ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಅತೃಪ್ತರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಹರಡುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಚಿವಾಕಾಂಕ್ಷಿಗಳ ದಂಡು ಹೆಚ್ಚಾಗುತ್ತಿದೆ. ಈಗಾಗಲೇ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿರುವ ಅನೇಕ ಶಾಸಕರು ತಾವೂ ಸಚಿವಾಕಾಂಕ್ಷಿಗಳು ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಪ್ರಮುಖವಾಗಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಟಾರ್, ಕುಷ್ಠಗಿ ಶಾಸಕ ಅಮರೇಗೌಡ ಬಯ್ನಾಪುರ, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಸೇರಿದಂತೆ ಅನೇಕ ಅತೃಪ್ತ ಶಾಸಕರು ಸಂಪುಟದಲ್ಲಿ ಸೇರಲು ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಂಪುಟ ಪುನಾರಚನೆ ಮಾಡಲು ನಿರ್ಧರಿಸಿದರೆ, ಅರ್ಧ ಡಜನ್‌ಗೂ ಹೆಚ್ಚು ಹಾಲಿ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದ್ದು, ಅವರ ಬದಲು ತಮಗೆ ಜಿಲ್ಲೆ ಹಾಗೂ ಜಾತಿ ಪ್ರಾನಿನಿಧ್ಯದ ಆಧಾರದಲ್ಲಿ ಸಚಿವ ಸ್ಥಾನ ನೀಡುವಂತೆ ಅನೇಕ ಶಾಸಕರು ಒತ್ತಡ ಹೇರುವ ಪ್ರಯತ್ನ ಮುಂದುವರೆಸಿದ್ದಾರೆ. ಬುಧವಾರ ಶಾಸಕಾಂಗ ಪಕ್ಷದ ಸಭೆ ಇರುವುದರಿಂದ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.