ಮನದ ಅಷ್ಟದಿಕ್ಕುಗಳಲ್ಲೂ ಈಗ ಜಾತ್ರೆಯ ಸಂಭ್ರಮ. ಮುಂದಿನ ವರ್ಷದ ದುಗುಡದ ಸಂಕಟವನ್ನು ನೆನೆಯಲು ನಾನೀಗ ತಯಾರಿಲ್ಲ. ಸದ್ಯಕ್ಕೆ ನಿಮ್ಮನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಆಸೆಯಾಗ್ತಿದೆ. ಬಂದೇ ಬರುವೆ ಸದ್ಯದಲ್ಲೇ…
ಶೋನಾ,
ಮೊದಲೆಲ್ಲಾ ಆಗಾಗ ಹರಟುತ್ತಿದ್ದ ನಾವು ಈಗ ಖಯಾಲಿಯೇ ಆದಂತೆ ಒಬ್ಬರನ್ನೊಬ್ಬರು ತುಂಬಾ ಮಿಸ್ ಮಾಡ್ಕೊಳ್ತೀವಲ್ಲ, ಕಾರಣವೇನಿದ್ದೀತೆಂಬ ಪ್ರಶ್ನೆಯನ್ನು ಬಿಡಿಸಲಾಗದ ಈ ನಂಟೇ ಸೂಕ್ತ ಉತ್ತರ ಎಂಬುದು ನನ್ನ ತರ್ಕ. ಜಗತ್ತಿನಲ್ಲಿ ಪರಿಪೂರ್ಣರು ಎಂದು ಯಾರೂ ಇಲ್ಲ ಎಂಬ ಸತ್ಯವನ್ನು ಮರೆತೇ ಪ್ರೇಮಿಗಳು ದೂರಾಗ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ನಿರೀಕ್ಷೆ ಇರಬೇಕು, ಇಲ್ಲ ಅಂತಲ್ಲ. ಆದರೆ, ಈ ನಿರೀಕ್ಷೆಗಳದ್ದೇ ಕಾಲ್ಪನಿಕ ಅರಮನೆ ಕಟ್ಟಿಕೊಂಡು ನಾನು ಹೇಳಿದಂತೆಯೇ ಕೇಳಬೇಕು ಅನ್ನೋ ಧೋರಣೆಯಿಂದಲೇ ಸಣ್ಣಾತಿಸಣ್ಣ ವಿಚಾರಕ್ಕೂ ಕಂದಕ ಏರ್ಪಡುತ್ತದೆಂಬ ಅನಿಸಿಕೆ ನನ್ನದು. ನಾನಾಗಾಗ ಇಂಥ ಸಣ್ಣ ವಿಚಾರಕ್ಕೆ ಕಾಲು ಕೆದರಿ ನಿಮಗೆ ನೋವುಂಟು ಮಾಡಿದಾಗಲೂ ಮತ್ತೆ ನಿಮ್ಮ ಪ್ರೀತಿಯ ಹೊಳೆಯೇ ಅಂತರ ಕಡಿಮೆಗೊಳಿಸಿ, ಪ್ರೀತಿ ಹೆಚ್ಚಿಸುವುದು ಎಂದು ಒಪ್ಪಬಲ್ಲೆ.
ಯಾರ ಜೊತೆ ತೀರಾ ಜಗಳವಾಡುತ್ತೇವೋ, ಅವರಿಂದಲೇ ಮುದ್ದಿಸಿಕೊಳ್ಳುವುದೂ ಜಾಸ್ತಿಯಲ್ವಾ? ಕಡೇ ಪಕ್ಷ ನೀವು ನೋವಲ್ಲಿರುವಾಗ ಎಂಥ ಖಾಸಗಿ ಗುಟ್ಟನ್ನಾದರೂ ಹಂಚಿ ಹಗುರಾಗಬೇಕು ಎಂದು ನಿರ್ಣಯಿಸಿದಾಗ ಕಾಣುವ ಮೊದಲ ಮುಖ ನನ್ನದು ಎಂದು ಹೇಳಿದರೂ ಸಾಕು. ಅಷ್ಟಕ್ಕೂ ಇವಿಷ್ಟೂ ದಿನ ನಿಮ್ಮನ್ನು ನೆನೆಯಲು ಹೃದಯಕ್ಕೆ ಯಾವ ಕಾರಣವೂ ಬೇಕಿರಲಿಲ್ಲ ಎಂಬುದು ನಿಜ.
ಅದಷ್ಟು ದಿನ ಇಷ್ಟೊಂದು ದೂರ ಹೇಗಿರುವುದು ಎಂದು ನೀವಂದು ಕೇಳಿದ ಪ್ರಶ್ನೆಯೇ ಇಂದು ಅಪ್ರಸ್ತುತವೆನಿಸಿದೆ. ಆ ಎಲ್ಲ ದಿನಗಳನ್ನು ಕಳೆದು ಮತ್ತೆ ಹತ್ತಿರಾಗುವುದರಲ್ಲಿದ್ದೇವೆ. ಇದಿಷ್ಟೂ ದಿನ ನಿಮ್ಮನ್ನು ಕ್ಷಣಕ್ಷಣಕ್ಕೂ ನೆನೆಸಿಕೊಳ್ಳುತ್ತಿದ್ದೆ. ನೀವು ಅಸೌಖ್ಯದಿಂದ ಸಂಕಟಪಡುವಾಗೆಲ್ಲ ಒಬ್ಬೊಬ್ಬನೇ ಕೂತು ಅತ್ತಿದ್ದೂ ಇದೆ. ಆರೋಗ್ಯ ಕೈ ಕೊಟ್ಟಾಗ ನಿಮ್ಮನ್ನು ಎದೆಯ ಮೇಲೆ ಮಲಗಿಸಿಕೊಂಡು ಪುಟ್ಟ ಮಗುವಿನಂತೆ ಆರೈಕೆ ಮಾಡಬೇಕೆನ್ನಿಸಿದ್ದೂ ಇದೆ. ಎಂಥ ತುರ್ತಿನ ಕೆಲಸವಿದ್ದರೂ ಬದಿಗೊತ್ತಿ ನಿಮ್ಮನ್ನು ವಿಚಾರಿಸಿಕೊಂಡಿದ್ದಿದೆ. ಆದರೆ, ಕೋಪದಿಂದ ಅಹಂಕಾರದಿಂದ ನಿಮ್ಮಿಂದ ಎರಡು ದಿನ ದೂರವಿದ್ದುದಕ್ಕೆ ಕ್ಷಮೆ ಕೇಳಬೇಕು. ನನ್ನನ್ನು ಬಿಟ್ಟು ನೀವು ಬೇರ್ಯಾರನ್ನೂ ನೋಡಬಾರದು, ಬೇರ್ಯಾರನ್ನೂ ನನ್ನೆದುರು ಹೊಗಳಾºರ್ದು, ನಿಮ್ಮ ಕಣ್ಣಲ್ಲಿ ನಾನೊಬ್ನೇ ಇರ್ಬೇಕು, ನಿಮ್ಗೆ ನನ್ನಷ್ಟು ಪ್ರೀತಿ ಬೇರ್ಯಾರೂ ಕೊಡಾºರ್ದು. ನೀವೂ ಅಷ್ಟೇ… ನನ್ನ ಇಷ್ಟಪಡೋವಷ್ಟು ಬೇರ್ಯಾರನ್ನೂ ಮೆಚ್ಚಬಾರ್ದು, ಬೇರೆ ಯಾರನ್ನಾದ್ರೂ ನೋಡಿ ಹಲ್ಲು ಕಿಸಿದ್ರೆ ಕೂಡಲೇ ಅವರೆಲ್ಲರನ್ನ ಮರೆಸುವಷ್ಟು ನಾನು ನಿಮ್ಮನ್ನ ಮುದ್ದು ಮಾಡ್ಬೇಕು ಅಂತೆಲ್ಲ ಕನಸುಗಳು. ಹುಡುಗರ ವಿಷಯದಲ್ಲಿ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ ನಾನು. ಈ ನನ್ನ ನಡೆಯಿಂದ ನಿಮಗೇನೇ ಬೇಜಾರಾದ್ರೂ ದಯವಿಟ್ಟು ಕ್ಷಮಿಸಿಬಿಡಿ.
ಈಗ ತಿರುಗಿ ಮತ್ತೆ ಊರಿಗೆ ಮರಳಿದ್ದೀರಿ. ನೀವು ಬರುವ ಜಾಗ ಮೊದಲಿನಂತಿಲ್ಲ. ಅಲ್ಲಿ ನಾನಿಲ್ಲ. ನಂಗೆ ಗೊತ್ತು ನನ್ನ ತುಂಬಾ ನೆನೀತೀರಿ ಅಂತ. ನಾವಿಬ್ಬರೂ ಜೊತೆಗೆ ಕಳೆದ ಜಾಗಗಳು, ನೀವು ನನ್ನನ್ನು ಗೇಲಿ ಮಾಡಿ ನಕ್ಕ ಕ್ಷಣಗಳು, ನಮ್ಮಿಬ್ಬರ ಸಣ್ಣಾತಿಸಣ್ಣ ವಿಷಯದ ಕಿತ್ತಾಟಗಳು, ನೀವು ನನ್ನ ಕದ್ದುಮುಚ್ಚಿ ನೋಡುತ್ತಿದ್ದ ಪರಿ, ನಿಮ್ಮ ಹಾವಭಾವ, ನಾ ಬರುವುದಕ್ಕೂ ಮುನ್ನ ಯಾರಿಗೂ ತಿಳಿಯದಂತೆ ಬಚ್ಚಿಟ್ಟ ನೀವು ಬಿಡಿಸಿದ ಸುಂದರ ಚಿತ್ರ, ನಿಮ್ಮ ನೃತ್ಯ ಭಂಗಿ, ನನ್ನನ್ನು ಕೆಣಕಿ ನೀವು ಪಡುತ್ತಿದ್ದ ಸಂತೋಷ, ನಿಮ್ಮ ವಾರೆನೋಟ, ಕಣ್ಣಂಚಿನ ತುಂಟತನ ಎಲ್ಲಾ ನೆನೆದರೆ ಈಗಲೂ ಮೂಕರೋದನೆಯನ್ನು ಅನುಭವಿಸುತ್ತೇನೆ.
ಅಂದು ನೀವು ನನ್ನನ್ನು ಬಿಟ್ಟು ದೂರದೂರಿಗೆ ಹೋದ ದಿನ ಸಂತೆಯಲ್ಲಿ ತಾಯಿಯನ್ನು ಕಳಕೊಂಡ ಪುಟ್ಟ ಮಗುವಿನ ಥರ ಬಿಕ್ಕಿ ಬಿಕ್ಕಿ ಅತ್ತಿದ್ದೆ. ರಾತ್ರಿಯ ನಿಮ್ಮ ಪಯಣ ನಿಮಿಷ ನಿಮಿಷಕ್ಕೂ ನಿಮ್ಮನ್ನು ನನ್ನಿಂದ ದೂರದೂರಕ್ಕೆ ಹೊತ್ತೂಯ್ದಂತೆ ಭಾಸವಾಗುತ್ತಿತ್ತು. ಅದೇ ನೀವೀಗ ಮತ್ತೆ ಹತ್ತಿರಾಗುವ ಸಮಯ ಬಂದಿದೆ. ಮನದ ಅಷ್ಟದಿಕ್ಕುಗಳಲ್ಲೂ ಈಗ ಜಾತ್ರೆಯ ಸಂಭ್ರಮ. ಮುಂದಿನ ವರ್ಷದ ದುಗುಡದ ಸಂಕಟವನ್ನು ನೆನೆಯಲು ನಾನೀಗ ತಯಾರಿಲ್ಲ. ಸದ್ಯಕ್ಕೆ ನಿಮ್ಮನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಆಸೆಯಾಗ್ತಿದೆ. ಬಂದೇ ಬರುವೆ ಸದ್ಯದಲ್ಲೇ…
– ಅರ್ಜುನ್ ಶೆಣೈ