರುತ್ತಲ್ಲ ಹಾಗಿತ್ತು ನಮ್ಮಿಬ್ಬರ ಕಾಲೇಜಿನ ದಿನಗಳು.
ಹುಡ್ಗಿàರಿಗೆ ಸ್ವಾಂತಂತ್ರ್ಯ ಎಲ್ಲಿದೆ ಕಣೋ? ನಾವು ಹುಟ್ಟಿನಿಂದ ಸಾವಿನವರೆಗೂ ಅವಲಂಬಿಗಳಾಗೇ ಬದುಕ್ತೀವಿ. ತಂದೆ- ತಾಯಿಗಳ, ಕಟ್ಟಿಕೊಂಡ ಗಂಡನ, ಹುಟ್ಟಿದ ಮಕ್ಕಳ ಕನಸು, ಹಂಬಲ, ಏಳಿಗೆಗಳಿಗೆ ಬೆಂಬಲವಾಗಿರುವದಷ್ಟೇ ನಮಗೆ ಗೊತ್ತು. ಮೊನ್ನೆ ಕಾಲೇಜು ಬಿಟ್ಟಿದ್ನಲ್ಲ, ಅಂದು ನನ್ನನ್ನ ನೋಡೋಕೆ ಗಂಡಿನ ಕಡೆಯೋರು ಬಂದಿದ್ರು. ನನ್ನನ್ನ ಒಂದ್ಮಾತು ಕೇಳದೆ ತಂದೆ ಒಪ್ಪಿಕೊಂಡೂ ಬಿಟ್ರಾ. ಅಮ್ಮನನ್ನ ಎಷ್ಟು ಗೋಗರೆದು ಮದುವೆ ಬೇಡಾ ಅಂದ್ರೂ ನನ್ನ ಹಠ ಏನೂ ನಡೀಲಿಲ್ಲ. ಅಪ್ಪ- ಅಮ್ಮನ ಕಣ್ಣೀರು ನನ್ನ ಸಮ್ಮತಿಗೆ ನಾಂದಿ ಹಾಡಿತು. ಅಂದಿನಿಂದ ಇಂದಿನವರೆಗೆ ನಿನಗೆ ಹ್ಯಾಗೆ ಹೇಳ್ಳೋದು, ಜೀವಕ್ಕೆ ಜೀವವಾದ ನಿನ್ನ ಬಿಟ್ಟಿರಲಿ ಹೇಗೆ, ನಾವಿಬ್ರೂ ಸೇರೋಕೆ ಆಗಲ್ಲ ಅನ್ನೋ ಸತ್ಯ ನಿನಗೆ ಅರ್ಥ ಮಾಡಿಸೋದು ಹೇಗೆ ಎಂಬ ಸಂಕಟದಲ್ಲಿಯೇ ನರಳಿದ್ದೇನೆ.
ನಾನು ಕೇಳಿದ ಪ್ರತಿಯೊಂದನ್ನು ನನ್ನಿಷ್ಟದ ಪ್ರಕಾರವೇ ಕೊಡಿಸಿದ ನನ್ನ ತಂದೆ ಬದುಕಿನ ಅತಿ ದೊಡ್ಡ ಘಟ್ಟದಲ್ಲಿ ನನ್ನ ಇಷ್ಟವನ್ನೇ ಕೇಳಲಿಲ್ಲ. ಅವರಿಗೂ ತಲೆಯ ಹೊರೆ ಇಳಿದರೆ ಸಾಕಪ್ಪಾ ಅಂತನಿಸಿರಬೇಕು. ಗೆಳೆಯಾ… ಈ ಪತ್ರ ಬದುಕಿನಲ್ಲಿ ನಿನಗೆ ಬರೆಯುವ ಕೊನೆಯ ಪತ್ರವಾಗಿರಬಹುದು. ಇನ್ನು ನನ್ನ ಕಾಲೇಜಿಗೂ ವಿದಾಯ ಹೇಳುವ ಘಳಿಗೆ ಬಂದಿದೆ. ನಾನು ನೀಡುವ ಹಾರೈಕೆಗಳು, ಸಲಹೆಗಳು ನಿನಗೆ ಹಾಸ್ಯಾಸ್ಪದ ಅನ್ನಿಸಬಹುದು. ನಾನೇ ನಿರ್ಮಿಸಿದ ಪ್ರೀತಿಯ ಗೋಪುರವನ್ನು ಬೀಳಿಸಿ ಹೋಗುತ್ತಿದ್ದೇನೆ. ನನ್ನ ಅನಿವಾರ್ಯತೆ ನಿನಗೆ ಅರ್ಥವಾಗಬಹುದು ಎಂದುಕೊಂಡಿದ್ದೇನೆ. ದಯವಿಟ್ಟು ನನ್ನನ್ನು “ಮೋಸದ ಹುಡುಗಿ’ ಎಂದುಕೊಳ್ಳಬೇಡ. ಕ್ಷಮೆ ಇರಲಿ…
– ನಾಗೇಶ್ ಜೆ. ನಾಯಕ, ಬೈಲಹೊಂಗಲ